ಹಾವೇರಿ: ನಿತ್ಯವೂ ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಕಾಯಕದಲ್ಲಿ ತೊಡಗಿರುವ ಸೇನಾನಿಗಳಾದ ಪತ್ರಿಕಾ ವಿತರಕರ ದಿನವನ್ನು ನಗರದಲ್ಲಿ ಶುಕ್ರವಾರ ನಸುಕಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಶುಕ್ರವಾರ ನಸುಕಿನಲ್ಲಿ ಎಂದಿನಂತೆ ಬಂದ ಪತ್ರಿಕಾ ವಿತರಕರು, ಓದುಗರಿಗೆ ಪತ್ರಿಕೆಗಳನ್ನು ತಲುಪಿಸಲು ಬಂಡಲ್‌ಗಳನ್ನು ಹೊಂದಿಸಿಟ್ಟುಕೊಂಡು ಸಿದ್ಧತೆ ಮಾಡಿಕೊಂಡರು. ಬಳಿಕ, ಒಂದೆಡೆ ಸೇರಿ ಕೇಕ್ ಕತ್ತರಿಸಿ ಸಂಭ್ರಮಪಟ್ಟರು. ಪರಸ್ಪರ ಕೇಕ್ ತಿನ್ನಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.
ಮನೆ, ಕಚೇರಿ ಹಾಗೂ ಇತರೆ ಸ್ಥಳಗಳಿಗೆ ನಿತ್ಯವೂ ಪತ್ರಿಕೆಗಳನ್ನು ತಲುಪಿಸುವ ಸಂದರ್ಭದಲ್ಲಿ ಎದುರಿಸಿದ ಸವಾಲುಗಳು, ಅನುಭವ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು.
‘ಸಮಾಜದ ಆಗು–ಹೋಗುಗಳು, ಪ್ರಚಲಿತ ವಿದ್ಯಮಾನ ಸೇರಿದಂತೆ ಮಾಹಿತಿ ಕಣಜ ಹೊತ್ತು ಬರುವ ಪತ್ರಿಕೆಗಳಿಗೆ, ಗೌರವದ ಸ್ಥಾನವಿದೆ. ಇಂಥ ಪತ್ರಿಕೆಗಳನ್ನು ಓದುಗರಿಗೆ ತಲುಪಿಸುತ್ತಿರುವ ಹೆಮ್ಮೆ ನಮಗಿದೆ. ಈ ಪತ್ರಿಕೆಗಳಿಂದ ನಮ್ಮ ಗೌರವ ಹೆಚ್ಚಾಗಿದೆ. ಜನರು ಗೌರವದಿಂದ ಕಾಣುತ್ತಾರೆ’ ಎಂದು ಹಾವೇರಿ ಪತ್ರಿಕಾ ವಿತರಕ ಶ್ರೀಧರ ಬ್ಯಾಡಗಿ ಹೇಳಿದರು.
ಪತ್ರಿಕಾ ವಿತರಕ ವಿರೇಶ ಹ್ಯಾಡ್ಲ ಮಾತನಾಡಿ, ‘ಪ್ರಜಾವಾಣಿ’ ಪತ್ರಿಕೆಯನ್ನು ಮನೆ ಮನೆಗಳಿಗೆ ವಿತರಣೆ ಮಾಡುತ್ತಿದ್ದೇನೆ. ನಮ್ಮ ಜೊತೆಯಲ್ಲಿ ಯುವಕರು ಹಾಗೂ ಇತರರು ಕೈ ಜೋಡಿಸಿದ್ದಾರೆ. ಎಲ್ಲರ ಸಹಕಾರಿಂದ ನನ್ನ ಕೆಲಸ ಸರಾಗವಾಗಿ ಸಾಗಿದೆ, ಆರ್ಥಿಕವಾಗಿಯೂ ಅನುಕೂಲವಾಗಿದೆ. ಆದರೆ, ಮನೆಗಳಿಗೆ ಹೋದ ಸಂದರ್ಭದಲ್ಲಿ ಓದುಗರು ಬಿಲ್ ಕೊಟ್ಟರೆ ನಮಗೆ ಹೆಚ್ಚು ಆನಂದವಾಗುತ್ತದೆ’ ಎಂದು ತಿಳಿಸಿದರು.
ಪತ್ರಿಕಾ ವಿತರಕರಾದ ನಂದೀಶ್ ಮಾಡ್ಲಿ, ಶಿವಾನಂದ ಬಣಕಾರ, ವರುಣ್ ಹುಬ್ಬಳ್ಳಿ, ದರ್ಶನ ಗೋಡ್ಡೆಮ್ಮಿ, ಶಶಿ ಮಂಟಗಣಿ,ವಿನಾಯಕ ಮಂಟಗಣಿ, ವಿನಾಯಕ ಅರ್ಕಾಚಾರಿ, ಆನಂದ ಹಳಕೊಪ್ಪ, ಸಂಜೀವ ಕೊಡಿಹಳ್ಳಿ, ಬಸವರಾಜ ಬೆನ್ನೂರ, ಅಶೋಕ್ ಮಜ್ಜಗಿ ಇದ್ದರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಹಾನಗಲ್, ಶಿಗ್ಗಾವಿ, ಸವಣೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ತಾಲ್ಲೂಕು ಕೇಂದ್ರಗಳು ಹಾಗೂ ಹೋಬಳಿ, ಗ್ರಾಮ ಮಟ್ಟದಲ್ಲಿಯೂ ಪತ್ರಿಕಾ ವಿತರಕರು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಪತ್ರಿಕಾ ವಿತರಕರ ದಿನವನ್ನು ಆಚರಿಸಿದರು.
ಒಕ್ಕೂಟದಿಂದ ಆಚರಣೆ: ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಹಾವೇರಿ ತಾಲ್ಲೂಕು ಘಟಕದಿಂದ ಪತ್ರಿಕಾ ವಿತರಕರ ದಿನವನ್ನು ಶುಕ್ರವಾರ ನಸುಕಿನಲ್ಲಿ ಆಚರಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಕರಬಸಪ್ಪ ಹಳದೂರ, ಕಾರ್ಯದರ್ಶಿ ಬೀರಪ್ಪ ಕೂರಗುಂದ, ಜಯಪ್ಪ ಬಣಕಾರ, ಸದಸ್ಯರಾದ ಚೇತನ ರಾಜಪುರೋಹಿತ, ಬಸವರಾಜ ಬೆನ್ನೂರು, ಚಂದ್ರಶೇಖರ ಅಕ್ಕಿ, ಸಂಗಮೇಶ ರಾಯಬಾಗ, ಸಂಜೀವ ಕೋಡಿಹಳ್ಳಿ, ಶಿವನಗೌಡ ಆಲದಕಟ್ಟಿ, ಶ್ರೀಧರ್ ಬ್ಯಾಡಗಿ, ಮಂಜುನಾಥ ಶಿಗ್ಲಿ, ಶಂಭು ದುರ್ಗದ, ಆನಂದ ಹಳಕೊಪ್ಪ, ಮಲ್ಲಿಕಾರ್ಜುನ, ಅಶೋಕ ಬಡಿಗೇರ, ನಿಂಗಪ್ಪ ಕರ್ಜಗಿ, ಅಶೋಕ, ದರ್ಶನ, ವಿನಾಯಕ, ವರುಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.