ADVERTISEMENT

ಮಾನಸಿಕ ಅಸ್ವಸ್ಥರಿಗೆ ಅನ್ಯಾಯ: ಪೋಷಕರ ಆರೋಪ

ಉಚಿತ ಮಾತ್ರೆ ನೀಡದ ವೈದ್ಯರು; ಆರೋಪ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:24 IST
Last Updated 8 ನವೆಂಬರ್ 2025, 4:24 IST
‘ಮಾನಸಿಕ ಅಸ್ವಸ್ಥರಿಗೆ ಯುಡಿಐಡಿ ಕಾರ್ಡ್ ನೀಡಬೇಕು. ಸರ್ಕಾರಿ ಯೋಜನೆಗಳಲ್ಲಿ ವಿಶೇಷ ಆದ್ಯತೆ ನೀಡಬೇಕು. ಉಚಿತವಾಗಿ ಎಲ್ಲ ಔಷಧಿ ಒದಗಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾ ಆರೋಗ್ಯಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲು ಹಾವೇರಿ ಜಿಲ್ಲಾಡಳಿತ ಭವನಕ್ಕೆ ಬಂದಿದ್ದ ಮಾನಸಿಕ ಅಸ್ವಸ್ಥರು–ಪೋಷಕರು
‘ಮಾನಸಿಕ ಅಸ್ವಸ್ಥರಿಗೆ ಯುಡಿಐಡಿ ಕಾರ್ಡ್ ನೀಡಬೇಕು. ಸರ್ಕಾರಿ ಯೋಜನೆಗಳಲ್ಲಿ ವಿಶೇಷ ಆದ್ಯತೆ ನೀಡಬೇಕು. ಉಚಿತವಾಗಿ ಎಲ್ಲ ಔಷಧಿ ಒದಗಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾ ಆರೋಗ್ಯಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲು ಹಾವೇರಿ ಜಿಲ್ಲಾಡಳಿತ ಭವನಕ್ಕೆ ಬಂದಿದ್ದ ಮಾನಸಿಕ ಅಸ್ವಸ್ಥರು–ಪೋಷಕರು    

ಹಾವೇರಿ: ‘ಮಾನಸಿಕ ಅಸ್ವಸ್ಥರ ಪುನರ್ವಸತಿಗಾಗಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಆದರೆ, ಈ ಸೌಲಭ್ಯಗಳು ಮಾನಸಿಕ ಅಸ್ವಸ್ಥರಿಗೆ ಸಿಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ವರ್ತನೆಯಿಂದಾಗಿ ಮಾನಸಿಕ ಅಸ್ವಸ್ಥರಿಗೆ ಅನ್ಯಾಯವಾಗುತ್ತಿದೆ’ ಎಂದು ಮಾನಸಿಕ ಅಸ್ವಸ್ಥರ ಪೋಷಕರು ಆರೋಪಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ಜಿಲ್ಲಾಡಳಿತ ಭವನಕ್ಕೆ ಶುಕ್ರವಾರ ಭೇಟಿ ನೀಡಿದ್ದ ಪೋಷಕರು, ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ) ಡಾ. ಎಂ. ಜಯಾನಂದ ಅವರಿಗೆ ಮನವಿ ಸಲ್ಲಿಸಿದರು. ಮಾನಸಿಕ ಅಸ್ವಸ್ಥರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಕೋರಿದರು.

‘ಜಿಲ್ಲೆಯಾದ್ಯಂತ 1,500ಕ್ಕೂ ಹೆಚ್ಚು ಮಾನಸಿಕ ಅಸ್ವಸ್ಥರಿದ್ದಾರೆ. ಬಾಲ್ಯದಲ್ಲಿ ಆರೋಗ್ಯವಾಗಿದ್ದ ಹಲವರು, ನಂತರದ ದಿನಗಳಲ್ಲಿ ಅಸ್ವಸ್ಥರಾಗುತ್ತಿದ್ದಾರೆ. ಬಡತನ ಹಾಗೂ ಇತರೆ ಕಾರಣಗಳಿಂದಾಗಿ ಮಾನಸಿಕ ಅಸ್ವಸ್ಥರ ಪಾಲನೆ ಕಷ್ಟವಾಗುತ್ತಿದೆ. ಇಂಥ ಮಾನಸಿಕ ಅಸ್ವಸ್ಥರ ಕಲ್ಯಾಣಕ್ಕಾಗಿ ಸರ್ಕಾರದ ಹಲವು ಯೋಜನೆಗಳಿದ್ದರೂ ಅದರ ಪ್ರಯೋಜನವಾಗುತ್ತಿಲ್ಲ’ ಎಂದು ಪೋಷಕರು ದೂರಿದರು.

ADVERTISEMENT

‘ಅಂಗವಿಕಲರಿಗೆ ಹಕ್ಕುಗಳ ಕಾಯ್ದೆ 2016ರ ಪ್ರಕಾರ ಮಾನಸಿಕ ಅಸ್ವಸ್ಥೆಯನ್ನೂ ಅಂಗವಿಕಲ ಸಮಸ್ಯೆಯೆಂದು ಪರಿಗಣಿಸಲಾಗಿದೆ. ಅಂಗವಿಕಲರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಮಾನಸಿಕ ಅಸ್ವಸ್ಥರಿಗೂ ನೀಡುವಂತೆ ಸರ್ಕಾರ ನಿಯಮ ರೂಪಿಸಿದೆ. ಆದರೆ, ಅಂಗವಿಕಲರಿಗೆ ಸಿಗುವ ಸೌಲಭ್ಯಗಳು ಮಾನಸಿಕ ಅಸ್ವಸ್ಥರಿಗೆ ಸಿಗುತ್ತಿಲ್ಲ. ಸೌಲಭ್ಯ ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯವಾಗುತ್ತಿದೆ’ ಎಂದು ಆರೋಪಿಸಿದರು.

‘ಮಾನಸಿಕ ಅಸ್ವಸ್ಥರನ್ನು ಅಂಗವಿಕಲರೆಂದು ಪರಿಗಣಿಸಿ ‘ವಿಶಿಷ್ಟ ಅಂಗವಿಕಲ ಗುರುತಿನ ಚೀಟಿ (ಯುಡಿಐಡಿ)’ ನೀಡುತ್ತಿಲ್ಲ. ಮಾನಸಿಕ ಅಸ್ವಸ್ಥರು, ತಮ್ಮ ವೈಯಕ್ತಿಕ ಕೆಲಸವನ್ನೂ ಮಾಡಿಕೊಳ್ಳುತ್ತಿಲ್ಲ. ಅವರನ್ನು ಪೋಷಕರೇ ಪಾಲನೆ ಮಾಡಬೇಕು. ಬಡವರಾಗಿರುವ ಪೋಷಕರು, ಪಾಲನೆಗಾಗಿ ಸಾಕಷ್ಟು ಕಷ್ಟುಪಡುತ್ತಿದ್ದಾರೆ. ಯಾವುದೇ ಸೌಲಭ್ಯ ಸಿಗದಿದ್ದರಿಂದ, ಪೋಷಕರು ಮತ್ತಷ್ಟು ಕಂಗಾಲಾಗಿದ್ದಾರೆ’ ಎಂದು ದೂರಿದರು.

ಔಷಧಿ ಕೊರತೆ: ‘ಮಾನಸಿಕ ಅಸ್ವಸ್ಥರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಔಷಧಿ–ಮಾತ್ರೆ ನೀಡುವಂತೆ ಸರ್ಕಾರ ಹೇಳಿದೆ. ಆದರೆ, ಹಾವೇರಿ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಿದೆ. ಹೊರಗಡೆ ಔಷಧಿ ಖರೀದಿ ಮಾಡುವಂತೆ ವೈದ್ಯರು ಹೇಳುತ್ತಿದ್ದಾರೆ’ ಎಂದು ಪೋಷಕರು ದೂರಿದರು.

‘ಎಲ್ಲ ಮಾನಸಿಕ ಅಸ್ವಸ್ಥರಿಗೆ ಯುಡಿಐಡಿ ಕಾರ್ಡ್ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಅಂಗವಿಕಲರಿಗೆ ಮೀಸಲಿಟ್ಟಿರುವ ಶೇ 5ರಷ್ಟು ಅನುದಾನದಲ್ಲಿ ಮಾನಸಿಕ ಅಸ್ವಸ್ಥರಿಗೆ ಆದ್ಯತೆ ನೀಡಬೇಕು. ಮನೆ ಇಲ್ಲದ ಮಾನಸಿಕ ಅಸ್ವಸ್ಥರಿಗೆ ಸ್ವಂತ ಸೂರು ಒದಗಿಸಬೇಕು’ ಎಂದು ಆಗ್ರಹಿಸಿದರು.

ಮಾರಿಕಾಂಬ ಮನೋಚೇತನರ ಮತ್ತು ಪೋಷಕರ ಪುನರ್ಚೇತನ ಸಂಘದ ರಚನಾ ಯಕ್ಲಾಸಪುರ, ವಿನೋದಾ ಪಾಟೀಲ, ಗೀತಾ ಸಾದರ, ರತ್ನಾ ಬನ್ನಿಮಠ, ಲಲಿತಾ ಬಣಕಾರ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.