ADVERTISEMENT

ಹಾವೇರಿ: ಮೆರವಣಿಗೆಯಲ್ಲಿ ಮೊಬೈಲ್‌ ಕದ್ದಿದ್ದವನ ಬಂಧನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:42 IST
Last Updated 8 ಅಕ್ಟೋಬರ್ 2025, 5:42 IST
   

ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಅ. 4ರಂದು ನಡೆದ ʻರಾಣೆಬೆನ್ನೂರು ಕಾ ರಾಜಾʼ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ನೂಕುನುಗ್ಗಲಿನಲ್ಲಿ ಮೊಬೈಲ್‌ಗಳನ್ನು ಕಳವು ಮಾಡಿದ್ದ ಆರೋಪಿ ತರುಣ ಎಸ್. (19) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಭೋವಿ ಕಾಲೊನಿಯ ನಿವಾಸಿ ತರುಣ ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ ₹ 1.02 ಲಕ್ಷ ಮೌಲ್ಯದ 10 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ರಾಣೆಬೆನ್ನೂರು ಶಹರ ಠಾಣೆ ಪೊಲೀಸರು ತಿಳಿಸಿದರು.

‘ಮೆರವಣಿಗೆಯಲ್ಲಿ ಹೆಚ್ಚಿನ ಜನರು ಸೇರಿದ್ದರಿಂದ ನೂಕನುಗ್ಗಲು ಹೆಚ್ಚಿತ್ತು. ಭದ್ರಾವತಿಯಿಂದ ಬಂದಿದ್ದ ಆರೋಪಿ, ನೂಕುನುಗ್ಗಲಿನಲ್ಲಿಯೇ ಓಡಾಡಿ ಹಲವರ ಜೇಬಿನಲ್ಲಿದ್ದ ಮೊಬೈಲ್‌ಗಳನ್ನು ಕದ್ದಿದ್ದ. ಅದೇ ಮೊಬೈಲ್‌ಗಳ ಸಮೇತ ತಮ್ಮೂರಿಗೆ ಹೊರಡಲು ನಿಲ್ದಾಣಕ್ಕೆ ಬಂದಿದ್ದ. ಈತನ ಬಗ್ಗೆ ಅನುಮಾನಗೊಂಡು ಪರಿಶೀಲಿಸಿದಾಗ, ಮೊಬೈಲ್‌ ಸಮೇತ ಸಿಕ್ಕಿಬಿದ್ದಿದ್ದಾನೆ’ ಎಂದು ಹೇಳಿದರು.

ADVERTISEMENT

‘ಆರೋಪಿ ಜೊತೆಯಲ್ಲಿ ಮತ್ತಷ್ಟು ಮಂದಿ ಮೊಬೈಲ್ ಕಳವು ಮಾಡಿರುವ ಮಾಹಿತಿಯಿದೆ. ಕದ್ದ ಮೊಬೈಲ್‌ಗಳನ್ನು ಆರೋಪಿಗಳು, ಬೇರೆಯವರಿಗೆ ಕಡಿಮೆ ಬೆಲೆಗೆ ಮಾರಿ ಹಣ ಸಂಪಾದಿಸುತ್ತಿದ್ದರು. ಇದೊಂದು ದೊಡ್ಡ ಜಾಲವಿದ್ದು, ಪ್ರಮುಖ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ. ಸಾರ್ವಜನಿಕರು ಯಾರಾದರೂ ಮೊಬೈಲ್ ಕಳೆದುಕೊಂಡಿದ್ದರೆ ಠಾಣೆಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.