ರಾಣೆಬೆನ್ನೂರು: ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಏಕಕಾಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಪೂರೈಕೆ ಹೆಚ್ಚಾಗಿದ್ದರಿಂದ ಏಕಾಏಕಿ ದರ ಸಹ ಕುಸಿತಗೊಂಡಿದ್ದು, ಸೂಕ್ತ ಬೆಲೆ ಸಿಗದೇ ರೈತರು ಆರ್ಥಿಕವಾಗಿ ಕಂಗಾಲಾಗಿದ್ದಾರೆ.
ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 600 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬೆಳೆಯಲಾಗಿತ್ತು. ಈರುಳ್ಳಿ ಬೆಳೆ ಚೆನ್ನಾಗಿ ಬೆಳೆದು ಉತ್ತಮ ಇಳುವರಿ ಬಂದಿದೆ. ಆದರೆ, ದರ ಇಲ್ಲದಿದ್ದರಿಂದ ರೈತರ ಚಿಂತೆಗೀಡಾಗಿದ್ದಾರೆ.
ದರ ಕುಸಿತದಿಂದಾಗಿ ಈರುಳ್ಳಿ ಬೆಳೆಯನ್ನು ರೈತರು ತಮ್ಮ ಹೊಲದಲ್ಲಿಯೇ ಗೂಡು ಹಾಕಿದ್ದಾರೆ. ಬೆಲೆ ಹೆಚ್ಚಾದ ಸಮಯದಲ್ಲಿ ಗೂಡಿನಿಂದ ಈರುಳ್ಳಿ ಹೊರತೆಗೆದು ಮಾರುಕಟ್ಟೆಗೆ ಕಳುಹಿಸುವ ಯೋಚನೆ ರೈತರದ್ದಾಗಿದೆ. ಆದರೆ, ಹಲವು ದಿನ ಕಳೆದರೂ ದರ ಏರಿಕೆಯಾಗುತ್ತಿಲ್ಲ. ಇದರಿಂದಾಗಿ ಗೂಡಿನಲ್ಲಿರುವ ಈರುಳ್ಳಿ ಸಹ ಕೊಳೆಯುತ್ತಿದೆ.
‘ಈ ಹಿಂದೆ, ನಾನು 50 ರಿಂದ 60 ಎಕರೆ ಈರುಳ್ಳಿ ಬೆಳೆಯುತ್ತಿದ್ದೆ. ಆದರೆ, ಪದೇ ಪದೇ ದರ ಕುಸಿತದಿಂದ ನಷ್ಟವಾಯಿತು. ಈಗ 2 ಎಕರೆ ಬಿತ್ತನೆ ಮಾಡಿದ್ದೇನೆ. ಬೀಜ, ಕೊಟ್ಟಿಗೆ ಗೊಬ್ಬರ, ಔಷಧಿ ಹಾಗೂ ಕೂಲಿ ಸೇರಿದಂತೆ 2 ಎಕರೆಗೆ ₹ 70 ಸಾವಿರ ವೆಚ್ಚವಾಗಿದೆ. ಇನ್ನೆರಡು ವಾರದಲ್ಲಿ ಬೆಳೆಯನ್ನು ಕಟಾವು ಮಾಡಬೇಕಿತ್ತು. ಅಷ್ಟರಲ್ಲೇ ದರ ಕುಸಿತಗೊಂಡಿದೆ’ ಎಂದು ಗಂಗಾಪುರದ ಸೋಮಪ್ಪ ಚಿಕ್ಕಳ್ಳವರ ಹೇಳಿದರು.
ಈರುಳ್ಳಿ ವ್ಯಾಪಾರಸ್ಥ ನಾಗರಾಜ ಬದಾಮಿ, ‘ಎಪಿಎಂಸಿಯಲ್ಲಿ ಸೋಮವಾರ ಈರುಳ್ಳಿ ದರವು ಕ್ವಿಂಟಲ್‌ಗೆ ₹ 800 ರಿಂದ ₹1,200 (ಸ್ಥಳೀಯ ಮೊದಲ ಗುಣಮಟ್ಟ), ₹ 500 ರಿಂದ ₹ 800 (ಎರಡನೇ ಗುಣಮಟ್ಟ) ಹಾಗೂ ₹ 200 ರಿಂದ ₹ 400 ದರ (ಮೂರನೇ ಗುಣಮಟ್ಟ) ಇದೆ. ಮಹಾರಾಷ್ಟ್ರದ ನಾಸಿಕ್ ಈರುಳ್ಳಿ ದರ ಕ್ವಿಂಟಲ್‌ಗೆ ₹ 1,200 ರಿಂದ ₹1,600 ದರವಿದೆ’ ಎಂದರು.
‘ಮಳೆ ಮತ್ತು ದರ ಕುಸಿತದಿಂದ ಖರ್ಚು ಮೈಮೇಲೆ ಬರುತ್ತದೆ ಎಂದು ರೈತರು ಮಾರುಕಟ್ಟೆಗೆ ಈರುಳ್ಳಿ ತರುತ್ತಿಲ್ಲ. ಹೊಲದಲ್ಲಿಯೇ ಗೂಡು ಹಾಕಿದ್ದಾರೆ. ಅದು ಮಳೆಗೆ ಅಲ್ಲೇ ಕೊಳೆಯುತ್ತಿದೆ. ಇಂದು ಬೆಳಿಗ್ಗೆ ಇಡೀ ಮಾರುಕಟ್ಟೆಗೆ 45 ಚೀಲ ಬಂದಿದೆ. ತುದಿ ಮೊಳಕೆಯೊಡೆದಿದೆ. ಎರಡು ದಿನ ಇಟ್ಟರೆ ಕೆಟ್ಟ ವಾಸನೆ ಬರುತ್ತದೆ. ಹಾಸನ, ಮಧುಗಿರಿ, ಅರಸಿಕೆರೆ, ಕಡೂರು, ತುಮಕೂರು, ಶಿರಾ ಸೇರಿದಂತೆ ಬೇರೆ ಕಡೆಯಿಂದ ಈರುಳ್ಳಿ ಖರೀದಿಗೆ ಆಗಮಿಸುತ್ತಿದ್ದರು. ಈಗ ಸ್ಥಳೀಯ ಈರುಳ್ಳಿ ಕೇಳುವವರಿಲ್ಲ’ ಎಂದು ಹೇಳಿದರು.
ತಾಲ್ಲೂಕಿನ ಅಸುಂಡಿ ಗ್ರಾಮದ ರೈತ ಬಸವರಾಜಪ್ಪ ಬಣಕಾರ, ‘ನಾವು ಹತ್ತಾರು ಎಕರೆ ಈರುಳ್ಳಿ ಬೆಳೆಯುತ್ತಿದ್ದೆವು. ದರದ ವ್ಯತ್ಯಾಸದಿಂದ ಲಾಭ ಬರಲಿಲ್ಲ. ಹೀಗಾಗಿ, ಈರುಳ್ಳಿ ಬೆಳೆಯುವುದನ್ನು ಬಿಟ್ಟಿದ್ದೇವೆ. ಈಗ ಹಬ್ಬಕ್ಕೆಂದು ಮನೆ ಬಳಕೆಗೆ ಎಪಿಎಂಸಿಯಿಂದಲೇ 40 ಕೆ.ಜಿ. ಈರುಳ್ಳಿ ತೆಗೆದುಕೊಂಡು ಹೋಗುತ್ತಿದ್ದೇನೆ’ ಎಂದರು.
ಮೈದೂರಿನ ರೈತರ ಶಶಿಕಾಂತ ಸಾವುಕಾರ, ‘ಟ್ರ್ಯಾಕ್ಟರ್ ಬಾಡಿಗೆ, ಬಿತ್ತನೆ ಬೀಜ, ಬಿತ್ತನೆ ಖರ್ಚು, ಗೊಬ್ಬರ, ಕಳೆ, ಔಷಧ ಸಿಂಪಡಣೆ, ಕಟಾವು, ಸಾಗಣೆ, ಬುಡ ಕತ್ತರಿಸುವುದು, ಖಾಲಿ ಪೊಟ್ಟಣ ಖರ್ಚು ಸೇರಿ ಒಂದು ಎಕರೆಗೆ ₹ 40 ರಿಂದ 50 ಸಾವಿರ ಖರ್ಚು ಬರುತ್ತದೆ. ಆದರೆ, ಪ್ರಸ್ತುತ ಕ್ವಿಂಟಲ್‌ಗೆ ₹800 ರಿಂದ ₹1,200 ದರವಿದೆ. ಹಾಕಿದ ಬಂಡವಾಳ ಸಹ ಕೈಗೆ ಸಿಗುತ್ತಿಲ್ಲ’ ಎಂದರು.
‘ಸರ್ಕಾರವೇ ರೈತರ ಕಷ್ಟಕ್ಕೆ ಸ್ಪಂದಿಸಬೇಕು. ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಿ, ಖರೀದಿಸಬೇಕು’ ಎಂದು ಒತ್ತಾಯಿಸಿದರು.
600 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಮಾರ್ಕೆಟ್‌ನಲ್ಲಿ ಈರುಳ್ಳಿ ಕೇಳುವವರೇ ಇಲ್ಲ ವೆಚ್ಚ ಭರಿಸಲಾಗದ ರೈತರ ನರಳಾಟ
ಮಹಾರಾಷ್ಟ್ರ ಕರ್ನಾಟಕ ಆಂಧ್ರಪ್ರದೇಶದಲ್ಲಿ ಈರುಳ್ಳಿ ಕಟಾವು ನಡೆದಿದೆ. ನಮ್ಮಲ್ಲಿಯೂ ಈರುಳ್ಳಿ ಬಂದಿದೆ. ಎರಡಕ್ಕೂ ದರ ಕಡಿಮೆಯಾಗಿದೆ. ದಸರಾ ನಂತರ ದರ ಏರಿಕೆಯಾಗಬಹುದುಮಂಜುನಾಯಕ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ
ಈರುಳ್ಳಿ ಕಟಾವಿಗೆ ಬಂದಿದೆ. ದರ ಕುಸಿತದಿಂದ ಕಂಗಾಲಾಗಿದ್ದೇವೆ. ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ನೆರವಿಗೆ ಬರಬೇಕುಕರಬಸಪ್ಪ ಅಗಸಿಬಾಗಿಲು ಕೂಲಿ ಗ್ರಾಮದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.