ಶಿಗ್ಗಾವಿ: ಪಟ್ಟಣದ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ನಿರ್ಮಿಸಲಾದ ಉದ್ಯಾನಗಳು ನಿರ್ವಹಣೆ ಕೊರತೆಯಿಂದ ಸಂಪೂರ್ಣ ಹಾಳಾಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಪಶು ಆಸ್ಪತ್ರೆ ಪಕ್ಕದ ಉದ್ಯಾನದಲ್ಲಿ ಮಕ್ಕಳ ಆಟದ ಸಾಮಗ್ರಿಗಳು ಸಂಪೂರ್ಣ ಗಿಡಗಂಟಿಗಳಿಂದ ಕೂಡಿದ್ದು, ಮಳೆ ನೀರು ನಿಂತು ದುರ್ವಾಸನೆ ಹರಡುತ್ತಿದೆ. ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗಿದೆ.
ಪಟ್ಟಣದಲ್ಲಿ ಯಾವುದೇ ಸಾರ್ವಜನಿಕರ ಶೌಚಾಲಯಗಳಿಲ್ಲದ ಕಾರಣ ಉದ್ಯಾನದಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಾರೆ. ಸೊಳ್ಳೆ ಹಾಗೂ ಹಂದಿಗಳ ಕಾಟದಿಂದ ರೋಗಗಳು ಹರಡುವ ಭೀತಿ ಜನರನ್ನು ಕಾಡುತ್ತಿದೆ. ಆದರೂ ಸಂಭಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ರಾತ್ರಿ ವೇಳೆ ಕುಡಕರು ಖಾಲಿ ಬಾಟಲಿ, ಪ್ಲ್ಯಾಸ್ಟಿಕ್ ಚೀಲ ಎಸೆದು ಹೋಗುವ ಕಾರಣ ಉದ್ಯಾನ ತುಂಬೆಲ್ಲಾ ಕಸದ ರಾಶಿ ಆವರಿಸಿದ್ದು, ವೀಷಜಂತುಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ಕಾನೂನು ಬಾಹಿರ ಚಟುವಟಿಕೆಗಳ ತಾಣವಾಗಿದೆ. ಈ ಕುರಿತು ಸುತ್ತಲಿನ ನಿವಾಸಿಗಳು ಪುರಸಭೆ ಅಧಿಕಾರಿಗಳಿಗೆ ಮೌಖಿಕವಾಗಿ ಹಲವು ಮನವಿ ಸಲ್ಲಿಸಿದರೂ ಅಧಿಕಾರಿಗಳ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಚೇರಿಗಳ ಸಂಕೀರ್ಣದ ಪಕ್ಕದ ಉದ್ಯಾನವನ ತೆರವುಗೊಳಿಸಿ ವಾಹನ ನಿಲ್ಲುವ ಸ್ಥಳವಾಗಿ ಪರಿವರ್ತಿಸಲಾಗಿದೆ. ವೃದ್ದರು, ಮಕ್ಕಳು ವಿಶ್ರಾಂತಿ ಪಡೆಯಲು ಉದ್ಯಾನಕ್ಕೆ ಹೋಗದಂತಾಗಿದೆ. ಪಟ್ಟಣದ ಬಸವ ನಗರ ಮತ್ತು ಮಾರುತಿ ನಗರದಲ್ಲಿ ಉದ್ಯಾನವನಗಳು ಸಹ ಸಂಪೂರ್ಣ ಹಾಳಾಗಿ ಹೋಗಿದ್ದು, ಸುತ್ತಲಿನ ತಂತಿ ಬೇಲಿ ಕಿತ್ತು ಹಾಕಲಾಗಿದೆ.
‘ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿನ ಸಾಯಿ ನಗರದ ಹೌಸಿಂಗ್ ಬೋರ್ಡ್ ಕಾಲೊನಿ ಉದ್ಯಾನವನ ನಿರ್ವಹಣೆ ಕೊರತೆಯಿಂದ ಹಾಳಾಗಿ ಹೋಗಿದ್ದು, ಮಳೆಗಾಲದಲ್ಲಿ ಮಳೆ ನೀರು ನುಗ್ಗಿ ಜಲಾವೃತ್ತಗೊಳುತ್ತಿದೆ. ಮಕ್ಕಳ ಆಟದ ಸಾಮಗ್ರಿಗಳು ತುಕ್ಕು ಹಿಡಿದು ಹಾಳಾಗಿದ್ದು, ವಿಷಜಂತುಗಳ ಹಾಗೂ ಸೊಳ್ಳೆಗಳ ಕಾಟ ಅಧಿಕವಾಗಿದೆ’ ಎಂದು ಸ್ಥಳೀಯ ನಿವಾಸಿ ಚಂದ್ರಗೌಡ ಕರೆಗೌಡ್ರ ತಿಳಿಸಿದರು.
ಆರೋಗ್ಯಕರ ವಾತಾವರಣ ಮೂಡಿಸುವ ಉದ್ಯಾನಗಳು ಜನರ ಜೀವನಾಡಿಗಳಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದಿವೆ. ತಕ್ಷಣ ಪುರಸಭೆ ಆಡಳಿತ ಮಂಡಳಿ ಉದ್ಯಾನಗಳ ಅಭಿವೃದ್ಧಿಗೆ ಮುಂದಾಗುವ ಮೂಲಕ ಜನರ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯವಾಗಿದೆ’ ಎಂದು ಸ್ಥಳೀಯ ನಿವಾಸಿ ವಿಜಯ ಬುಳ್ಳಕ್ಕನವರ ಹೇಳುತ್ತಾರೆ.
ಪಟ್ಟಣದಲ್ಲಿನ ಉದ್ಯಾನಗಳನ್ನು ಸ್ವಚ್ಚಗೊಳಿಸಬೇಕು. ಮಕ್ಕಳು ಆಟ ಆಡಲು ಹೆಚ್ಚಿನ ಸಾಮಗ್ರಿ ಪೂರೈಸಬೇಕು. ಮಕ್ಕಳು ಮತ್ತು ವೃದ್ದರಿಗೆ ಆರೋಗ್ಯದ ಹಿನ್ನೆಲೆ ತಕ್ಷಣ ಅಭಿವೃದ್ಧಿ ಕಾಮಗಾರಿಗೆ ಕೈಗೊಳ್ಳಬೇಕುಮುತ್ತುರಾಜ ಕ್ಷೌರದ ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.