ADVERTISEMENT

ವಂಚನೆ: ಬಡ್ಡಿ ಸಹಿತ ಶುಲ್ಕ ಹಿಂತಿರುಗಿಸಲು ಗ್ರಾಹಕರ ಆಯೋಗ ಆದೇಶ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 14:46 IST
Last Updated 8 ಫೆಬ್ರುವರಿ 2023, 14:46 IST
-
-   

ಹಾವೇರಿ: ರಾಣೆಬೆನ್ನೂರಿನ ಏರೋನಾಟಿಕ್ಸ್ ಎಂಜಿನಿಯರ್ ಪದವೀಧರನೊಬ್ಬನಿಗೆ ಕಾಲೇಜ್ ಕ್ಯಾಂಪಸ್ ಸಂದರ್ಶನದಲ್ಲಿ ಜಪಾನ್ ದೇಶದಲ್ಲಿ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿ ವಿವಿಧ ಕೋರ್ಸ್‍ಗಳ ಹೆಸರಿನಲ್ಲಿ ಶುಲ್ಕ ಪಡೆದು ಯಾವುದೇ ಉದ್ಯೋಗ ದೊರಕಿಸಿಕೊಡದ ಹಿನ್ನೆಲೆಯಲ್ಲಿ ಬಡ್ಡಿ ಸಮೇತ ಶುಲ್ಕ ಹಿಂತಿರುಗಿಸುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ ಹೊರಡಿಸಿದೆ.

ಮಂಗಳೂರಿನ ಶ್ರೀದೇವಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಏರೋನಾಟಿಕ್ಸ್ ಎಂಜಿನಿಯರಿಂಗ್‌ ಪದವೀಧರನಾಗಿದ್ದ ರಾಣೆಬೆನ್ನೂರು ನಗರದ ಅಭಿನಂದ ದತ್ತಾತ್ರೇಯ ಕುಲಕರ್ಣಿ ವಂಚನೆಗೊಳಗಾದವರು.

ಉದ್ಯೋಗ ಕೊಡಿಸದೇ ಸಂಪರ್ಕಕ್ಕೆ ಸಿಗದ ಕಾರಣ ಬೆಂಗಳೂರು ಸಿಲ್ವರ್ ಪೀಕ್ ಗ್ಲೋಬರ್ ಪ್ರೈ.ಲಿ. ವ್ಯವಸ್ಥಾಪಕನ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಾಗಿತ್ತು.

ADVERTISEMENT

ಜಪಾನ್ ದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ, ಉದ್ಯೋಗ ಪಡೆಯಲು ಜಪಾನಿ ಭಾಷಾ ಕೋರ್ಸ್ ಕಲಿತು ಜಪಾನಿ ಕರಿಯರ್ ಎಲಿಜಿಬಿಲಿಟಿ ಟೆಸ್ಟ್ ಉತ್ತೀರ್ಣರಾದರೆ ಕಾಲೇಜು ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿ ₹5,27,600 ವಸೂಲಿ ಮಾಡಲಾಗಿತ್ತು. ‌

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಪ್ರಭಾರ ಅಧ್ಯಕ್ಷ ಈಶ್ವರಪ್ಪ ಬಿ.ಎಸ್ ಹಾಗೂ ಸದಸ್ಯೆ ಉಮಾದೇವಿ ಎಸ್. ಹಿರೇಮಠ ನೇತೃತ್ವದ ತಂಡ ಉದ್ಯೋಗಾಕಾಂಕ್ಷಿ ಪಾವತಿಸಿದ ಶುಲ್ಕವನ್ನು ವಾರ್ಷಿಕ ಶೇ 8ರ ಬಡ್ಡಿಯೊಂದಿಗೆ ನೀಡಲು, ಆರ್ಥಿಕ ನಷ್ಟಕ್ಕಾಗಿ ₹2 ಲಕ್ಷ ಹಾಗೂ ಸೇವಾ ನ್ಯೂನತೆಗಾಗಿ ₹1 ಲಕ್ಷ ಹಾಗೂ ಮಾನಸಿಕ ಮತ್ತು ದೈಹಿಕ ವ್ಯಥೆಗೆ ₹50 ಸಾವಿರವನ್ನು 30 ದಿನದೊಳಗಾಗಿ ಉದ್ಯೋಗಾಕಾಂಕ್ಷಿಗೆ ಪಾವತಿಸುವಂತೆ ಬೆಂಗಳೂರು ಸಿಲ್ವರ್ ಪೀಕ್ ಗ್ಲೋಬರ್ ಪ್ರೈ.ಲಿ. ವ್ಯವಸ್ಥಾಪಕನಿಗೆ ಆದೇಶಿಸಿದೆ.

ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ 6ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.