ಹಾವೇರಿ: ಇಲ್ಲಿಯ ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಿಂದ (ಹಾವೆಮುಲ್) ಜಿಲ್ಲೆಯಾದ್ಯಂತ ಹೊಸದಾಗಿ ಪಾರ್ಲರ್‌ಗಳನ್ನು ಪ್ರಾರಂಭಿಸಲಾಗಿದ್ದು, ಒಕ್ಕೂಟದ ನಂದಿನಿ ಉತ್ಪನ್ನಕ್ಕೆ ಗ್ರಾಹಕರಿಂದ ಬೇಡಿಕೆ ಬಂದಿದೆ.
ಧಾರವಾಡ ಹಾಲು ಒಕ್ಕೂಟದಿಂದ ವಿಭಜನೆಗೊಂಡು ಪ್ರತ್ಯೇಕ ಒಕ್ಕೂಟವಾಗಿರುವ ಹಾವೆಮುಲ್ ಉತ್ಪನ್ನಗಳಿಗೆ ಬೇಡಿಕೆ ಇದ್ದರೂ ಹೊಸ ಪಾರ್ಲರ್‌ಗಳನ್ನು ಆರಂಭಿಸಲು ಸಾಕಷ್ಟು ಸಮಸ್ಯೆಗಳಿದ್ದವು. ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬರುತ್ತಿದ್ದಂತೆ, ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಹೊಸ ಪಾರ್ಲರ್‌ಗಳನ್ನು ಪ್ರಾರಂಭಿಸುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲಾ ಕೇಂದ್ರ ಹಾವೇರಿ ಹಾಗೂ ತಾಲ್ಲೂಕು ಕೇಂದ್ರ ರಾಣೆಬೆನ್ನೂರಿನಲ್ಲಿ ಏಕಕಾಲಕ್ಕೆ ನೂತನವಾಗಿ 20 ನಂದಿನಿ ಪಾರ್ಲರ್‌ಗಳನ್ನು ಆರಂಭಿಸಲಾಗಿದೆ. ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಎಸ್.ಎಂ. ಹಾಗೂ ಸದಸ್ಯರ ಸಮ್ಮುಖದಲ್ಲಿ ಪಾರ್ಲರ್‌ಗಳನ್ನು ಉದ್ಘಾಟಿಸಲಾಗಿದೆ.
ಒಕ್ಕೂಟದಿಂದ ತಯಾರಾಗುವ ನಂದಿನಿ ಹಾಲು, ತುಪ್ಪ, ಸಿಹಿ ಪದಾರ್ಥ ಸೇರಿದಂತೆ ಎಲ್ಲ ಬಗೆಯ ಹಾಲಿನ ಉತ್ಪನ್ನಗಳು ಪಾರ್ಲರ್‌ನಲ್ಲಿ ಇರಲಿವೆ. ಜೊತೆಗೆ, ಒಕ್ಕೂಟ ನಿಗದಿಪಡಿಸಿರುವ ದರದಲ್ಲಿಯೇ ಗ್ರಾಹಕರಿಗೆ ಸಿಗಲಿವೆ.
‘ಹಾಲು ಉತ್ಪಾದಕರೇ ಒಕ್ಕೂಟದ ಜೀವಾಳು. ಅವರಿಂದ ಹಾಲು ಖರೀದಿಸಿ, ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಇದ್ದರೂ ತಲುಪಿಸಲು ಆಗುತ್ತಿರಲಿಲ್ಲ. ಈಗ ಎಲ್ಲ ಕಡೆಯೂ ಪಾರ್ಲರ್‌ಗಳನ್ನು ತೆರೆಯಲಾಗುತ್ತಿದೆ. ಜನರಿಂದಲೂ ಉತ್ತಮ ಸ್ಪಂದನೆ ಸಿಗುತ್ತಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಎಸ್.ಎಂ. ತಿಳಿಸಿದರು.
‘ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಸಹಕಾರದಿಂದ, ಗ್ರಾಹಕರ ಬೇಡಿಕೆಗೆ ತಕ್ಕಂತೆ ಸದ್ಯ 20 ಕಡೆ ಹೊಸದಾಗಿ ಪಾರ್ಲರ್‌ಗಳನ್ನು ತೆರೆಯಲಾಗಿದೆ. ಅಗತ್ಯವಿದ್ದರೆ ಮತ್ತಷ್ಟು ಕಡೆಗಳಲ್ಲಿ ಪಾರ್ಲರ್ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
ಹಾವೆಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ, ‘ನಷ್ಟದಲ್ಲಿರುವ ಒಕ್ಕೂಟವನ್ನು ಲಾಭದತ್ತ ತರಲು ಪ್ರಯತ್ನಿಸಲಾಗುತ್ತಿದೆ. ಇದರ ಮೊದಲ ಹೆಜ್ಜೆಯಾಗಿ, ಹೊಸ ಪಾರ್ಲರ್‌ಗಳನ್ನು ಪ್ರಾರಂಭಿಸಲಾಗಿದೆ. ಮತ್ತಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.