
ರಟ್ಟೀಹಳ್ಳಿ: ತಾಲ್ಲೂಕಿನ ಕಣವಿಶಿದ್ಗೇರಿ ಗ್ರಾಮದಲ್ಲಿ ಚಿರತೆ ಸೆರೆಗಾಗಿ ತಿಂಗಳಿಂದ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪ್ರಯತ್ನ ಮುಂದುವರೆದಿದ್ದು, ಇದುವರೆಗೂ ಚಿರತೆ ಸೆರೆಯಾಗದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಕಣವಿಶಿದ್ಗೇರಿ ಗ್ರಾಮದಲ್ಲಿ ಅ.11 ರಂದು ಚಿರತೆ ದಾಳಿಯಲ್ಲಿ ರೈತ ಸಾವನ್ನಪ್ಪಿದ್ದು, ಇನ್ನೊರ್ವ ಗಂಭೀರ ಗಾಯಗೊಂಡ ಹಿನ್ನಲೆಯಲ್ಲಿ ಜಿಲ್ಲೆಯ 30ಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗಾಗಿ ನಿರಂತರ ಪ್ರಯತ್ನ ಮುಂದುವರೆಸಿದ್ದು ಚಿರತೆ ಇರುವಿಕೆಯನ್ನು ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.
ಕಣವಿಶಿದ್ಗೇರಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪರ್ವತ ಶಿದ್ಗೇರಿ, ಜೋಕನಾಳ, ಚಪ್ಪರದಹಳ‍್ಳಿ, ಹಿರೇಮೊರಬ ಗ್ರಾಮಗಳ ಜಮೀನುಗಳಲ್ಲಿ ಚಿರತೆ ಹೆಜ್ಜೆ ಗುರುತುಗಳು ಪತ್ತೆಯಾಗುತ್ತಿದ್ದು, ಸುತ್ತಮುತ್ತಲಿನ ಎಲ್ಲ ಗ್ರಾಮಗಳ ರೈತರಲ್ಲಿ ಆತಂಕ ಮನೆಮಾಡಿದೆ.
ಕಳೆದ ಎರಡು ದಿನಗಳ ಹಿಂದೆ ಚಪ್ಪರದಹಳ‍್ಳಿ, ಹಿರೇಮೊರಬ ಗ್ರಾಮಗಳಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿ ವಿಜಯಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಸದ್ಯದಲ್ಲಿಯೇ ಬೆಂಗಳೂರು ಮತ್ತು ತುಮಕೂರುಗಳಿಂದ ಚಿರತೆ ಸೆರೆಗಾಗಿ ವಿಶೇಷ ತರಬೇತಿ ತಂಡ ಕಳಿಸುವಂತೆ ಕೋರಿದ್ದೇವೆ. ನುರಿತ ತಂಡದಿಂದ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆಸುತ್ತೇವೆ ಎಂದು ಅರಣ್ಯಾಧಿಕಾರಿ ವಿಜಯಕುಮಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.