ADVERTISEMENT

ಹಾವೇರಿ: ವಿಪತ್ತು ನಿರ್ವಹಣೆಗೆ ಬಂದ ರಕ್ಷಣಾ ಬೋಟ್‌

₹35 ಲಕ್ಷದ ರಕ್ಷಣಾ ಸಾಮಗ್ರಿ ಪೂರೈಕೆ: ನೆರೆ ನಿರ್ವಹಣೆಗೆ ಸಜ್ಜಾದ ಅಗ್ನಿಶಾಮಕ ಸಿಬ್ಬಂದಿ

ಸಿದ್ದು ಆರ್.ಜಿ.ಹಳ್ಳಿ
Published 10 ಮೇ 2022, 19:30 IST
Last Updated 10 ಮೇ 2022, 19:30 IST
ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಬಳಸುವ ರಕ್ಷಣಾ ಸಾಮಗ್ರಿಗಳೊಂದಿಗೆ ಸಜ್ಜಾಗಿರುವ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ
ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಬಳಸುವ ರಕ್ಷಣಾ ಸಾಮಗ್ರಿಗಳೊಂದಿಗೆ ಸಜ್ಜಾಗಿರುವ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ   

ಹಾವೇರಿ: ಅತಿವೃಷ್ಟಿ, ಪ್ರವಾಹ, ಮಳೆ ಅವಘಡ ಮುಂತಾದ ಪ್ರಕೃತಿ ವಿಕೋಪಗಳನ್ನು ನಿರ್ವಹಣೆ ಮಾಡಲು ಅಗತ್ಯವಾಗಿ ಬೇಕಿದ್ದ ₹35 ಲಕ್ಷ ವೆಚ್ಚದ ರಕ್ಷಣಾ ಸಾಮಗ್ರಿಗಳು ಜಿಲ್ಲಾ ಅಗ್ನಿಶಾಮಕ ಠಾಣೆಗೆ ಪೂರೈಕೆಯಾಗಿವೆ. ಇದರಿಂದ ಮಳೆಗಾಲದ ಅವಾಂತರಗಳನ್ನು ಸಮರ್ಥವಾಗಿ ಎದುರಿಸಲು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಿಬ್ಬಂದಿಗೆ ಆನೆಬಲ ಬಂದಂತಾಗಿದೆ.

ಅಗತ್ಯವಾಗಿ ಬೇಕಿದ್ದ ರಕ್ಷಣಾ ಸಾಮಗ್ರಿಗಳನ್ನು ಪೂರೈಸಲು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಸ್ತಾವ ಸಲ್ಲಿಸಿದ್ದರು. ಅದರಂತೆ,ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ರಕ್ಷಣಾ ಸಾಮಗ್ರಿಗಳ ಖರೀದಿ ಕುರಿತು ತೀರ್ಮಾನ ತೆಗೆದುಕೊಂಡು, ಅಲ್ಪಾವಧಿ ಟೆಂಡರ್‌ ಕರೆಯಲಾಗಿತ್ತು. ಟೆಂಡರ್‌ ಪಡೆದುಕೊಂಡ ಖಾಸಗಿ ಸಂಸ್ಥೆ 9 ವೈವಿಧ್ಯಮಯ ರಕ್ಷಣಾ ಸಾಮಗ್ರಿಗಳನ್ನು ಪೂರೈಕೆ ಮಾಡಿದೆ.

ಹೈ ಡೆನ್ಸಿಟಿ ಪಾಲಿಎಥಿಲೀನ್‌ರಕ್ಷಣಾ ಬೋಟ್‌ಗಳು–3, ಲೈಫ್‌ ಜಾಕೆಟ್‌ಗಳು–100, ಜೀವರಕ್ಷಕ ಟ್ಯೂಬ್‌ಗಳು–40, ಹೆಡ್‌ಲೈಟ್‌–50, ರೀಚಾರ್ಚಬಲ್‌ ಟಾರ್ಚ್‌ಗಳು–20, ನಲವತ್ತು ಮೀಟರ್‌ ಉದ್ದದ ನೈಲಾನ್‌ ಹಗ್ಗಗಳು–33, ಬೋಲ್ಟ್‌ ಕಟರ್‌– 15, ಡೋರ್‌ ಬ್ರೇಕರ್‌–1 ಹಾಗೂ ಇತರ ಸಲಕರಣೆಗಳು ಪೂರೈಕೆಯಾಗಿವೆ.

ADVERTISEMENT

3 ಹೊಸ ಬೋಟ್‌:ಹಾವೇರಿ ಜಿಲ್ಲೆಯ ಅಗ್ನಿಶಾಮಕ ಇಲಾಖೆಯಲ್ಲಿ ಮೊದಲು ಒಂದೇ ‘ಇನ್‌ಫ್ಲೇಟಬಲ್‌ ಬೋಟ್‌’ ಇತ್ತು. ಏಕಕಾಲದಲ್ಲಿ ಎರಡು ಅಥವಾ ಮೂರು ಕಡೆ ಜಲ ದುರಂತಗಳು ಸಂಭವಿಸಿದರೆ ನಿರ್ವಹಣೆಗೆ ತೊಡಕಾಗುತ್ತಿತ್ತು. ಕಳೆದ ವರ್ಷ ಬೆಳಗಾವಿ ನೆರೆ ನಿರ್ವಹಣೆಗೆ ಹಾವೇರಿಯ ಬೋಟ್‌ ಅನ್ನು ತೆಗೆದುಕೊಂಡು ಹೋಗಲಾಗಿತ್ತು. ಅದೇ ಸಂದರ್ಭ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ಅಗತ್ಯವಿದ್ದ ಬೋಟ್‌ ಅನ್ನು ಚಿತ್ರದುರ್ಗದಿಂದ ತರಿಸಿಕೊಳ್ಳಲಾಗಿತ್ತು.

ಈ ಬಾರಿ ಮಳೆಗಾಲದ ವಿಪತ್ತು ನಿರ್ವಹಣೆಗೆ ಅತ್ಯುತ್ತಮ ಗುಣಮಟ್ಟದ ಮೂರು ಹೊಸ ಬೋಟ್‌ಗಳು ಬಂದಿರುವ ಕಾರಣ, ಜಿಲ್ಲೆಯಲ್ಲಿ ರಕ್ಷಣಾ ಬೋಟ್‌ಗಳ ಸಂಖ್ಯೆ ನಾಲ್ಕಕ್ಕೇರಿದೆ. ಅದರ ಜೊತೆಗೆ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲು ಹೆಡ್‌ಲೈಟ್‌ ಇಲ್ಲದೇ ಅಗ್ನಿಶಾಮಕ ಸಿಬ್ಬಂದಿ ಪರದಾಡುತ್ತಿದ್ದರು. ಹೀಗಾಗಿ ಹೊಸ 50 ಹೆಡ್‌ಲೈಟ್‌ಗಳನ್ನು ತರಿಸಲಾಗಿದೆ. ಅಗ್ನಿ ಅವಘಡಗಳಲ್ಲಿ ಬಾಗಿಲು ಮುರಿಯಲು ಬೇಕಿದ್ದ ‘ಡೋರ್‌ ಬ್ರೇಕರ್‌’ ಉಪಕರಣವನ್ನೂ ತರಿಸಲಾಗಿದೆ.

ಯಶಸ್ವಿ ಕಾರ್ಯಾಚರಣೆ:‘2019ರಲ್ಲಿ ನೆರೆ ಉಂಟಾದಾಗ ವರದಹಳ್ಳಿಯ ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದ್ದೆವು. ಕಲಕೋಟಿ ಸಮೀಪ ಕರ್ಜಗಿ ಸೇತುವೆ ಬಳಿ ಬೈಕ್‌ ದಾಟುವಾಗ ನೀರಿನ ಸೆಳೆತಕ್ಕೆ ಸಿಲುಕಿದ್ದ ಕಾಗಿನೆಲೆಯ ಪೊಲೀಸ್‌ ಸಿಬ್ಬಂದಿಯನ್ನು ರಕ್ಷಿಸಿದ್ದೆವು. ಹಂದಿಗನೂರು ಸಮೀಪ ವರದಾ ನದಿ ಪ್ರವಾಹದಿಂದ ಮರದಲ್ಲಿ ಸಿಲುಕಿದ್ದ 50ಕ್ಕೂ ಹೆಚ್ಚು ಮಂಗಗಳನ್ನು ಹಗ್ಗದ ಸಹಾಯದಿಂದ ಪಾರು ಮಾಡಿದ್ದೆವು’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ ಅಗಡಿ ಪ್ರಮುಖ ಕಾರ್ಯಾಚರಣೆಗಳನ್ನು ನೆನಪು ಮಾಡಿಕೊಂಡರು.

‘ಮಳೆಗಾಲದಲ್ಲಿ ಸುರಕ್ಷತೆಗೆ ಆದ್ಯತೆ ನೀಡಿ’
‘ಮಳೆಗಾಲದಲ್ಲಿ ನೀರಿನ ಒಳಹರಿವು ಜಾಸ್ತಿ ಇರುವುದರಿಂದ ಕೆರೆಯಲ್ಲಿ ಬಟ್ಟೆ ತೊಳೆಯುವುದು, ಜಾನುವಾರು ಮೈ ತೊಳೆಯುವುದನ್ನು ಜನರು ನಿಯಂತ್ರಿಸಬೇಕು. ಹೊಳೆ ಮತ್ತು ಕೆರೆಗಳಲ್ಲಿ ಯುವಕರು ಈಜಲು ಹೋಗಬಾರದು. ನದಿ ಮತ್ತು ಹೊಳೆಗಳು ಮೈದುಂಬಿ ಸೇತುವೆ ಮೇಲೆ ಹರಿಯುವಾಗ ದಾಟುವ ದುಸ್ಸಾಹಸಕ್ಕೆ ಜನರು ಮುಂದಾಗಬಾರದು. ಗುಡುಗು–ಸಿಡಿಲು ಸಂದರ್ಭ ಗಿಡ–ಮರಗಳ ಕೆಳಗಡೆ ನಿಲ್ಲದೆ, ಸಮೀಪದ ಕಟ್ಟಡದೊಳಗೆ ನಿಲ್ಲಬೇಕು’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ ಅಗಡಿ ಸಲಹೆ ನೀಡಿದರು.

**

ಎನ್‌ಡಿಆರ್‌ಎಫ್‌ ಜೊತೆ ಹೆಗ್ಗೇರಿ ಕೆರೆಯಲ್ಲಿ ಅಣಕು ಕಾರ್ಯಾಚರಣೆ ನಡೆಸಿದ್ದೇವೆ.ವಿಪತ್ತು ನಿರ್ವಹಣೆಗೆ ಹೊಸ ರಕ್ಷಣಾ ಸಾಮಗ್ರಿ ಉಪಯುಕ್ತವಾಗಿವೆ.
– ಸೋಮಶೇಖರ ಅಗಡಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ

**

ಎನ್‌ಡಿಆರ್‌ಎಫ್‌ ಅನುದಾನದಲ್ಲಿ ರಕ್ಷಣಾ ಉಪಕರಣಗಳನ್ನು ಖರೀದಿಸಲಾಗಿದೆ. ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ
– ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.