ADVERTISEMENT

ಹಾವೇರಿ: 21ರವರೆಗೆ ಲಾಕ್‌ಡೌನ್ ವಿಸ್ತರಣೆ

ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶ:

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 15:25 IST
Last Updated 13 ಜೂನ್ 2021, 15:25 IST
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ 
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ    

ಹಾವೇರಿ: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಪರಿಷ್ಕೃತ ಆದೇಶದ ಅನ್ವಯ ಜಿಲ್ಲೆಯಲ್ಲಿ ಜೂನ್‌ 14ರಿಂದ ಜೂನ್‌ 21ರವರೆಗೆ ಲಾಕ್‌ಡೌನ್‌ ವಿಸ್ತರಿಸಲಾಗಿದೆ. ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ‘ವಾರಾಂತ್ಯದ ಕರ್ಫ್ಯೂ’ ಜಾರಿಯಲ್ಲಿರುತ್ತದೆ. ಅತ್ಯಗತ್ಯ ಹಾಗೂ ತುರ್ತು ಚಟುವಟಿಕೆ ಹೊರತುಡಿಸಿ ಇನ್ನುಳಿದ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಅಗತ್ಯ ವಸ್ತುಗಳ ಸೇವೆ: ಅತ್ಯಗತ್ಯವುಳ್ಳ ಹಾಲು, ಆಸ್ಪತ್ರೆ, ಔಷಧ ಅಂಗಡಿ ಮತ್ತು ಪಡಿತರ ಆಹಾರ ಧಾನ್ಯ, ಗೃಹ ಬಳಕೆ ಅಡುಗೆ ಅನಿಲ ಸಾಗಾಣಿಕೆ ಮತ್ತು ವಿತರಣೆ ಹಾಗೂ ಅಗತ್ಯ ಸೇವೆಗಳಾದ ಆಂಬುಲೆನ್ಸ್‌, ಅಗ್ನಿಶಾಮಕ, ಪೆಟ್ರೋಲ್ ಪಂಪ್, ಆಮ್ಲಜನಕ ಉತ್ಪಾದನಾ ಘಟಕ, ಎಟಿಎಂ, ಬ್ಯಾಂಕ್, ಅಂಚೆ ಕಚೇರಿ, ವಿಮಾ ಸಂಸ್ಥೆ, ಟೆಲಿಕಾಂ, ಇಂಟರ್ ನೆಟ್ ಹಾಗೂ ಖಾಸಗಿ ಭದ್ರತಾ ಸೇವೆಗಳಲ್ಲಿ ತೊಡಗಿರುವ ಅಧಿಕಾರಿ/ ಸಿಬ್ಬಂದಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿ ಅನುಮತಿ ನೀಡಲಾಗಿದೆ.

ADVERTISEMENT

ಕಟ್ಟಡ ನಿರ್ಮಾಣ: ಕಟ್ಟಡ ನಿರ್ಮಾಣ ಕಾಮಗಾರಿಗಳ ಸ್ಥಳದಲ್ಲಿಯೇ ವಾಸವಿದ್ದ ಕಟ್ಟಡ ಕೆಲಸಗಾರರಿಂದ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅನುಮತಿ ಇದೆ. ಸ್ಥಳದಲ್ಲಿಯೇ ವಾಸಿಸುವ ಸಿಬ್ಬಂದಿ, ಕೆಲಸಗಾರರನ್ನು ಉಪಯೋಗಿಸಿಕೊಂಡು ಜೀವನಾವಶ್ಯಕ ವಸ್ತುಗಳನ್ನು ತಯಾರಿಸುವ, ನಿರಂತರ ಕಾರ್ಯಾಚರಣೆ ನಡೆಸುವ ಉತ್ಪಾದನಾ ಘಟಕಗಳು ಮತ್ತು ಕಾರ್ಖಾನೆಗಳಿಗೆ ಅನುಮತಿ ನೀಡಲಾಗಿದೆ.

ಕಟ್ಟಡ ನಿರ್ಮಾಣ ಮತ್ತು ದುರಸ್ತಿಗೆ ಸಂಬಂಧಿಸಿದ ಸಾಮಗ್ರಿಗಳೊಂದಿಗೆ ವ್ಯವಹರಿಸುವ ಅಂಗಡಿಗಳು, ಸಂಸ್ಥೆಗಳು ವಿಶೇಷವಾಗಿ ಸಿಮೆಂಟ್ ಮತ್ತು ಉಕ್ಕು ಮಾರಾಟಗಾರರಿಗೆ ಅನುಮತಿ ನೀಡಲಾಗಿದೆ.

ಹಣ್ಣು–ತರಕಾರಿ ಖರೀದಿ: ಆಹಾರಕ್ಕೆ ಸಂಬಂಧಿಸಿದ ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೇರಿ ಮತ್ತು ಹಾಲಿನ ಉತ್ಪನ್ನಗಳು, ಪಶು ಆಹಾರ, ಮೇವು ವ್ಯವಹರಿಸುವ ಅಂಗಡಿಗಳಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಸಾರ್ವಜನಿಕ ವಿತರಣಾ ವ್ಯವಸ್ಥೆ ಅಂಗಡಿಗಳಿಗೆ, ಮದ್ಯದಂಗಡಿ, ಚಿಲ್ಲರೆ ಅಂಡಿಗಳಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

ರಫ್ತುಗಳಲ್ಲಿ ನೇರವಾಗಿ ತೊಡಗಿರುವ ಕೈಗಾರಿಕಾ ಇಲಾಖೆಯಿಂದ ಹೊರಡಿಸಲಾಗುವ ಪಟ್ಟಿಯಲ್ಲಿನ ಘಟಕಗಳು, ಸಂಸ್ಥೆಗಳಿಗೆ ಕೋವಿಡ್ ಮಾರ್ಗಸೂಚಿ ಅನುಸರಿಸಿ ಶೇ 30ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ವಿನಾಯಿತಿ ನೀಡಿದೆ. ಈ ಅವಧಿಯಲ್ಲಿ ಕೋವಿಡ್-19 ಮಾರ್ಗಸೂಚಿಯನ್ವಯ ಅಂತ್ಯ ಸಂಸ್ಕಾರಕ್ಕೆ 5 ಜನರಿಗೆ ಮೀರದಂತೆ ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.