
ಪ್ರಜಾವಾಣಿ ವಾರ್ತೆ
ಹಾವೇರಿ: ಪ್ರತಿ ಕ್ವಿಂಟಲ್‌ಗೆ ₹ 2,400 ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಲು ಜಿಲ್ಲಾಡಳಿತ ಏಳು ಕೇಂದ್ರಗಳನ್ನು ತೆರೆದಿರುವ ಬೆನ್ನಲ್ಲೇ, ಕರ್ನಾಟಕ ಹಾಲು ಮಹಾಮಂಡಳದಿಂದಲೂ (ಕೆಎಂಎಫ್) ಪ್ರತ್ಯೇಕವಾಗಿ ಐದು ಕೇಂದ್ರಗಳನ್ನು ಆರಂಭಿಸಲಾಗಿದೆ. ಜಿಲ್ಲೆಯ ರೈತರು, 12 ಕೇಂದ್ರಗಳಲ್ಲಿ ಮೆಕ್ಕೆಜೋಳ ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಹಾವೇರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಸಕ್ತ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳವನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗಿದೆ. ಮುಂಗಾರು ಸಂದರ್ಭದಲ್ಲಿ ಬೆಳೆದ ಮೆಕ್ಕೆಜೋಳದ ಬೆಲೆ ಕುಸಿತವಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ.
‘ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ₹ 3,000 ನೀಡಬೇಕು. ಜಿಲ್ಲೆಯ ಪ್ರತಿ ಹೋಬಳಿಯಲ್ಲೂ ಖರೀದಿ ಕೇಂದ್ರ ತೆರೆಯಬೇಕು’ ಎಂದು ಆಗ್ರಹಿಸಿದ್ದ ರೈತರು, ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭಿಸಿದ್ದರು.
ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, ‘ಪ್ರತಿಯೊಬ್ಬ ರೈತರಿಂದ ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಬೇಕು. ಕ್ವಿಂಟಲ್‌ಗೆ ₹ 2,400 ಬೆಲೆ ನೀಡಬೇಕು’ ಎಂದು ಆದೇಶ ಹೊರಡಿಸಿದೆ. ಈ ಆದೇಶದನ್ವಯ ಜಿಲ್ಲಾಡಳಿತವು ಹಾವೇರಿ ತಾಲ್ಲೂಕಿನ ಹಾವನೂರು, ಗುತ್ತಲ, ಬೆಳವಿಗಿ, ನೆಗಳೂರು, ರಾಣೆಬೆನ್ನೂರು ತಾಲ್ಲೂಕಿನ ಕಮದೋಡ, ಕರೂರ ಹಾಗೂ ಇಟಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಮೆಕ್ಕೆಜೋಳ ಖರೀದಿ ಆರಂಭಿಸಿದೆ.
ಜಿಲ್ಲಾಡಳಿತ ಆರಂಭಿಸಿರುವ ಏಳು ಕೇಂದ್ರಗಳಲ್ಲಿ ಗುರುವಾರ ಸಂಜೆಯವರೆಗೆ 39 ರೈತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪ್ರತಿಯೊಬ್ಬ ರೈತರು, ತಮ್ಮ 20 ಕ್ವಿಂಟಲ್ ಮೆಕ್ಕೆಜೋಳ ಮಾರುವುದಾಗಿ ನಮೂದಿಸಿದ್ದಾರೆ. ಅದಕ್ಕಿಂತ ಹೆಚ್ಚಿಗೆ ಮೆಕ್ಕೆಜೋಳ ಖರೀದಿಗೂ ಒತ್ತಾಯಿಸಿದ್ದಾರೆ. ಆದರೆ, ಒಬ್ಬರ ರೈತರಿಂದ 20 ಕ್ವಿಂಟಲ್ ಖರೀದಿಗೆ ಮಾತ್ರ ಅವಕಾಶವಿರುವುದರಿಂದ ಕೇಂದ್ರದ ಸಿಬ್ಬಂದಿ ಅಸಹಾಯಕತೆ ತೋರುತ್ತಿದ್ದಾರೆ. ‘ಸರ್ಕಾರದಿಂದ ಆದೇಶ ಬಂದರೆ, ನೀವು ಹೇಳಿದಷ್ಟು ಮೆಕ್ಕೆಜೋಳ ಖರೀದಿಸುತ್ತೇವೆ’ ಎಂದು ರೈತರಿಗೆ ಹೇಳಿ ಕಳಹಿಸುತ್ತಿದ್ದಾರೆ.
‘ಹಾವೇರಿ ತಾಲ್ಲೂಕಿನ ಗುತ್ತಲದಲ್ಲಿ 1, ಹಾವನೂರಿನಲ್ಲಿ 7, ನೆಗಳೂರಿನಲ್ಲಿ 5, ರಾಣೆಬೆನ್ನೂರು ತಾಲ್ಲೂಕಿನ ಕರೂರಿನಲ್ಲಿ 3, ಇಟಗಿಯಲ್ಲಿ 2 ಹಾಗೂ ಕಮದೊಂಡದಲ್ಲಿ 21 ರೈತರು ಗುರುವಾರ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರು ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳ ಮಾರುವುದಾಗಿ ಘೋಷಿಸಿಕೊಂಡಿದ್ದಾರೆ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಹೇಳಿದರು.
‘ಕೆಲದಿನಗಳವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ನೋಂದಣಿ ಮುಗಿಯುತ್ತಿದ್ದಂತೆ, ಖರೀದಿ ಶುರುವಾಗಲಿದೆ. ನಂತರ, ರೈತರ ಖಾತೆಗೆ ನೇರ ನಗದು ವರ್ಗಾವಣೆ ಸೌಲಭ್ಯದ ಮೂಲಕ ಹಣ ಜಮೆಯಾಗಲಿದೆ’ ಎಂದರು.
ಕೆಎಂಎಫ್‌ನಿಂದ ಖರೀದಿ: ಪಶು ಆಹಾರ ತಯಾರಿಕೆಗೆ ಮೆಕ್ಕೆಜೋಳ ಅಗತ್ಯವಾಗಿದೆ. ಧಾರವಾಡ ಹಾಗೂ ಶಿಕಾರಿಪುರದಲ್ಲಿ ಪಶು ಆಹಾರ ತಯಾರಿಕೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಎರಡೂ ಘಟಕಗಳಿಗೆ 35 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಕೆಎಂಎಫ್ ತೀರ್ಮಾನಿಸಿದೆ.
ಹಾವೇರಿ, ಧಾರವಾಡ, ಗದಗ, ದಾವಣಗೆರೆ, ಶಿವಮೊಗ್ಗ, ಕೊಪ್ಪಳ, ಉಡುಪಿ, ಬಾಗಲಕೋಟೆ, ಬಳ್ಳಾರಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ 35 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಿ, ಎರಡೂ ಘಟಕಕ್ಕೂ ಹಂಚಿಕೆ ಮಾಡುವಂತೆ ಕೆಎಂಎಫ್ ಆದೇಶ ಹೊರಡಿಸಿದೆ.
ಜಿಲ್ಲೆಯ ಐದು ಕಡೆಗಳಲ್ಲಿ ಕೆಎಂಎಫ್ ವತಿಯಿಂದ ಖರೀದಿ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಗುರುವಾರ ಒಂದೇ ದಿನದಲ್ಲಿ 533 ರೈತರು ನೋಂದಣಿ ಮಾಡಿಕೊಂಡಿದ್ದಾರೆ.
‘ಹಾವೇರಿ, ರಾಣೆಬೆನ್ನೂರು, ಶಿಗ್ಗಾವಿ, ಹಿರೇಕೆರೂರು, ಹಾನಗಲ್‌ನಲ್ಲಿ ಕೆಎಂಎಫ್‌ನಿಂದ ಮೆಕ್ಕೆಜೋಳ ಖರೀದಿಸಲಾಗುತ್ತಿದೆ. ರಾಜ್ಯದಾದ್ಯಂತ 50 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಆದೇಶವಿದೆ. ಧಾರವಾಡ ಹಾಗೂ ಶಿಕಾರಿಪುರದ ಘಟಕಕ್ಕೆ 35 ಸಾವಿರ ಮೆಟ್ರಿಕ್ ಟನ್ ಖರೀದಿಗೆ ಒಪ್ಪಿಗೆ ಸಿಕ್ಕಿದೆ’ ಎಂದು ಹಾವೇರಿ ಹಾಲು ಒಕ್ಕೂಟದ (ಹಾವೆಮುಲ್) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಎಸ್.ಎಂ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.