ADVERTISEMENT

ಹಾವೇರಿ | ಬಡವರ ಸೂರು ಕಳಪೆ: ಲೋಕಾಯುಕ್ತ ತನಿಖೆ

ರಾಜೀವ್‌ ಗಾಂಧಿ ವಸತಿ ನಿಗಮದ ₹ 63 ಕೋಟಿ ಯೋಜನೆ | 1,112 ಮನೆಗಳ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 2:43 IST
Last Updated 30 ಅಕ್ಟೋಬರ್ 2025, 2:43 IST
ಹಾವೇರಿ ನಾಗೇಂದ್ರನಮಟ್ಟಿಯ ಶಾಂತಿನಗರದಲ್ಲಿ ನಿರ್ಮಿಸುತ್ತಿರುವ ಜಿ+1 ಮಾದರಿಯ ಮನೆಗಳು
ಹಾವೇರಿ ನಾಗೇಂದ್ರನಮಟ್ಟಿಯ ಶಾಂತಿನಗರದಲ್ಲಿ ನಿರ್ಮಿಸುತ್ತಿರುವ ಜಿ+1 ಮಾದರಿಯ ಮನೆಗಳು   

ಹಾವೇರಿ: ಇಲ್ಲಿಯ ನಾಗೇಂದ್ರನಮಟ್ಟಿಯ ಶಾಂತಿನಗರದಲ್ಲಿ ಬಡವರ ಸೂರಿಗಾಗಿ ನಿರ್ಮಿಸುತ್ತಿರುವ 1,112 ಮನೆಗಳ ನಿರ್ಮಾಣ ಕಳಪೆ ಆಗಿರುವ ಆರೋಪ ವ್ಯಕ್ತವಾಗಿದ್ದು, ಈ ಬಗ್ಗೆ ಲೋಕಾಯುಕ್ತರು ತನಿಖೆ ಆರಂಭಿಸಿದ್ದಾರೆ.

ನಾಗೇಂದ್ರನಮಟ್ಟಿಯಲ್ಲಿ ತಾತ್ಕಾಲಿಕವಾಗಿ ವಾಸವಿದ್ದ ಸುಡುಗಾಡು ಸಿದ್ಧರ ಸಮುದಾಯದವರು ಹಾಗೂ ಬಡವರಿಗೆ ಅನುಕೂಲವಾಗಲೆಂದು ರಾಜೀವ್ ಗಾಂಧಿ ವಸತಿ ನಿಗಮದಿಂದ ₹ 63 ಕೋಟಿ ವೆಚ್ಚದಲ್ಲಿ ‘ಜಿ+1’ ಮಾದರಿಯ ಮನೆಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ.

‘ಕಾಮಗಾರಿ ಗುತ್ತಿಗೆ ಪಡೆದಿರುವ ಸಿಂಧನೂರಿನ ಎ.ಜೆ.ಜೆ. ಕನ್‌ಸ್ಟ್ರಕ್ಷನ್ ಕಂಪನಿಯವರು, ಟೆಂಡರ್‌ ನಿಯಮಗಳನ್ನು ಉಲ್ಲಂಘಿಸಿ ಕಳಪೆ ಕಾಮಗಾರಿ ಮಾಡಿದ್ದಾರೆ’ ಎಂದು ಆರೋಪಿಸಿ ಶಕ್ತಿ ಕ್ಯಾತಣ್ಣನವರ ಎಂಬುವವರು ಲೋಕಾಯುಕ್ತರ ಮುಖ್ಯ ಕಚೇರಿಗೆ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ಆರಂಭಿಸಿರುವ ಲೋಕಾಯುಕ್ತರು, ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಾಂತ್ರಿಕ ವಿಭಾಗದ ಮುಖ್ಯ ಎಂಜಿನಿಯರ್ ಜೈಬೋರೇಗೌಡ ಎಚ್‌.ಎಸ್. ನೇತೃತ್ವದ ತಂಡಕ್ಕೆ ಸೂಚಿಸಿತ್ತು.

ADVERTISEMENT

ಹಾವೇರಿಗೆ ಅ. 27ಕ್ಕೆ ಬಂದಿದ್ದ ತಾಂತ್ರಿಕ ತಂಡ, ಮೂರು ದಿನ ನಗರದಲ್ಲಿ ಮೊಕ್ಕಾಂ ಹೂಡಿ ಕಾಮಗಾರಿ ಪರಿಶೀಲನೆ ನಡೆಸಿದೆ. ಜಿ+1 ಮಾದರಿಯ ಏಳು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ 1,112 ಮನೆಗಳನ್ನು ನಿರ್ಮಿಸುವಂತೆ ಟೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ 420 ಮನೆಗಳ ನಿರ್ಮಾಣ ಅಂತಿಮ ಹಂತದಲ್ಲಿವೆ. ಉಳಿದ ಮನೆಗಳು ಭಾಗಶಃ ಹಾಗೂ ಫಿಲ್ಲರ್ ಹಂತದಲ್ಲಿವೆ. ಎಲ್ಲ ಕಡೆಯೂ ಸಂಚರಿಸಿದ ತಂಡದ ಸದಸ್ಯರು, ಪ್ರತಿಯೊಂದು ವಸ್ತುವಿನ ಮಾದರಿ ಕಲೆಹಾಕಿದರು.

ರಾಜೀವ್‌ ಗಾಂಧಿ ವಸತಿ ನಿಗಮದ ಅಧಿಕಾರಿಗಳ ಜೊತೆಯಲ್ಲಿಯೇ ಪರಿಶೀಲನೆ ನಡೆಸಿದ ತಾಂತ್ರಿಕ ತಂಡದ ಸದಸ್ಯರು, ಕಳಪೆ ಆರೋಪಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸಿದರು. ಮೂರು ದಿನಗಳ ಭೇಟಿಯಲ್ಲಿ ಕಂಡುಬಂದ ಪುರಾವೆಗಳನ್ನು ಆಧರಿಸಿ ತಾಂತ್ರಿಕ ವರದಿ ಸಿದ್ಧಪಡಿಸಲಿರುವ ಸದಸ್ಯರು, ಅದನ್ನು ಲೋಕಾಯುಕ್ತರಿಗೆ ನೀಡಲಿದ್ದಾರೆ. ಪ್ರಕರಣದ ವಿಚಾರಣೆ ನಡೆಸಲಿರುವ ಲೋಕಾಯುಕ್ತರು ನೀಡುವ ನಿರ್ದೇಶನದಂತೆ ಮುಂದಿನ ಕ್ರಮ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಪರಿಶೀಲನೆ ಸಂದರ್ಭದಲ್ಲಿ ದೂರುದಾರ ಹಾಗೂ ಗುತ್ತಿಗೆದಾರ ಸಹ ಹಾಜರಿದ್ದರು.
ಪ್ರತಿ ಮನೆಗೆ ₹ 5.70 ಲಕ್ಷ: ಪ್ರತಿ ಮನೆಗೆ ₹ 5.70 ಲಕ್ಷ ಖರ್ಚು ಮಾಡಬೇಕು. ಪ್ರತಿಯೊಂದು ವಸ್ತುವು ಗುಣಮಟ್ಟದ್ದಾಗಿರಬೇಕು ಸೇರಿ ಹಲವು ಷರತ್ತುಗಳನ್ನು ವಿಧಿಸಿ ಟೆಂಡರ್ ನೀಡಲಾಗಿತ್ತು. ಆದರೆ, ಟೆಂಡರ್ ನಿಯಮ ಉಲ್ಲಂಘಿಸಿ ಮನೆಗಳ ನಿರ್ಮಾಣ ಮಾಡುತ್ತಿರುವುದು ಪರಿಶೀಲನೆಯಿಂದ ಗೊತ್ತಾಗಿದೆ.

‘ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಸಹಾಯಕ ಜನರಲ್ ಮ್ಯಾನೇಜರ್, ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹಾಗೂ ಎ.ಜೆ.ಜೆ. ಕನ್‌ಸ್ಟ್ರಕ್ಷನ್ ಸೇರಿ ಎರಡು ಕಂಪನಿ ವಿರುದ್ಧ ದೂರು ಬಂದಿದೆ. ಕಿಟಕಿಯ ಕಬ್ಬಿಣದ ಕಟಾಂಜನ ತಲಾ 30 ಕೆ.ಜಿ. ಇರಬೇಕಿತ್ತು. ಬಹುತೇಕ ಮನೆಗಳ ಕಟಾಂಜನ 21.5 ಕೆ.ಜಿ. ಇರುವುದು ಗೊತ್ತಾಗಿದೆ. ಭೀಮ್ ಅಳವಡಿಕೆ, ಚಾವಣಿ, ಎಲೆಕ್ಟ್ರಿಕ್ ಕೆಲಸ, ನೀರು ಸಂಗ್ರಹಣಾ ತೊಟ್ಟಿ, ಮನೆಯ ಒಣ ಹಾಗೂ ಹೊರಾಂಗಣದ ಕೆಲಸದಲ್ಲೂ ಕಳಪೆ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಸರ್ಕಾರಿ ಜಾಗದಲ್ಲಿದ್ದ ಸುಡುಗಾಡು ಸಿದ್ಧರ ಸಮುದಾಯದವರನ್ನು ಒಕ್ಕೆಲೆಬ್ಬಿಸಿ, ಅದೇ ಜಾಗದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಕಾಮಗಾರಿ ಮುಗಿದ ನಂತರ ಮನೆ ನೀಡುವುದಾಗಿ ಸಮುದಾಯದ ಜನರಿಗೆ ಭರವಸೆ ನೀಡಲಾಗಿದೆ. ಮನೆ ಸಿಗುವ ವಿಶ್ವಾಸದಿಂದ ಸುಡುಗಾಡು ಸಿದ್ಧರು ಇಂದಿಗೂ ಗುಡಿಸಲಿನಲ್ಲಿದ್ದಾರೆ. ಇದರ ನಡುವೆ ಕಾಮಗಾರಿ ಕಳಪೆ ಎಂಬ ಆರೋಪ ಕೇಳಿಬಂದಿದೆ. ‘ನಮಗೆ ಮನೆ ಯಾವಾಗ ಸಿಗುತ್ತದೆ’ ಎಂದು ಸುಡುಗಾಡು ಸಿದ್ಧರು ಪ್ರಶ್ನಿಸುತ್ತಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.