ADVERTISEMENT

ಹಾವೇರಿ | ಉದ್ಯೋಗ ಮೇಳ: 1,926 ಅಭ್ಯರ್ಥಿಗಳು ಭಾಗಿ

ಜಿ.ಎಚ್‌. ಕಾಲೇಜು: ಜಿಲ್ಲಾಡಳಿತ– ಜಿಲ್ಲಾ ಪಂಚಾಯಿತಿ ಸಹಯೋಗ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 4:44 IST
Last Updated 30 ಜನವರಿ 2026, 4:44 IST
ಹಾವೇರಿ ಜಿ.ಎಚ್. ಕಾಲೇಜು ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಜಿಲ್ಲಾ ಮಟ್ಟದ ಉದ್ಯೋಗ ಮೇಳ’ದಲ್ಲಿ ಸಂದರ್ಶನಕ್ಕಾಗಿ ಸರದಿಯಲ್ಲಿ ನಿಂತಿದ್ದ ಅಭ್ಯರ್ಥಿಗಳು
ಹಾವೇರಿ ಜಿ.ಎಚ್. ಕಾಲೇಜು ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಜಿಲ್ಲಾ ಮಟ್ಟದ ಉದ್ಯೋಗ ಮೇಳ’ದಲ್ಲಿ ಸಂದರ್ಶನಕ್ಕಾಗಿ ಸರದಿಯಲ್ಲಿ ನಿಂತಿದ್ದ ಅಭ್ಯರ್ಥಿಗಳು   

ಹಾವೇರಿ: ಇಲ್ಲಿಯ ಜಿ.ಎಚ್. ಕಾಲೇಜು ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಜಿಲ್ಲಾ ಮಟ್ಟದ ಉದ್ಯೋಗ ಮೇಳ’ದಲ್ಲಿ ಪಾಲ್ಗೊಂಡಿದ್ದ 1,926 ಮಂದಿ, ತಮ್ಮಿಷ್ಟದ ಕೆಲಸಕ್ಕಾಗಿ ವಿವಿಧ ಕಂಪನಿಗಳಲ್ಲಿ ಸಂದರ್ಶನ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೌಶಲ ಅಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಎನ್‌ಆರ್‌ಎಲ್‌ಎಂ ಸಂಜೀವಿನಿ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ ಸಹಯೋಗದಲ್ಲಿ ಮೇಳ ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ 9.30 ಗಂಟೆಯಿಂದ ಆರಂಭವಾದ ಮೇಳದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳ 79 ಕಂಪನಿಗಳು ಪಾಲ್ಗೊಂಡಿದ್ದವು. ಎಸ್‌.ಎಸ್‌.ಎಲ್‌.ಸಿ., ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ, ಬಿ.ಇ. ಹಾಗೂ ಇತರೆ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು (18 ವರ್ಷ ವಯಸ್ಸಿನಿಂದ 35 ವರ್ಷ ವಯೋಮಿತಿ) ಮೇಳದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಮೇಳದ ಸ್ಥಳಕ್ಕೆ ಆಗಮಿಸಿದ ಅಭ್ಯರ್ಥಿಗಳು, ಮೊದಲಿಗೆ ನೋಂದಣಿ ಮಾಡಿಸಿದರು. ನಂತರ, ತಮ್ಮಿಷ್ಟದ ಕಂಪನಿಗಳಿದ್ದ ಕೊಠಡಿಗೆ ತೆರಳಿ ಸ್ವವಿವರ ನೀಡಿ ಸಂದರ್ಶನ ಎದುರಿಸಿದರು. ಅಂಗವಿಕಲರಿಗೆ ವಿಶೇಷ ಆದ್ಯತೆ ಮೇರೆಗೆ, ಉದ್ಯೋಗದ ಸಂದರ್ಶನಕ್ಕಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.

‘ಜಿಲ್ಲಾ ಮಟ್ಟದ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಲು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. 1,926 ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡು, ವಿವಿಧ ಕಂಪನಿಗಳ ಸಂದರ್ಶನ ಎದುರಿಸಿದರು’ ಎಂದು ಜಿ.ಪಂ. ಉಪ ಕಾರ್ಯದರ್ಶಿ ಪುನೀತ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘79 ಕಂಪನಿಗಳ ಪ್ರತಿನಿಧಿಗಳು ಮೇಳದಲ್ಲಿದ್ದರು. ಪ್ರತಿಯೊಂದು ಕಂಪನಿಯಲ್ಲೂ, ಕೆಲ ಅಭ್ಯರ್ಥಿಗಳಿಗೆ ಉದ್ಯೋಗದ ಅವಕಾಶ ನೀಡಲಾಗಿದೆ. ಎಷ್ಟು ಮಂದಿಗೆ ಉದ್ಯೋಗ ಪತ್ರ ನೀಡಲಾಗಿದೆ ಎಂಬುದು ಶುಕ್ರವಾರ ತಿಳಿಯಲಿದೆ’ ಎಂದರು.

ಸತತ ಪ್ರಯತ್ನ, ಪರಿಶ್ರಮದಿಂದ ಯಶಸ್ಸು: ಉದ್ಯೋಗಮೇಳ ಉದ್ಘಾಟಿಸಿದ ಜಿ.ಪಂ. ಸಿಇಒ ರುಚಿ ಬಿಂದಲ್, ‘ಒಂದೇ ಸಂದರ್ಶನಕ್ಕೆ ಕೆಲಸ ಸಿಗಲಿಲ್ಲವೆಂದು ಯಾರೂ ನಿರಾಸೆ ಆಗಬಾರದು. ಮತ್ತೆ ಮತ್ತೆ ಪ್ರಯತ್ನ ಮಾಡುತ್ತಿರಬೇಕು. ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ಯಶಸ್ಸು ಸಾಧ್ಯವಾಗುತ್ತದೆ’ ಎಂದರು.

‘ಉದ್ಯೋಗಾಕಾಂಕ್ಷಿಗಳು ಮೊದಲು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಬೇಕು. ನಾವು ವಾಸಿಸುವ ಸ್ಥಳದಲ್ಲೇ ಕೆಲಸ ಸಿಗಬೇಕು ಎಂಬ ಮನೋಭಾವ ಬಿಡಬೇಕು. ಉದ್ಯೋಗ ದೊರೆಯುವ ಸ್ಥಳಗಳಿಗೆ ಹೋಗಿ ಕೆಲಸ ಮಾಡಬೇಕು. ನಿಮಗೆ ಅನುಭವವಾದಂತೆ ಕೆಲಸದಲ್ಲಿ ಬಡ್ತಿ ಹಾಗೂ ವೇತನ ಹೆಚ್ಚಳವಾಗುತ್ತದೆ’ ಎಂದರು.

ಕಾಲೇಜು ಪ್ರಾಂಶುಪಾಲ ಮಂಜುನಾಥ, ಜಿ.ಪಂ. ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಸೋನಾಲಿ ಕ್ಷೀರಸಾಗರ ಹಾಗೂ ಇತರರು ಇದ್ದರು.

ಮಧ್ಯವರ್ತಿ ಕಂಪನಿಗಳಿಗೆ ಅವಕಾಶ: ಆರೋಪ ‘ಉದ್ಯೋಗ ಮೇಳದಲ್ಲಿ ಕೆಲಸದ ಮಧ್ಯವರ್ತಿ ಕಂಪನಿಗಳು ಭಾಗವಹಿಸಿದ್ದವು. ಕೆಲ ಅಭ್ಯರ್ಥಿಗಳು ಇಂಥ ಕಂಪನಿಯವರ ಬಳಿ ಸ್ವ–ವಿವರ ನೀಡಿದ್ದಾರೆ. ನಾವು ಮಾತ್ರ ಸ್ವ–ವಿವರ ಕೊಟ್ಟಿಲ್ಲ’ ಎಂದು ಅಭ್ಯರ್ಥಿ ಶಾರದಾ ಹೇಳಿದರು. ‘ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸಲಾಗುವುದು. ಅದಕ್ಕಾಗಿ ತರಬೇತಿ ಸಹ ನೀಡಲಾಗುವುದು. ತರಬೇತಿಗೆ ಪ್ರವೇಶ ಶುಲ್ಕ ನೀಡಬೇಕಾಗುತ್ತದೆ’ ಎಂಬುದಾಗಿ ಕೆಲ ಕಂಪನಿಗಳು ಹೇಳಿದವು’ ಎಂದರು. ‘ಸರ್ಕಾರದಿಂದ ಆಯೋಜಿಸಿದ್ದ ಮೇಳದಲ್ಲಿ ಸಮರ್ಪಕವಾಗಿ ಹಾಗೂ ಕಾನೂನಿನ ಮಾನ್ಯತೆ ಇರುವ ಕಂಪನಿಗಳಿಗೆ ಮಾತ್ರ ಅವಕಾಶ ನೀಡಬೇಕಿತ್ತು. ಆದರೆ ಜಿ.ಪಂ. ಆಯೋಜಕರೇ ಮಧ್ಯವರ್ತಿ ಕಂಪನಿಗಳಿಗೆ ಅವಕಾಶ ನೀಡಿದ್ದಾರೆ. ಅವರಿಂದ ಅಭ್ಯರ್ಥಿಗಳಿಗೆ ವಂಚನೆಯಾದರೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.