ADVERTISEMENT

ಆ.25ರಂದು ಡಿಸಿ ಕಚೇರಿಗೆ ಮುತ್ತಿಗೆ: ರಾಮಣ್ಣ ಕೆಂಚಳ್ಳೇರ ಹೇಳಿಕೆ

ವಿದ್ಯುತ್‌ ಖಾಸಗೀಕರಣಕ್ಕೆ ವಿರೋಧ: ರಾಮಣ್ಣ ಕೆಂಚಳ್ಳೇರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 13:31 IST
Last Updated 19 ಆಗಸ್ಟ್ 2022, 13:31 IST
ರಾಮಣ್ಣ ಕೆಂಚಳ್ಳೇರ, ರೈತ ಮುಖಂಡ  
ರಾಮಣ್ಣ ಕೆಂಚಳ್ಳೇರ, ರೈತ ಮುಖಂಡ     

ಹಾವೇರಿ: ‘ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಸುರಿದ ಅಕಾಲಿಕ ಮಳೆಯಿಂದ ರೈತರು ಅಪಾರ ಬೆಳೆ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಅತಿವೃಷ್ಟಿ ಜಿಲ್ಲೆ ಎಂದು ಘೋಷಣೆ ಮಾಡಬೇಕು ಹಾಗೂ ವಿದ್ಯುತ್ ಖಾಸಗೀಕರಣ ಕೈಬಿಡಬೇಕು ಎಂದು ಆಗ್ರಹಿಸಿ ಆ.25ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಕೃಷಿ ಇಲಾಖೆ ಪಾರದರ್ಶಕತೆಯಿಂದ ಸಮೀಕ್ಷೆ ನಡೆಸದೇ ಕೇವಲ 66 ಸಾವಿರ ಹೆಕ್ಟೇರ್ ಪ್ರದೇಶ ನಷ್ಟವಾಗಿದೆ ಎಂದು ಸಮೀಕ್ಷೆ ವರದಿ ಸಿದ್ಧಪಡಿಸಿರುವುದು ರೈತರಿಗೆ ಮಾಡಿರುವ ಅನ್ಯಾಯವಾಗಿದೆ. ಕೂಡಲೇ ಮರು ಸಮೀಕ್ಷೆ ಮಾಡಿ ಸರ್ಕಾರಕ್ಕೆ ವಾಸ್ತವ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸೇರಿ ಪ್ರತಿ ಹೆಕ್ಟೇರ್‌ಗೆ ₹13,600 ಪರಿಹಾರ ಕೊಡುವುದಾಗಿ ನಿರ್ಧರಿಸಿದೆ. ಆದರೆ ಈ ಹಣ ಬೀಜ ಗೊಬ್ಬರ ಖರೀದಿಗೂ ಸಾಲುವುದಿಲ್ಲ. ಆದ್ದರಿಂದ 1 ಎಕರೆಗೆ ₹25,000 ಹಾಗೂ ತೋಟಗಾರಿಕೆ ಬೆಳೆಗೆ ಎಕರೆಗೆ ₹50 ಸಾವಿರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ADVERTISEMENT

ತುಂಗಾ ಮೇಲ್ದಂಡೆ ಯೋಜನೆಗೆ ರೈತರು ಜಮೀನು ಕಳೆದುಕೊಂಡು 20 ವರ್ಷ ಕಳೆದರೂ, ನಾಲ್ಕು ಸರ್ಕಾರ ಆಡಳಿತ ನಡೆಸಿದರೂ ರೈತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ, ಮುಖ್ಯಮಂತ್ರಿಗಳು ಈಗಲಾದರೂ ಭೂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಭೂಸ್ವಾಧೀನ ಮಾಡಿಕೊಂಡ ದಿನದಿಂದ ಇಲ್ಲಿವರೆಗೂ ಬಡ್ಡಿ ಕೊಡಬೇಕು. ಆದರೆ ಇಲಾಖೆ ಅಧಿಕಾರಿಗಳು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುತ್ತಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ದೂರಿದರು.

‘ಹಸಿ ಬರಗಾಲ’ ಎಂದು ಘೋಷಿಸಿ

ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಮಳೆಯಿಂದಾಗಿ ಜಿಲ್ಲೆಯಲ್ಲಿ ಶೇ 60ಕ್ಕಿಂತಲೂ ಹೆಚ್ಚು ಪ್ರದೇಶದ ಬೆಳೆ ಹಾನಿಯಾಗಿದೆ. ಬರಗಾಲ ಬಿದ್ದರೆ ಬಿತ್ತನೆ ಮಾಡುವುದಿಲ್ಲ, ಈಗ ಬಿತ್ತನೆ ಮಾಡಿರುವ ಬೀಜ, ಗೊಬ್ಬರವೂ ನೀರು ಪಾಲಾಗಿದೆ. ಬರಗಾಲ ಬಿದ್ದಾಗ ಹೇಗೆ ಸರ್ಕಾರ ಎಲ್ಲ ರೈತರಿಗೂ ಪರಿಹಾರ ಕೊಡುತ್ತದೆಯೋ ಹಾಗೆಯೇ ಇದನ್ನು ‘ಹಸಿ ಬರಗಾಲ' ಎಂದು ಘೋಷಿಸಿ ಎಲ್ಲ ರೈತರಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

2015ರಿಂದ ರೈತರ ಬೆಳೆವಿಮೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ, ರೈತರಿಗೆ ಬೆಳೆವಿಮೆ ನೀಡುವಂತೆ ಹೋರಾಟ ನಡೆಸಿದ್ದ ಬಿಜೆಪಿ ನಾಯಕರೇ ಅಧಿಕಾರದಲ್ಲಿದ್ದರೂ ಸಮಸ್ಯೆ ಇತ್ಯರ್ಥವಾಗಿಲ್ಲ, 2015-16ರಲ್ಲಿನ ₹6.25 ಕೋಟಿ, 2016-17ರ ಹಿಂಗಾರು ಹಂಗಾಮಿನ ₹3 ಕೋಟಿ, 2018-19ರಲ್ಲಿನ ₹16 ಕೋಟಿ ರೈತರಿಗೆ ಕೊಡುವುದು ಬಾಕಿ ಇದೆ. ಕೂಡಲೇ ರೈತರಿಗೆ ಬೆಳೆವಿಮೆ ನೀಡುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ದಿಳ್ಳೆಪ್ಪ ಮಣ್ಣೂರ, ಸುರೇಶ ಚಲವಾದಿ, ಶಂಕರಗೌಡ ಶಿರಗಂಬಿ, ಶಿವಯೋಗಿ ಹೊಸಗೌಡ್ರ, ಮಲ್ಲನಗೌಡ ಮಾಳಗಿ, ಜಾನ್ ಪುನೀತ ಇದ್ದರು.

***

ವಿದ್ಯುತ್ ಖಾಸಗೀಕರಣದಿಂದ ಜಿಲ್ಲೆಯ 2 ಲಕ್ಷ ಪಂಪ್ ಸೆಟ್ ಬಳಕೆದಾರರು ಬೀದಿಗೆ ಬೀಳಲಿದ್ದಾರೆ. ದೇಶದ ಆಂತರಿಕ ಭದ್ರತೆಗೆ ಪೆಟ್ಟು ಬೀಳುತ್ತದೆ
– ರಾಮಣ್ಣ ಕೆಂಚಳ್ಳೇರ, ಜಿಲ್ಲಾ ಘಟಕದ ಅಧ್ಯಕ್ಷ, ರೈತಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.