ADVERTISEMENT

ಹಾವೇರಿ: ಕೊಕ್ಕೊ ಆಟಗಾರರ ಕನಸು ಭಗ್ನ

ಕೇರಳದ ಟೂರ್ನಿಗೆ ಕಳುಹಿಸಲು ಹಾವೇರಿ ವಿ.ವಿಯಲ್ಲಿ ಅನುದಾನದ ಕೊರತೆ– ಆರೋಪ

ಸಿದ್ದು ಆರ್.ಜಿ.ಹಳ್ಳಿ
Published 23 ಡಿಸೆಂಬರ್ 2023, 4:31 IST
Last Updated 23 ಡಿಸೆಂಬರ್ 2023, 4:31 IST
ಸವಣೂರಿನಲ್ಲಿ ಈಚೆಗೆ ನಡೆದಿದ್ದ ಹಾವೇರಿ ವಿಶ್ವವಿದ್ಯಾಲಯದ ಅಂತರ ಮಹಾವಿದ್ಯಾಲಯಗಳ ಪುರುಷರ ಕೊಕ್ಕೊ ಪಂದ್ಯಾವಳಿಯ ದೃಶ್ಯ
ಸವಣೂರಿನಲ್ಲಿ ಈಚೆಗೆ ನಡೆದಿದ್ದ ಹಾವೇರಿ ವಿಶ್ವವಿದ್ಯಾಲಯದ ಅಂತರ ಮಹಾವಿದ್ಯಾಲಯಗಳ ಪುರುಷರ ಕೊಕ್ಕೊ ಪಂದ್ಯಾವಳಿಯ ದೃಶ್ಯ   

ಹಾವೇರಿ: ಅಂತರ ವಿಶ್ವವಿದ್ಯಾಲಯಗಳ ಕೊಕ್ಕೊ ಟೂರ್ನಿಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಹಾವೇರಿ ವಿಶ್ವವಿದ್ಯಾಲಯದ 15 ಆಟಗಾರರ ಕನಸು ಭಗ್ನವಾಗಿದೆ. 

ಕೇರಳದ ಕ್ಯಾಲಿಕಟ್‌ನಲ್ಲಿ ಡಿಸೆಂಬರ್ 26ರಿಂದ 30ರವರೆಗೆ ನಡೆಯುವ ‘ಎಐಯು (ಅಸೋಸಿಯೇಷನ್‌ ಆಫ್‌ ಇಂಡಿಯನ್‌ ಯೂನಿವರ್ಸಿಟಿ)–ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಕೊಕ್ಕೊ ಪುರುಷರ ಟೂರ್ನಿಗೆ ಆಯ್ಕೆಯಾಗಿದ್ದ ಹಾವೇರಿ ವಿಶ್ವವಿದ್ಯಾಲಯದ ಕೊಕ್ಕೊ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲು ಆಗದಿರುವ ಕಾರಣ ನಿರಾಸೆಗೊಂಡಿದ್ದಾರೆ.

‘ಕೇರಳದ ಟೂರ್ನಿಗೆ ಹೋಗಲು ಲಗೇಜ್‌ ಸಿದ್ಧಪಡಿಸಿಕೊಳ್ಳಬೇಕು. ನಿಮಗೆಲ್ಲರಿಗೂ ವಿಶೇಷ ಕ್ಯಾಂಪ್‌ ನಡೆಸಿ, ಉತ್ತಮ ತರಬೇತಿ ನೀಡಿ ಕರೆದೊಯ್ಯುತ್ತೇವೆ ಎಂದು ನಮ್ಮ ಕಾಲೇಜುಗಳ ದೈಹಿಕ ಶಿಕ್ಷಣ ತರಬೇತುದಾರರು ತಿಳಿಸಿದ್ದರು. ಆದರೆ, ಈಗ ಹಾವೇರಿ ವಿಶ್ವವಿದ್ಯಾಲಯದಿಂದ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ ನಮಗೆ ಟೂರ್ನಿಯಲ್ಲಿ ಭಾಗವಹಿಸಲು ಆಗುತ್ತಿಲ್ಲ’ ಎಂದು ಕ್ರೀಡಾಪಟುಗಳು ಅಳಲು ತೋಡಿಕೊಂಡರು. 

ADVERTISEMENT

15 ಆಟಗಾರರ ಆಯ್ಕೆ:

‘ಜಿಲ್ಲೆಯ ಸವಣೂರಿನಲ್ಲಿ ಡಿಸೆಂಬರ್ 5 ಮತ್ತು 6ರಂದು 2023–24ನೇ ಸಾಲಿನ ಹಾವೇರಿ ವಿಶ್ವವಿದ್ಯಾಲಯದ ಪುರುಷ ಮತ್ತು ಮಹಿಳೆಯರ ಅಂತರ ಮಹಾವಿದ್ಯಾಲಯಗಳ ಕೊಕ್ಕೊ ಟೂರ್ನಿ ನಡೆದಿತ್ತು. ಇಲ್ಲಿ ಗೆದ್ದ ತಂಡಗಳ ಆಟಗಾರರನ್ನು ಆಯ್ಕೆ ಮಾಡಿ, ಹಾವೇರಿ ವಿಶ್ವವಿದ್ಯಾಲಯದ ತಂಡಕ್ಕೆ 15 ಪುರುಷ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ತಂಡವೇ ಕೇರಳದಲ್ಲಿ ನಡೆಯುವ ಟೂರ್ನಿಗೆ ಹೋಗಬೇಕಿತ್ತು’ ಎಂದು ದೈಹಿಕ ಶಿಕ್ಷಣ ತರಬೇತುದಾರರೊಬ್ಬರು ತಿಳಿಸಿದರು. 

‘ಅಪ್ಪ ತೀರಿಕೊಂಡಿದ್ದಾರೆ. ಅಮ್ಮ ಕೂಲಿಗೆಲಸ ಮಾಡಿ ನಮ್ಮನ್ನು ಓದಿಸುತ್ತಿದ್ದಾರೆ. ನಾವು ಕಷ್ಟಪಟ್ಟು ಓದಿ, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದರೆ, ಮುಂದೆ ಉದ್ಯೋಗ ಪಡೆಯಲು ಅನುಕೂಲ.ನಮ್ಮೆಲ್ಲರ ಕನಸು ನುಚ್ಚು ನೂರಾಗಿದೆ’ ಎಂದು ಕೊಕ್ಕೊ ಆಟಗಾರರಾದ ಲಕ್ಷ್ಮಣ ಮರಡೂರ, ಬಸಯ್ಯ ಸಾಲಿಮಠ ತಿಳಿಸಿದರು.

ವಿದ್ಯಾರ್ಥಿಗಳ ಪ್ರವೇಶ ಪಡೆಯುವಾಗ ಹಾವೇರಿ ವಿಶ್ವವಿದ್ಯಾಲಯ ಕ್ರೀಡಾಶುಲ್ಕ ಪಡೆದಿತ್ತು. ಈ ಹಣದಲ್ಲೇ ಕೊಕ್ಕೊ ಟೂರ್ನಿಗೆ ಕ್ರೀಡಾಪಟುಗಳನ್ನು ಕಳುಹಿಸಬಹುದಿತ್ತು. ಆಟಗಾರರಿಗೆ ಅನ್ಯಾಯವಾಗಿದೆ.

– ಬಸವರಾಜ ಎಸ್‌. ಹಾವೇರಿ ಜಿಲ್ಲಾ ಸಹ ಕಾರ್ಯದರ್ಶಿ ಎಸ್‌ಎಫ್‌ಐ

‘ಹಾವೇರಿ ವಿಶ್ವವಿದ್ಯಾಲಯಕ್ಕೆ ಅನುದಾನವೇ ಬಂದಿಲ್ಲ’

‘ಹಾವೇರಿ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಎರಡನೇ ಮತ್ತು ಮೂರನೇ ವರ್ಷದಲ್ಲಿ ಓದುತ್ತಿರುವ ಪದವಿ ವಿದ್ಯಾರ್ಥಿಗಳು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬರುತ್ತಾರೆ. ನಮ್ಮ ವಿಶ್ವವಿದ್ಯಾಲಯದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಟೂರ್ನಿಗೆ ಕಳುಹಿಸಲು ಕ್ರೀಡಾ ಅನುಭವ ಕಡಿಮೆ ಇದ್ದು ಪರಿಣತ ತಂಡಗಳ ಜೊತೆ ಸೆಣಸಾಡಲು ಸಾಧ್ಯವಿಲ್ಲ. ವಿಶಾಖಪಟ್ಟಣದಲ್ಲಿ ನಡೆದ ಕಬಡ್ಡಿ ಟೂರ್ನಿಯಲ್ಲಿ ನಮ್ಮ ವಿಶ್ವವಿದ್ಯಾಲಯದ ತಂಡ ಸೋತಿದೆ. ಮುಂದಿನ ವರ್ಷ ಕಳುಹಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.