ADVERTISEMENT

ವಚನ ಕಂಠಪಾಠ: 126 ವಚನ ಹೇಳಿದ ಮುಸ್ಲಿಂ ಬಾಲಕಿಗೆ ಪ್ರಥಮ ಬಹುಮಾನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 14:50 IST
Last Updated 18 ಆಗಸ್ಟ್ 2025, 14:50 IST
   

ಹಾನಗಲ್ (ಹಾವೇರಿ): ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಗುರುಪಾದೇಶ್ವರ ವಿರಕ್ತಮಠದಲ್ಲಿ ಭಾನುವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ವಚನ ಕಂಠಪಾಠ ಸ್ಪರ್ಧೆಯ ಪ್ರೌಢಶಾಲೆ ವಿಭಾಗದಲ್ಲಿ ಮುಸ್ಲಿಂ ಬಾಲಕಿ ಫಿಜಾಅಂಜುಂ ಬುಕ್ಕಿಟಗಾರ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಗ್ರಾಮದ ಪ್ರಭಾಕರ ನೆಲವಿಗಿ ಪ್ರೌಢಶಾಲೆಯ ವಿದ್ಯಾರ್ಥಿಯಾದ ಫಿಜಾಅಂಜುಂ, ಕಂಠಪಾಠದ ಮೂಲಕ 152 ವಚನಗಳನ್ನು ಪ್ರಸ್ತುತಪಡಿಸಿದ್ದರು. ಅವುಗಳಲ್ಲಿ 126 ವಚನಗಳನ್ನು ಒಂದೂ ತಪ್ಪಿಲ್ಲದೇ ಹೇಳಿದ್ದರು. ಉಳಿದ ಸ್ಪರ್ಧಿಗಳು, ಫಿಜಾಅಂಜುಂ ಅವರಿಗಿಂತ ಕಡಿಮೆ ವಚನ ಪ್ರಸ್ತುತಪಡಿಸಿದ್ದರು.

ಅತೀ ಹೆಚ್ಚು ವಚನಗಳನ್ನು ಹೇಳಿದ್ದರಿಂದ ಫಿಜಾಅಂಜುಂ ಅವರಿಗೆ ₹ 5 ಸಾವಿರ ನಗದು ಹಾಗೂ ಸ್ಮರಣಿಕೆ ಸಮೇತ ಪ್ರಥಮ ಬಹುಮಾನ ನೀಡಲಾಯಿತು. ಪ್ರಭಾಕರ ನೆಲವಿಗಿ ಪ್ರೌಢಶಾಲೆಯ ಶ್ರೀಶಾ ಗ್ಯಾರಿ ಅವರು ಎರಡನೇ ಬಹುಮಾನ ಹಾಗೂ ಅಕ್ಕಿಆಲೂರಿನ ಲಕ್ಷ್ಮಣ ಕೇಶಪ್ಪ ಶೇಷಗಿರಿ ಪ್ರೌಢಶಾಲೆಯ ವಿದ್ಯಾರ್ಥಿ ಅಂಜಲಿ ಚಕ್ರಸಾಲಿ ಅವರು ಮೂರನೇ ಬಹುಮಾನ ಪಡೆದುಕೊಂಡರು. ಬೊಮ್ಮನಹಳ್ಳಿ ಗುರುಪಾದೇಶ್ವರ ಪ್ರೌಢಶಾಲೆಯ ಸುಕನ್ಯಾ ಪಾಟೀಲ ಸಮಾಧಾನಕರ ಬಹುಮಾನಕ್ಕೆ ತೃಪ್ತರಾದರು.

ADVERTISEMENT

ಪ್ರಾಥಮಿಕ ಶಾಲೆ ವಿಭಾಗದಲ್ಲಿ ಅಕ್ಕಿಆಲೂರ ಜ್ಞಾನಭಾರತಿ ಶಾಲೆಯ ದರ್ಶಿನಿ ಯಳ್ಳೂರ ಪ್ರಥಮ, ಲಕ್ಷ್ಮಣ ಕೇಶಪ್ಪ ಶೇಷಗಿರಿ ಶಾಲೆಯ ಅನ್ವಿತಾ ಕೆ. ದ್ವಿತೀಯ, ಹಾನಗಲ್ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಶ್ರಾವಣಿ ಎಂ.ಕೆ ತೃತೀಯ, ಅಕ್ಕಿಆಲೂರ ಚನ್ನವೀರೇಶ್ವರ ಗುರುಕುಲದ ನಮ್ರತಾ ಗುಡದಳ್ಳಿ ಸಮಾಧಾನಕರ ಬಹುಮಾನ ಪಡೆದರು.

ಸಿದ್ದೇಶ್ವರ ಹುಣಸಿಕಟ್ಟಿ, ಜಿ.ಎಂ.ಅರಗೋಳ, ಆನಂದ ಇಂದೂರ, ಎಸ್.ನಿರ್ಮಲಾ, ಶಕುಂತಲಾ ಕೋಣನವರ ನಿರ್ಣಾಯಕರಾಗಿದ್ದರು.

‘ಫಿಜಾಅಂಜಂ ಅವರು ವಿಶ್ವಗುರು ಬಸವಣ್ಣ, ಅಕ್ಕ ಮಹಾದೇವಿ, ಅಂಬಿಗರ ಚೌಡಯ್ಯ, ಜೇಡರ ದಾಸಿಮಯ್ಯ, ಅಲ್ಲಮಪ್ರಭು ಸೇರಿದಂತೆ ಹಲವು ಶರಣರ ವಚನಗಳನ್ನು ಕಂಠಪಾಠ ಮಾಡಿದ್ದಾರೆ. 126 ವಚನಗಳನ್ನು ನಿರ್ಗಳವಾಗಿ ಪ್ರಸ್ತುತಪಡಿಸಿದರು. ಅವರ ಜ್ಞಾಪಕ ಶಕ್ತಿ ಹಾಗೂ ಬಸವಾದಿ ಶರಣರ ಬಗೆಗಿನ ಅಭಿಮಾನವನ್ನು ಕಂಡು ಆಯೋಜಕರಿಗೂ ಖುಷಿಯಾಯಿತು’ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪೂರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಫಿಜಾಅಂಜುಂ ಅವರ ತಂದೆ ದೀವಾನಸಾಬ, ಕೃಷಿಕರು. ತಾಯಿ ಹೀನಾಕೌಸರ ಗೃಹಿಣಿಯಾಗಿದ್ದಾರೆ. ಕಷ್ಟದಲ್ಲೂ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಜೊತೆಗೆ, ಬಸವಾದಿ ಶರಣರ ವಚನಗಳನ್ನು ಕಂಠಪಾಠ ಮಾಡಲೂ ಪ್ರೋತ್ಸಾಹಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.