
ರಾಣೆಬೆನ್ನೂರು: ತಾಲ್ಲೂಕಿನ ಆಲದಕಟ್ಟಿ ಗ್ರಾಮದ ರೈತ ಸುರೇಶ ಎಂ. ಕುಪ್ಪೇಲೂರು ಅವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಸಾವಯವ ಕೃಷಿಯಿಂದ ಲಕ್ಷಾಂತರ ಆದಾಯ ಗಳಿಸಿದ್ದಾರೆ.
ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆದು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ತರಕಾರಿಯಿಂದ 4 ತಿಂಗಳಿಗೆ ₹ 4.5 ಲಕ್ಷ ಆದಾಯ ತೆಗೆಯುತ್ತಾರೆ. ತಮ್ಮ ಜಮೀನಿನ ಪಕ್ಕದ 2 ಎಕರೆ ಜಮೀನನ್ನು ಲಾವಣಿ ಮಾಡುತ್ತಿದ್ದಾರೆ. ಜೊತೆಗೆ ಇವರ ಸಾವಯವ ಕೃಷಿ ಸಾಧನೆಯನ್ನು ಮೆಚ್ಚಿ ಗ್ರಾಮದ ರೇವಣೆಪ್ಪ ಎಂಬುವರು ಕಳೆದ 10 ವರ್ಷಗಳಿಂದ ತಮ್ಮ ಅರ್ಧ ಎಕರೆ ಜಮೀನನ್ನು ಉಚಿತವಾಗಿ ಕೃಷಿ ಮಾಡಲು ಕೊಟ್ಟಿದ್ದಾರೆ.
ಕೃಷಿಯೊಂದಿಗೆ ಪೂರಕ ಉದ್ಯೋಗವಾಗಿ ಹೈನುಗಾರಿಕೆ ಮಾಡಿಕೊಂಡು ದಿನಕ್ಕೆ ಎರಡು ಬಾರಿ ಹಾಲು ಹಾಕಿ ಬರುತ್ತಾರೆ. ಹೈನುಗಾರಿಕೆಯಿಂದ ₹1.15 ನಿವ್ವಳ ಲಾಭ ಗಳಿಸಿದ್ದಾರೆ. ಜಮೀನಿನ ಸುತ್ತಲೂ 30 ತೆಂಗು, 8 ಗಿಡಿ ಕರಿಬೇವು, 20 ಬಾಳೆ, 10 ನಿಂಬೆಹಣ್ಣು, 5 ಹುಣಸೆ ಮರ ಬೆಳೆದಿದ್ದಾರೆ. ಅಲ್ಲದೇ 1 ಎಕರೆ ಸ್ವೀಟ್ ಕಾರ್ನ ಕೂಡ ಬೆಳೆದಿದ್ದಾರೆ.
ಸುರೇಶ ಅವರು ಪ್ರಾಥಮಿಕ ಹಂತದಿಂದಲೇ ತಂದೆಯ ಜೊತೆಗೆ ಕೃಷಿ ಕಾಯಕದಲ್ಲಿ ತೊಡಗಿದ್ದು, ಪಿಯುಸಿ ಮುಗಿದ ಮೇಲೆ ಬಡತನದಿಂದ ರಾಣೆಬೆನ್ನೂರಿನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಜರಾಕ್ಸ್ ಅಂಗಡಿಯಲ್ಲಿ ಹಾಗೂ ಸಂಜೆಯಿಂದ ರಾತ್ರಿ 9 ಗಂಟೆವರೆಗೆ ನಗರದ ಚನ್ನೇಶ್ವರ ಖಾಸಗಿ ಬ್ಯಾಂಕಿನಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಎರಡು ದಶಕಗಳ ಕಾಲ ಕೆಲಸ ಮಾಡುತ್ತಿದ್ದರು.
ಇದರಿಂದ ತೃಪ್ತಿ ಕಾಣದೇ ಊರಿಗೆ ಬಂದು ಮೊಲ ಸಾಕಾಣಿಕೆ ಕೇಂದ್ರ ಆರಂಭಿಸಿದರು. ಅದರಿಂದ ಕೈ ಸುಟ್ಟುಕೊಂಡು ಖಾಸಗಿ ಸಾಲ ಪಡೆದು ಬೋರ್‌ವೆಲ್ ಕೊರೆಸಿ ಮತ್ತೆ ಕೃಷಿ ಕಾಯಕದತ್ತ ತೊಡಗಿದ ಸುರೇಶ ಅವರು ಸಾವಯವ ಕೃಷಿಗೆ ಅಡಿಯಿಟ್ಟರು.
’ಜಮೀನಿನಲ್ಲಿ 3 ಬೋರ್‌ವೆಲ್ ಕೊರೆಸಿದ್ದಾರೆ. ಸಾಕಷ್ಟು ನೀರು ಇದ್ದು, ತಮಗೆ ಬೇಕಾದಷ್ಟು ನೀರನ್ನು ಬಳಸಿಕೊಂಡು ಉಳಿದ ನೀರನ್ನು ಸುತ್ತ ಮುತ್ತಲಿನ ರೈತರ 10 ಎಕರೆ ಕೃಷಿ ಭೂಮಿಗೆ ಉಚಿತವಾಗಿ ನೀರು ಕೊಟ್ಟಿದ್ದಾರೆ. ನೀರು ತೆಗೆದುಕೊಂಡ ಆ ರೈತರು ಕೂಡ ಸುರೇಶ ಅವರಿಗೆ ಟ್ರ್ಯಾಕ್ಟರ್‌ನಿಂದ ಉಚಿತವಾಗಿ ಹೊಲ ಉಳುಮೆ ಮಾಡಿ ಕೊಡುತ್ತಾರೆ.
ಪತ್ನಿ ಮಾಲಾ ಅವರು ಡಿಪ್ಲೋಮಾ ಓದಿದ್ದು , ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ₹ 25 ಸಾವಿರ ಸಂಬಳಕ್ಕೆ ದುಡಿಯುತ್ತಿದ್ದರು. ಅವರು ಖಾಸಗಿ ನೌಕರಿ ಬಿಟ್ಟು ಬಂದು ಸುರೇಶ ಅವರ ಕೃಷಿಗೆ ಸಹಾಯ ಮಾಡುತ್ತಾರೆ.

ಆಧುನಿಕ ಕೃಷಿಯಲ್ಲಿ ರಾಸಾಯನಿಕಗಳ ವಿವೇಚನೆಯಿಲ್ಲದ ಬಳಕೆಯು ಪರಿಸರಕ್ಕೆ ಹಾನಿಯನ್ನುಂಟುಮಾಡುತ್ತದೆ. ಭೂಮಿಯ ಫಲವತ್ತತೆಯ ಕಡಿಮೆಯಾಗಿ ಭೂಮಿ ಬರಡಾಗುತ್ತದೆ. ಇದು ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸಾವಯವ ಕೃಷಿಯು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ ಪರಿಸರವನ್ನು ಕಲುಷಿತ ಮುಕ್ತವಾಗಿಸುತ್ತದೆ.ಸುರೇಶ ಎಂ. ಕುಪ್ಪೇಲೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.