ADVERTISEMENT

ಮಟ್ಕಾ ಬರೆಯುತ್ತಿದ್ದವನನ್ನು ಹಿಡಿದುಕೊಟ್ಟ ಶಾಸಕ ರುದ್ರಪ್ಪ ಲಮಾಣಿ: PSI ಮೇಲೆ ಗರಂ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 16:25 IST
Last Updated 2 ಮಾರ್ಚ್ 2026, 16:25 IST
   

ಗುತ್ತಲ: ‘ಪಟ್ಟಣದ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಸಮೀಪದಲ್ಲಿಯೇ ಕೊಠಡಿಯೊಂದರಲ್ಲಿ ಮಟ್ಕಾ ಬರೆಯುತ್ತಿದ್ದಾರೆ. ಇದನ್ನು ಯಾರೊಬ್ಬರೂ ತಡೆಯುತ್ತಿಲ್ಲ’ ಎಂದು ಆರೋಪಿಸಿ ಸ್ಥಳೀಯ ಮಹಿಳೆಯರು ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಸೋಮವಾರ ಮುತ್ತಿಗೆ ಹಾಕಿದರು. ಇದರಿಂದ ಎಚ್ಚೆತ್ತ ರುದ್ರಪ್ಪ ಲಮಾಣಿ, ಕೊಠಡಿ ಮೇಲೆ ದಾಳಿ ಮಾಡಿ ಮಟ್ಕಾ ಬರೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪಟ್ಟಣದಲ್ಲಿರುವ ನಾಡ ಕಚೇರಿ ಉದ್ಗಾಟನೆ ಮತ್ತು ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ರುದ್ರಪ್ಪ ಲಮಾಣಿ ಮತ್ತು ತಹಶೀಲ್ದಾರ ಶರಣಮ್ಮ ಬಂದಿದ್ದರು. ಅವರನ್ನು ಅಡ್ಡಗಟ್ಟಿದ್ದ ಮಹಿಳೆಯರು, ‘ಮೀನು, ಮಾಂಸದಂಗಡಿಯವರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ದುರ್ವಾಸನೆ ಬರುತ್ತಿದೆ. ಅದನ್ನು ತಿನ್ನಲು ಬರುವ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುತ್ತಿವೆ. ಇದರ ನಡುವೆಯೇ ಮಟ್ಕಾ ಹಾವಳಿ ಹೆಚ್ಚಾಗಿದೆ’ ಎಂದು ಅಳಲು ತೋಡಿಕೊಂಡಿದ್ದರು.

ಮಹಿಳೆಯರನ್ನು ಸಮಾಧಾನಪಡಿಸಿದ ಶಾಸಕ, ಕೊಠಡಿಗೆ ಲಗ್ಗೆ ಇಟ್ಟರು. ಅವರ ಎದುರೇ ವ್ಯಕ್ತಿ ರಾಜಾರೋಷವಾಗಿ ಮಟ್ಕಾ (ಒ.ಸಿ.) ಬರೆದುಕೊಳ್ಳುತ್ತಿದ್ದ. ಅದನ್ನು ಕಂಡು ಗರಂ ಆದ ಶಾಸಕ, ಪಿಎಸ್‌ಐಗೆ ಕರೆ ಮಾಡಿ ಕರೆಸಿಕೊಂಡರು. ಅವರನ್ನೂ ತರಾಟೆಗೆ ತೆಗೆದುಕೊಂಡು, ವ್ಯಕ್ತಿಯನ್ನು ವಶಕ್ಕೆ ಒಪ್ಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.