ADVERTISEMENT

ಪದವೀಧರರ ಚುನಾವಣೆ | ಪಕ್ಷಕ್ಕೆ ಸತ್ವ ಪರೀಕ್ಷೆ : ಸಚಿವ ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 7:49 IST
Last Updated 16 ಫೆಬ್ರುವರಿ 2026, 7:49 IST
ಹಾವೇರಿ ಜಿಲ್ಲಾ ಕಾಂಗ್ರೆಸ್ ಘಟಕದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ವಿಧಾನ ಪರಿಷತ್ ಚುನಾವಣೆ ಪೂರ್ವಭಾವಿ ಸಭೆ’ಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು
ಹಾವೇರಿ ಜಿಲ್ಲಾ ಕಾಂಗ್ರೆಸ್ ಘಟಕದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ವಿಧಾನ ಪರಿಷತ್ ಚುನಾವಣೆ ಪೂರ್ವಭಾವಿ ಸಭೆ’ಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು   

ಹಾವೇರಿ: ‘ಮುಂಬರುವ ರಾಜ್ಯದ ಪದವೀಧರರ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ, ಕಾಂಗ್ರೆಸ್ ಪಕ್ಷಕ್ಕೆ ಸತ್ವ ಪರೀಕ್ಷೆ. ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಘಟಕದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ವಿಧಾನ ಪರಿಷತ್ ಚುನಾವಣೆ ಪೂರ್ವಭಾವಿ ಸಭೆ’ಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿರುವ ಎಲ್ಲ ಶಾಸಕರು, ನಮ್ಮ ಪಕ್ಷದವರು. ಕ್ರಿಯಾಶೀಲ ಕಾರ್ಯಕರ್ತರೂ ಜಿಲ್ಲೆಯಲ್ಲಿದ್ದಾರೆ. ಯಾವುದೇ ಭಿನ್ನಾಭಿಪ್ರಾಯವಿದ್ದರೂ ಬದಿಗಿಟ್ಟು ಪಕ್ಷದ ಗೆಲುವಿಗೆ ಶ್ರಮಿಸಬೇಕು’ ಎಂದರು.

ಕೆಪಿಸಿಸಿ ರಾಜ್ಯ ಉಸ್ತುವಾರಿ ಮಯೂರ ಜಯಕುಮಾರ ಮಾತನಾಡಿ, ‘ಪದವೀಧರ ಪಶ್ಚಿಮ ಮತಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಾಲ್ಕು ಜಿಲ್ಲೆಯ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜೊತೆಗೆ, ನೂತನ ಮತದಾರರ ನೋಂದಣಿ ಮಾಡಿಸಬೇಕು’ ಎಂದರು.

ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ, ‘ಪದವೀಧರರ ಮತದಾನಕ್ಕೆ ಸದಸ್ಯತ್ವ ನೋಂದಣಿಗೆ ಇನ್ನೂ ಸಮಯಾವಕಾಶವಿದೆ. ಈಗಾಗಲೇ ಸದಸ್ಯತ್ವ ಪಡೆದವರು ತಾಂತ್ರಿಕ ತೊಂದರೆ ಅನುಭವಿಸುತ್ತಿರುವ ಕಾರಣಕ್ಕೆ ಸಹಾಯವಾಣಿ ತೆರೆಯಲಾಗಿದೆ. ತಳಮಟ್ಟದಲ್ಲಿ ಪದವೀಧರರನ್ನು ಗುರುತಿಸಿ ಸದಸ್ಯತ್ವ ನೋಂದಣಿ ಮಾಡಿಸಬೇಕು’ ಎಂದರು.

‌ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಹಿಳಾ ಘಟಕದ ಅಧ್ಯಕ್ಷರಾದ ಪ್ರೇಮಾ ಪಾಟೀಲ, ಶಾಸಕರಾದ ಶ್ರೀನಿವಾಸ್ ಮಾನೆ, ಯಾಸೀರ್ ಅಹ್ಮದ್ ಖಾನ್ ಪಠಾಣ, ಮಾಜಿ ಸಂಸದ ಐ.ಜಿ. ಸನದಿ, ಮುಖಂಡರಾದ ಆನಂದಸ್ವಾಮಿ ಗಡ್ಡದ್ದೇವರಮಠ, ಎಸ್.ಎಫ್.ಎನ್ ಗಾಜಿಗೌಡ್ರ ಹಾಗೂ ಇತರರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.