
ಹಾವೇರಿ: ‘ಮನುಷ್ಯ ಪ್ರಕೃತಿಯ ಒಂದು ಭಾಗ. ಪ್ರಕೃತಿ ಸಹಜ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಯುತ ಜೀವನ ಸಾಗಿಸಬಹುದು’ ಎಂದು ಜನನಿ ಯೋಗ, ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ರಾಜೇಶ್ ಪಾದೇಕಲ್ ಹೇಳಿದರು.
ನಗರದ ಹುಕ್ಕೇರಿಮಠ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು.
‘ಭಾರತದ ಸನಾತನ ಋಷಿ ಪರಂಪರೆಯು ನಮಗೆ ಯೋಗ, ಪ್ರಾಣಾಯಾಮ ವಿದ್ಯೆಯನ್ನು ಬಳುವಳಿಯಾಗಿ ನೀಡಿದೆ. ಔಷಧ ರಹಿತವಾಗಿ, ಸನಾತನ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ರೋಗಗಳು ಬರದಂತೆ ಮಾಡಬಹುದು’ ಎಂದರು.
ಉದಯಶಂಕರ ಭಟ್ ಮಾತನಾಡಿ, ‘ಯೋಗ ನಮ್ಮ ಜೀವನಕ್ರಮವಾಗಬೇಕು. ಆಗ ಯಾವುದೇ ರೋಗ ನಮ್ಮನ್ನು ಬಾಧಿಸುವುದಿಲ್ಲ. ಇದರ ಜತೆಗೆ ನಮ್ಮ ಆಚಾರ-, ವಿಚಾರ, ಆಹಾರ, ವಿಹಾರ, ಜೀವನಶೈಲಿಯಲ್ಲಿ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ರೋಗ ಬಾರದಂತೆ ತಡೆಯಬಹುದು’ ಎಂದರು.
ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಶೇಗುಣಸಿ ಮಠದ ಮಹಾಂತಪ್ರಭು ಸ್ವಾಮೀಜಿ, ಬೆಳಗಾವಿಯ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಲಯನ್ಸ್ ಅಧ್ಯಕ್ಷ ಎ.ಎಚ್. ಕಬ್ಬಿಣಕಂತಿಮಠ, ಶಿವರಾಜ ಮರ್ತೂರು, ರಮೇಶ ಪಾಟೀಲ, ಪಿ.ಡಿ. ಶಿರೂರು, ಎಸ್.ಎಸ್.ಮುಷ್ಟಿ, ವಿ.ಆರ್. ಹಾವನೂರ, ಸುಭಾಸ್ ಉಲ್ಲಾಳದ, ನಿತಿನ್ ಹೊರಡಿ, ಪಿ.ಸಿ. ಹಿರೇಮಠ, ಇನ್‌ಸ್ಪೆಕ್ಟರ್ ಮೋತಿಲಾಲ್ ಪವಾರ್ ಹಾಗೂ ಇತರರು ಇದ್ದರು. 200ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಪಾಲ್ಗೊಂಡು, ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಲಹೆ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.