ADVERTISEMENT

ಹಾವೇರಿ | ಹೋರಾಟಕ್ಕೆ ಮಣಿದ ಸರ್ಕಾರ: ವಿಜಯೋತ್ಸವ

ಹೆದ್ದಾರಿಯಲ್ಲಿ ವಾಹನ ತಡೆಯುವ ಪ್ರತಿಭಟನೆ ಹಿಂಪಡೆದ ರೈತರು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 2:35 IST
Last Updated 8 ಡಿಸೆಂಬರ್ 2025, 2:35 IST
‘ಪ್ರತಿಯೊಬ್ಬ ರೈತರಿಂದ ಕ್ವಿಂಟಲ್‌ಗೆ ₹2,400 ಬೆಲೆಯಲ್ಲಿ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲಾಗುವುದು’ ಎಂದು ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದ್ದು, ಹಾವೇರಿಯ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ರೈತರು ಭಾನುವಾರ ವಿಜಯೋತ್ಸವ ಆಚರಿಸಿದರು
‘ಪ್ರತಿಯೊಬ್ಬ ರೈತರಿಂದ ಕ್ವಿಂಟಲ್‌ಗೆ ₹2,400 ಬೆಲೆಯಲ್ಲಿ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲಾಗುವುದು’ ಎಂದು ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದ್ದು, ಹಾವೇರಿಯ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ರೈತರು ಭಾನುವಾರ ವಿಜಯೋತ್ಸವ ಆಚರಿಸಿದರು   

ಹಾವೇರಿ: ಪ್ರತಿಯೊಬ್ಬ ರೈತರಿಂದ ಕ್ವಿಂಟಲ್‌ಗೆ ₹2,400 ಬೆಲೆಯಲ್ಲಿ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಈ ಆದೇಶವನ್ನು ಭಾಗಶಃ ಸ್ವಾಗತಿಸಿ ಜಿಲ್ಲೆಯ ರೈತರು ನಗರದಲ್ಲಿ ಭಾನುವಾರ ವಿಜಯೋತ್ಸವ ಆಚರಿಸಿದರು.

‘ಜಿಲ್ಲೆಯಲ್ಲಿ ರೈತರು ಬೆಳೆದಿರುವ ಎಲ್ಲ ಮೆಕ್ಕೆಜೋಳವನ್ನು ಕ್ವಿಂಟಲ್‌ಗೆ ₹ 3,000 ಬೆಲೆಯಲ್ಲಿ ಖರೀದಿಸಬೇಕು. ಜಿಲ್ಲೆಯ ಪ್ರತಿಯೊಂದು ಹೋಬಳಿ ಅಥವಾ ತಾಲ್ಲೂಕಿನಲ್ಲಿ ಖರೀದಿ ಕೇಂದ್ರ ತೆರೆಯಬೇಕು’ ಎಂದು ಆಗ್ರಹಿಸಿ ‘ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ಯ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸಿದ್ದರು.

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತಿದ್ದ ರೈತರು, ಅಲ್ಲಿಯೇ ಅಡುಗೆ ಸಿದ್ಧಪಡಿಸಿ ಊಟ ಮಾಡಿ ಮಲಗಿ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ, ₹ 2,400 ಬೆಲೆಯಲ್ಲಿ ಗರಿಷ್ಠ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಲು ರಾಜ್ಯ ಸರ್ಕಾರ ಈ ಹಿಂದೆ ಆದೇಶ ಹೊರಡಿಸಿತ್ತು.

ADVERTISEMENT

ಈ ಆದೇಶವನ್ನು ಖಂಡಿಸಿದ್ದ ರೈತರು, ‘ನಾವು ಬೆಳೆದಿರುವ ಎಲ್ಲ ಮೆಕ್ಕೆಜೋಳವನ್ನು ಖರೀದಿಸಬೇಕು. ₹ 3,000 ಬೆಲೆ ನೀಡಬೇಕು’ ಎಂದು ಪುನಃ ಆಗ್ರಹಿಸಿದ್ದರು. ಬೇಡಿಕೆ ಈಡೇರದಿದ್ದರೆ, ಮೊಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿ. 8ರಂದು ವಾಹನಗಳ ಸಂಚಾರ ತಡೆದು ಅಹೋರಾತ್ರಿ ಧರಣಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾರಿಯವರು, ರೈತರ ಜೊತೆ ಮಾತುಕತೆ ನಡೆಸಿದ್ದರು. ಆದರೆ, ತಮ್ಮ ಬೇಡಿಕೆ ಈಡೇರಿಕೆಗಾಗಿ ರೈತರು ಪಟ್ಟು ಹಿಡಿದಿದ್ದರು.

ಬೆಳಗಾವಿಯಲ್ಲಿ ಅಧಿವೇಶನ ನಡೆದಿದ್ದು, ಬೆಂಗಳೂರು ಕಡೆಯಿಂದ ಬೆಳಗಾವಿಗೆ ಹೋಗುವವರು ಮೊಟೆಬೆನ್ನೂರು ಮೂಲಕವೇ ಸಾಗಬೇಕು. ಈ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆದರೆ, ಮತ್ತಷ್ಟು ತೊಂದರೆಯಾಗಬಹುದೆಂದು ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು. ಇದೇ ಕಾರಣಕ್ಕೆ ರೈತರ ಹೋರಾಟಕ್ಕೆ ಮಣಿದ ಸರ್ಕಾರ, ಇದೀಗ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವುದಾಗಿ ಹೊಸ ಆದೇಶ ಹೊರಡಿಸಿದೆ.

ಆದೇಶ ಹೊರಬೀಳುತ್ತಿದ್ದಂತೆ ಹಾವೇರಿಯ ಮೈಲಾರ ಮಹದೇವಪ್ಪ ವೃತ್ತದಲ್ಲಿ ಸೇರಿದ್ದ ರೈತರು, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಮುಖಂಡರಾದ ಮರಿಗೌಡ ಪಾಟೀಲ, ಮಾಲತೇಶ ಪೂಜಾರ, ಶಿವಯೋಗಿ ಹೊಸಗೌಡ್ರ, ಎಚ್‌.ಎಚ್‌. ಮುಲ್ಲಾ, ರಾಜು ತರ್ಲಘಟ್ಟ, ಚನ್ನಪ್ಪ ಮರಡೂರ, ಮುತ್ತಪ್ಪ ಗುಡಗೇರಿ ಹಾಗೂ ಇತರರು ಇದ್ದರು. 

Quote - ನಾವು ಬೆಳೆದಿರುವ ಎಲ್ಲ ಮೆಕ್ಕೆಜೋಳವನ್ನು ಖರೀದಿಸಬೇಕು. ₹ 3000 ಬೆಲೆ ನೀಡಬೇಕು ರಾಮಣ್ಣ ಕೆಂಚಳ್ಳೇರ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.