ADVERTISEMENT

ರಾಣೆಬೆನ್ನೂರು | ಎನ್‌ಡಿಎ ಒಕ್ಕೂಟದಿಂದ ಪ್ರತಿಭಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 2:12 IST
Last Updated 16 ನವೆಂಬರ್ 2025, 2:12 IST
ಅರುಣಕುಮಾರ ಪೂಜಾರ 
ಅರುಣಕುಮಾರ ಪೂಜಾರ    

ರಾಣೆಬೆನ್ನೂರು: ರಾಜ್ಯದ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನ.17 ರಂದು 10 ಗಂಟೆಗೆ ಎನ್‌ಡಿಎ ಒಕ್ಕೂಟದ ಬಿಜೆಪಿ ಮತ್ತು ಜೆಡಿಎಸ್ ಹಾಗೂ ರೈತ ಮೋರ್ಚಾ, ವಿವಿಧ ರೈತ ಸಂಘಟನೆಗಳ ಆಶ್ರಯದಲ್ಲಿ ನಗರದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಬ್ಬು, ಮೆಕ್ಕೆಜೋಳ, ಭತ್ತ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ, ಇಲ್ಲಿನ ಹೆಸ್ಕಾಂ ವಿನಾಯಕ ದೇವಸ್ಥಾನದಿಂದ ಬೃಹತ್‌ ಪ್ರತಿಭಟನೆಯ ಮೆರವಣಿಗೆ ಮೂಲಕ ಇಲ್ಲಿನ ಬಸ್ ನಿಲ್ದಾಣ, ಕೋರ್ಟ್‌ ವೃತ್ತ, ಕುರಬಗೇರಿ ಕ್ರಾಸ್, ಹಳೇ ಪಿ.ಬಿ ರಸ್ತೆ ಮೂಲಕ ಸಂಚರಿಸಿ, ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಈ ಪ್ರತಿಭಟನೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ರೈತ ಮೋರ್ಚಾ, ವಿವಿಧ ರೈತ ಸಂಘಟೆನಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಬಿಹಾರ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿದೆ. ವಿಶ್ವ ನಾಯಕ ಈ ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರು ಪುನಃ ಪ್ರಧಾನಿ ಆಗಲಿರುವುದು ಧೃಡಪಟ್ಟಿದೆ. ಮೋದಿ ಅವರನ್ನು ಬೆಂಬಲಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವೈದ್ಯ ಡಾ.ಬಸವರಾಜ ಕೇಲಗಾರ, ಕೆ.ಶಿವಲಿಂಗಪ್ಪ, ಎಸ್‌.ಎಸ್‌.ರಾಮಲಿಂಗಣ್ಣನವರ, ಸುಭಾಸ ಶಿರಗೇರಿ, ಸಿದ್ದು ಚಿಕ್ಕಬಿದರಿ, ಮಂಜುನಾಥ ಕಾಟಿ, ಎ.ಬಿ.ಪಾಟೀಲ, ಚೋಳಪ್ಪ ಕಸವಾಳ, ವೈದ್ಯ ಡಾ.ನಾರಾಯಣ ಪವಾರ, ಮಲ್ಲಿಕಾರ್ಜುನ ಅಂಗಡಿ, ಭಾರತಿ ಜಂಬಗಿ, ಪ್ರಕಾಶ ಪೂಜಾರ, ನಿಂಗರಾಜ ಕೋಡಿಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.