ADVERTISEMENT

ಶಿಗ್ಗಾವಿ | ಸಿಗದ ಸೂಕ್ತ ಬೆಲೆ: ಚೆಂಡು ಹೂ ಬೆಳೆದವರು ಕಂಗಾಲು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 2:41 IST
Last Updated 12 ಆಗಸ್ಟ್ 2025, 2:41 IST
ಶಿಗ್ಗಾವಿ ತಾಲ್ಲೂಕಿನ ಖುರ್ಸಾಪುರ ಗ್ರಾಮದ ಜಮೀನಿನಲ್ಲಿ ಬೆಳೆದಿರುವ ಚೆಂಡು ಹೂವನ್ನು ಕಾರ್ಮಿಕ ಮಹಿಳೆಯರು ಬಿಡಿಸಿದರು
ಶಿಗ್ಗಾವಿ ತಾಲ್ಲೂಕಿನ ಖುರ್ಸಾಪುರ ಗ್ರಾಮದ ಜಮೀನಿನಲ್ಲಿ ಬೆಳೆದಿರುವ ಚೆಂಡು ಹೂವನ್ನು ಕಾರ್ಮಿಕ ಮಹಿಳೆಯರು ಬಿಡಿಸಿದರು   

ಶಿಗ್ಗಾವಿ: ತಾಲ್ಲೂಕಿನ ಹಲವು ಕಡೆಗಳಲ್ಲಿ ಚೆಂಡು ಹೂವು ಬೆಳೆದಿರುವ ರೈತರು, ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಕಂಪನಿಯವರು ನೀಡಿದ್ದ ಬೀಜ, ಗೊಬ್ಬರ ಪಡೆದು ಹೂವಿನ ಕೃಷಿ ಮಾಡಿದ್ದ ರೈತರು, ಇದೀಗ ಕಂಪನಿಯಿಂದಲೇ ಮೋಸ ಆಗುತ್ತಿರುವುದಾಗಿ ಆರೋಪಿಸುತ್ತಿದ್ದಾರೆ.

‘ಎಕರೆಗೆ 10 ಟನ್‌ನಿಂದ 12 ಟನ್‌ ಚೆಂಡು ಹೂವು ಬೆಳೆಯಬಹುದೆಂದು ಬೀಜ ನೀಡಿದ್ದ ಕಂಪನಿಯವರು, ತಾವೇ ಖರೀದಿ ಮಾಡುವುದಾಗಿ ಹೇಳಿದ್ದರು. ಆದರೆ, ಅರ್ಧದಷ್ಟು ಸಹ ಹೂವಿನ ಇಳುವರಿ ಬಂದಿಲ್ಲ’ ಎಂದು ರೈತರು ದೂರುತ್ತಿದ್ದಾರೆ.

‘‍ಚೆಂಡು ಹೂವು ಬೆಳೆದ ನಂತರ, ಮಾರುಕಟ್ಟೆಗಿಂತಲೂ ಹೆಚ್ಚಿನ ದರಕ್ಕೆ ಖರೀದಿ ಮಾಡುವುದಾಗಿಯೂ ಕಂಪನಿಯವರು ಭರವಸೆ ನೀಡಿದ್ದರು. ಆದರೆ, ಮಾರುಕಟ್ಟೆಗಿಂತಲೂ ಕಡಿಮೆ ಬೆಲೆ ನೀಡುತ್ತಿದ್ದಾರೆ. ಜೊತೆಗೆ, ಹೂವಿನ ಬೆಳೆ ಬೆಳೆಯಲು ಆರಂಭದಲ್ಲಿ ನೀಡಿದ್ದ ಬೀಜ ಹಾಗೂ ಗೊಬ್ಬರದ ಹೆಸರಿನಲ್ಲೂ ಹೆಚ್ಚಿನ ಹಣ ಕಡಿತಗೊಳಿಸುತ್ತಿದ್ದಾರೆ’ ಎಂದು ರೈತರು ಆರೋಪಿಸಿದರು.

ADVERTISEMENT

‘ಕಂಪನಿಯಿಂದ ಆಗುತ್ತಿರುವ ಅನ್ಯಾಯದಿಂದ, ನಮಗೆ ನಷ್ಟವಾಗುತ್ತಿದೆ. ಮುಂಬರುವ ದಿನಗಳಲ್ಲಿ ಕಂಪನಿ ಸಹವಾಸವೇ ಬೇಡವೆಂದು ತೀರ್ಮಾನಿಸಿದ್ದೇನೆ. ಆದರೆ, ಪ್ರಸಕ್ತ ಸಾಲಿನಲ್ಲಿ ನಮಗೆ ಉಂಟಾಗಿರುವ ಹಾನಿಗೆ ಸೂಕ್ತ ಪರಿಹಾರವನ್ನು ಸರ್ಕಾರ ಕೊಡಿಸಬೇಕು. ಕಂಪನಿಯಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು’ ಎಂದು ರೈತರು ಒತ್ತಾಯಿಸಿದರು.

70 ಹೆಕ್ಟೇರ್‌ನಲ್ಲಿ ಚೆಂಡು ಹೂವು: ತಾಲ್ಲೂಕಿನ 37,515 ಹೆಕ್ಟೇರ್ ಕೃಷಿ ಪ್ರದೇಶವಿದೆ. ಹೆಚ್ಚಿನ ರೈತರು, ಸೋಯಾಬಿನ್, ಶೇಂಗಾ, ಭತ್ತ, ಗೋವಿನ ಜೋಳ, ಮೆಕ್ಕೆಜೋಳ, ಹತ್ತಿ ಹಾಗೂ ಮೆಣಸಿನಕಾಯಿ ಬೆಳೆದಿದ್ದಾರೆ.

ತಾಲ್ಲೂಕಿನ 70 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಚೆಂಡು ಹೂವು ಬೆಳೆದಿದ್ದಾರೆ. ಖುರ್ಸಾಪುರ, ಮಡ್ಲಿ, ಅಡವಿಸೋಮಾಪುರ, ಹೊಸೂರು, ದುಂಡಸಿ, ಅರಟಾಳ, ಮುಗಳಿ, ಹಿರೇಬೆಂಡಿಗೇರಿ, ಕಡಳ್ಳಿ, ಶ್ಯಾಡಂಬಿ, ಹಿರೇಮಣಕಟ್ಟಿ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಚೆಂಡು ಹೂವು ಬೆಳೆಯಿದೆ.

‘ಕಂಪನಿಯವರು ನೀಡಿದ್ದ ಭರವಸೆ ನಂಬಿ ಚೆಂಡು ಹೂವು ಬೆಳೆದಿದ್ದೆವು. ಆದರೆ, ಈಗ ಕಂಪನಿಯಿಂದ ಸೂಕ್ತ ಬೆಲೆ ಸಿಗುತ್ತಿಲ್ಲ. ಕಂಪನಿ ಬೆಲೆ ನೀಡಿದರೂ ಮಧ್ಯವರ್ತಿಗಳು ನಮಗೆ ಕೊಡುತ್ತಿಲ್ಲ. ಇದೊಂದು ರೈತರನ್ನು ವಂಚಿಸುವ ಜಾಲವಿದ್ದಂತೆ ಕಾಣುತ್ತಿದೆ’ ಎಂದು ಬೆಳೆಗಾರರು ಆರೋಪಿಸಿದರು.

ಕ್ವಿಂಟಲ್‌ಗೆ ₹ 920 ಬೆಲೆ: ‘ಪ್ರತಿ ಎಕರೆಗೆ 30ರಿಂದ 50 ಕ್ವಿಂಟಲ್‌ ಚೆಂಡು ಹೂವು ಇಳುವರಿ ಬರುತ್ತಿದೆ. ಕಂಪನಿಯ ಮಧ್ಯವರ್ತಿಗಳು  ಪ್ರತಿ ಕ್ವಿಂಟಲ್‌ಗೆ ₹ 920 ದರ ಕೊಟ್ಟು ಖರೀದಿ ಮಾಡಿದ್ದಾರೆ. ಆದರೆ, ಎಕರೆ ಹೂವು ಬೆಳೆಯಲು ಸುಮಾರು ₹ 40 ಸಾವಿರ ಖರ್ಚಾಗಿದೆ’ ಎಂದು ಬೆಳಗಾರರೊಬ್ಬರು ಅಳಲು ತೋಡಿಕೊಂಡರು.

‘ಬಿತ್ತನೆ ಬೀಜ, ಗೊಬ್ಬರ, ಔಷಧ ಸಿಂಪಡಣೆ ಹಾಗೂ ಕಾರ್ಮಿಕರಿಗೆ ಮಾಡಿರುವ ಖರ್ಚು ತೆಗೆದು ಅಲ್ಪ ಲಾಭವೂ ಬಂದಿಲ್ಲ. ಸಾಲ ಮಾಡಿ ಬೆಳೆದಿದ್ದ ಚೆಂಡು ಹೂವು, ಈ ಬಾರಿ ನಷ್ಟ ತಂದಿದೆ’ ಎಂದರು. 

ಮಳೆಯಿಂದಲೇ ಶೇ 10ರಷ್ಟು ಚೆಂಡು ಹೂವು ಹಾನಿಯಾಗಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆಯವರು ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಾರಾಟಕ್ಕೆ ಕಳುಹಿಸಲು ಸಿದ್ಧಪಡಿಸಿದ ಚೆಂಡು ಹೂವಿನ ಚೀಲಗಳು
ಕಂಪನಿಯವರು ನೇರವಾಗಿ ರೈತರನ್ನು ಸಂಪರ್ಕಿಸಿ ಚೆಂಡು ಹೂವು ಖರೀದಿಸಬೇಕು. ಮಧ್ಯವರ್ತಿಗಳನ್ನು ಕಿತ್ತು ಹಾಕಬೇಕು. ಲಾಭದ ಹಣವನ್ನು ನೇರವಾಗಿ ರೈತರಿಗೆ ನೀಡಬೇಕು
ರಾಮಕೃಷ್ಣ ದಂಡಿನ, ಖುರ್ಸಾಪುರ ರೈತ 
ಮಳೆಯಿಂದ ಚೆಂಡು ಹೂವು ಬೆಳೆ ಹಾನಿಯಾದ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದ್ದು ವರದಿ ಸಿದ್ಧಪಡಿಸಿ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು
ವಿಜಯಕುಮಾರ ಶಿಗ್ಗಾವಿ, ತೋಟಗಾರಿಕೆ ಇಲಾಖೆ ಅಧಿಕಾರಿ 

ಮಧ್ಯವರ್ತಿಗಳ ಹಾವಳಿ

ತಾಲ್ಲೂಕಿನಲ್ಲಿ ರೈತರನ್ನು ಸಂಪರ್ಕಿಸುತ್ತಿರುವ ಕೆಲ ಕಂಪನಿಯವರು ಮಧ್ಯವರ್ತಿಗಳನ್ನು ನೇಮಿಸಿಕೊಂಡು ಚೆಂಡು ಹೂವು ಕೃಷಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಕಂಪನಿಯ ಮುಖ್ಯಸ್ಥರು ಯಾರು ಎಂಬ ಮಾಹಿತಿ ರೈತರಿಗೆ ಸಿಗುತ್ತಿಲ್ಲ. ಮಧ್ಯವರ್ತಿಗಳೇ ಇಂತಿಷ್ಟು ರೈತರ ಗುಂಪುಗಳನ್ನು ರಚಿಸಿಕೊಂಡು ಹೂವು ಬೆಳೆಸಲು ಹಾಗೂ ಖರೀದಿ ಮಾಡುವ ಪ್ರಕ್ರಿಯೆ ನಡೆಸುತ್ತಿದ್ದಾರೆ.  ‘ಕಂಪನಿ ಹೆಸರಿನಲ್ಲಿ ಮಧ್ಯವರ್ತಿಗಳೇ ಬೀಜ ಗೊಬ್ಬರ ಔಷಧ ಕೊಡುತ್ತಾರೆ. ಹೂವು ಖರೀದಿ ಸಹ ಮಾಡುತ್ತಿದ್ದಾರೆ. ಅಂತಿಮವಾಗಿ ಬೀಜ ಗೊಬ್ಬರದ ಖರ್ಚು ತೆಗೆದು ಉಳಿದ ಹಣವನ್ನು ನಮಗೆ ಕೊಡುತ್ತಿದ್ದಾರೆ. ನಾವು ಕಷ್ಟಪಟ್ಟು ಬೆಳೆದು ಮಧ್ಯವರ್ತಿಗಳ ಹೊಟ್ಟೆ ತುಂಬಿಸುತ್ತಿದ್ಧೇವೆ. ನಾವು ಮಾತ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ರೈತರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.