
ಹಾವೇರಿ: ‘10ನೇ ವಯಸ್ಸಿಗೆ ಮನೆ ಬಿಟ್ಟು ಶಿವಯೋಗಿ ಮಂದಿರ ಸೇರಿದ ಕಿರಿ ಮಗ ‘ಮಂಜುಸ್ವಾಮಿ’, ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಇಂದು ‘ಬೆಳ್ಳಿ ತುಲಾಭಾರ’ ಮಾಡಿಸಿಕೊಳ್ಳುತ್ತಿರುವುದನ್ನು ನೋಡಿ ಹೆಮ್ಮೆ ಹಾಗೂ ಖುಷಿಯಾಗುತ್ತದೆ. ಧಾರ್ಮಿಕ ಹಾಗೂ ಸಮಾಜದ ಏಳಿಗೆಗಾಗಿ ಧೀಕ್ಷೆ ಪಡೆದ ನಂತರ ಕೌಟುಂಬಿಕ ಸಂಪರ್ಕ ಕಡಿತಗೊಳಿಸಿಕೊಂಡಿರುವ ‘ಸದಾಶಿವ ಸ್ವಾಮೀಜಿ’ಗೆ ನಾವು ದೂರದಿಂದಲೇ ಕೈ ಮುಗಿದು ನಮಿಸುತ್ತಿದ್ದೇವೆ’
ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಒಂದಾದ ಹಾವೇರಿ ಹುಕ್ಕೇರಿಮಠದ ಪಟ್ಟಾಧಿಕಾರಿ ಸದಾಶಿವ ಸ್ವಾಮೀಜಿ ಅವರ ತಂದೆ ಫಕ್ಕೀರಯ್ಯ ಹಿರೇಮಠ ಹಾಗೂ ತಾಯಿ ಪಾರ್ವತಮ್ಮ ಅವರ ಮಾತಿದು.
ಗದಗ ಜಿಲ್ಲೆಯ ಶ್ಯಾಗೋಟಿ ಗ್ರಾಮದ ಅವರು, ಗ್ರಾಮಸ್ಥರ ಜೊತೆಗೂಡಿ ಪ್ರತಿ ವರ್ಷವೂ ಹುಕ್ಕೇರಿಮಠದ ಜಾತ್ರೆಗೆ ಬಂದು ಹೋಗುತ್ತಿದ್ದಾರೆ. ಈ ವರ್ಷವೂ ಜಾತ್ರೆಗೆ ಬಂದಿರುವ ಅವರು, ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಸದಾಶಿವ ಸ್ವಾಮೀಜಿ ಅವರ ಬೆಳ್ಳಿ ತುಲಾಭಾರ’ವನ್ನು ದೂರದಿಂದಲೇ ವೀಕ್ಷಿಸಿ ಕೈ ಮುಗಿದು ಭಾವುಕರಾದರು.
ಸಮಾಜದ ಏಳಿಗೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವ ಸದಾಶಿವ ಸ್ವಾಮೀಜಿ, ಕಾರ್ಯಕ್ರಮಕ್ಕೂ ಮುನ್ನ ಭಕ್ತರ ರೀತಿಯಲ್ಲೇ ದೂರದಿಂದ ಹೆತ್ತವರನ್ನು ನೋಡಿ ಕೈ ಮುಗಿದು ಸನ್ನೆಯಲ್ಲಿಯೇ ಕುಶಲೋಪರಿ ವಿಚಾರಿಸಿ ಮುಂದಕ್ಕೆ ಹೋದರು. ಈ ವೇಳೆ ತಂದೆ–ತಾಯಿ ಕಣ್ಣಿನಲ್ಲಿ ನೀರು ಜಿನುಗಿತು. ಆರೋಗ್ಯ ಸಮಸ್ಯೆಯಿಂದ ನಡೆದಾಡಲು ಸಾಧ್ಯವಾಗದ ತಂದೆ ಫಕ್ಕೀರಯ್ಯ, ಕುರ್ಚಿಯಲ್ಲಿಯೇ ಕುಳಿತು ಮಗನ ತುಲಭಾರವನ್ನು ಕಣ್ತುಂಬಿಕೊಂಡರು. ಕಾರ್ಯಕ್ರಮದ ನಂತರ ಗ್ರಾಮಸ್ಥರ ಜೊತೆಯಲ್ಲಿಯೇ ಕ್ರೀಡಾಂಗಣದಿಂದ ಹೊರಟು ಹೋದರು.
ಸದಾಶಿವ ಸ್ವಾಮೀಜಿ ಬಾಲ್ಯದ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಫಕ್ಕೀರಯ್ಯ, ‘ಶ್ಯಾಗೋಟಿಯಲ್ಲಿರುವ ಅನ್ನದಾನೀಶ್ವರ ಮಠದಲ್ಲಿ ಸ್ವಚ್ಛತೆ ಸೇವೆ ಮಾಡಿಕೊಂಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಾಯ ಮಾಡುತ್ತ ಬದುಕು ಸಾಗಿಸುತ್ತಿದ್ದ ಕಡುಬಡತನದ ಕುಟುಂಬ ನಮ್ಮದು. ನಮಗೆ ಮೂವರು ಮಕ್ಕಳು. ಮಗಳು ಮಂಜುಳಾ, ಹಿರಿಯ ಮಗ ಕೊಟ್ರಯ್ಯ ಹಾಗೂ ಕಿರಿಯ ಮಗನೇ ಮಂಜುಸ್ವಾಮಿ (ಈಗಿನ ಸದಾಶಿವ ಸ್ವಾಮೀಜಿ)’ ಎಂದರು.
‘ಶ್ರಾವಣ ಸೋಮವಾರದಂದು ಹುಟ್ಟಿದ್ದ ಮಂಜುಸ್ವಾಮಿಗೆ ಬಾಲ್ಯದಲ್ಲೇ ಧಾರ್ಮಿಕ ಕಾರ್ಯಕ್ರಮ ಹಾಗೂ ಪೂಜೆಗಳಲ್ಲಿ ಆಸಕ್ತಿ ಇತ್ತು. ನನ್ನ ತಮ್ಮ ಮಲ್ಲಯ್ಯ ಜೊತೆ ಪೂಜೆ ಹಾಗೂ ಭಜನೆಗೆ ಹೋಗುತ್ತಿದ್ದ. ಗ್ರಾಮದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆದರೂ ಅಲ್ಲಿಯೇ ದೇವರ ಸೇವೆ ಮಾಡಿ ಮಲಗುತ್ತಿದ್ದ’ ಎಂದರು.
‘ಮಗನ ಸೇವೆ ನೋಡಿದ್ದ ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ, ಶಿವಯೋಗಿ ಮಂದಿರಕ್ಕೆ ಕಳುಹಿಸುವಂತೆ ಕೋರಿದರು. ಅದೇ ಸಂದರ್ಭದಲ್ಲಿ ನಮ್ಮೂರಿನಲ್ಲಿ ಬಾಲೆಹೂಸೂರಿನ ದಿಂಗಾಲೇಶ್ವರ ಸ್ವಾಮೀಜಿ ಪ್ರವಚನವಿತ್ತು. ಅಲ್ಲಿಯೂ ಮಗ, ಲವಲವಿಕೆಯಿಂದ ಸ್ವಾಮೀಜಿ ಸೇವೆ ಮಾಡುತ್ತಿದ್ದ. ಅವರು ಸಹ ಮಗನನ್ನು ಶಿವಯೋಗಿ ಮಂದಿರಕ್ಕೆ ಕಳುಹಿಸುವಂತೆ ಹೇಳಿದರು. ಬಡವರಾಗಿದ್ದ ನಮಗೆ ಇದೆಲ್ಲ ಬೇಡವೆಂದು ವಿನಂತಿಸಿದೆವು. ‘ಮಗನನ್ನು ಕರೆದೊಯ್ದು ಸ್ವಚ್ಛತೆ ಕೆಲಸಕ್ಕೆ ಇಟ್ಟುಕೊಳ್ಳುತ್ತೀರಾ’ ಎಂದು ನೋವಿನಿಂದ ಹೇಳಿದ್ದೆವು. ಅದಕ್ಕೆ ಪ್ರತಿಕ್ರಿಯಿಸಿದ್ದ ಸ್ವಾಮೀಜಿ, ‘ನಿಮ್ಮ ಮಗನನ್ನು ನನಗಿಂತ ದೊಡ್ಡ ಸ್ವಾಮೀಜಿ ಮಾಡುತ್ತೇನೆ. ಅದು ಆಗದಿದ್ದರೆ, ನನ್ನ ಖಾವಿಯನ್ನೇ ಬಿಚ್ಚುತ್ತೇನೆ’ ಎಂದು ಮಾತು ಕೊಟ್ಟರು. ಅವಾಗಲೇ ನಾನು ಕಳುಹಿಸಲು ಒಪ್ಪಿಕೊಂಡೆವು. 10ನೇ ವಯಸ್ಸಿನಲ್ಲಿಯೇ ಮಗನನ್ನು ಮಂದಿರಕ್ಕೆ ಸೇರಿಸಿ, ಅವರ ಎಲ್ಲ ದಾಖಲೆಗೂ ಸಹಿ ಮಾಡಿದೆವು’ ಎಂದು ಹೇಳುವಾಗ ಭಾವುಕರಾದರು.
ಮಗನ ಬಗ್ಗೆ ಮಾತನಾಡಿದ ತಾಯಿ ಪಾರ್ವತಮ್ಮ, ‘ಊಟಕ್ಕೂ ಪರದಾಡುತ್ತಿದ್ದ ನಮಗೆ, ಮಕ್ಕಳೇ ಆಸ್ತಿಯಾಗಿದ್ದರು. ಮಗನನ್ನು ಕಳುಹಿಸಿದ ನಂತರ, ಕಣ್ಣೀರಿನಲ್ಲಿಯೇ ದಿನ ಕಳೆದೆವು. ಒಮ್ಮೆ ಸಂಬಂಧಿಕರ ಮದುವೆಗೆ ಮಾತ್ರ ಮಂಜುಸ್ವಾಮಿ ಊರಿಗೆ ಬಂದು ಹೋಗಿದ್ದರು. ನಂತರ, ಎಂದಿಗೂ ಅವರು ಊರಿಗೆ ಹಾಗೂ ಮನೆಗೆ ಬಂದಿಲ್ಲ. ಅವರನ್ನು ನೋಡುವುದಕ್ಕಾಗಿ ನಾವೇ ಪ್ರತಿ ವರ್ಷ ಜಾತ್ರೆಗೆ ಬಂದು ಹೋಗುತ್ತೇವೆ. ಗ್ರಾಮದ ಸಮೀಪದಲ್ಲಿ ಎಲ್ಲಿಯಾದರೂ ಕಾರ್ಯಕ್ರಮವಿದ್ದರೂ ಭೇಟಿ ಕೊಡುತ್ತೇವೆ. ಆದರೆ, ಅವರ ಎದುರು ನಿಂತು ಎಂದಿಗೂ ಮಾತನಾಡಿಲ್ಲ. ದೂರದಿಂದಲೇ ನಮಸ್ಕರಿಸಿ, ಸನ್ನೆಯಿಂದಲೇ ಮಾತು ಮುಗಿಸುತ್ತೇವೆ’ ಎಂದು ಕಣ್ಣಿನಲ್ಲಿ ಜಿನುಗುತ್ತಿದ್ದ ನೀರನ್ನು ಸೀರೆಯಿಂದ ಒರೆಸಿಕೊಂಡರು.
‘ಅನ್ನದಾನೀಶ್ವರ ಸ್ವಾಮೀಜಿ ಹಾಗೂ ದಿಂಗಾಲೇಶ್ವರ ಸ್ವಾಮೀಜಿಯವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಇಂದು ಮಗನನ್ನು ಲಕ್ಷಾಂತರ ಭಕ್ತರು ಪೂಜಿಸುವಂತೆ ಮಾಡಿದ್ದಾರೆ. ಮಗನು ಸಹ ಇಡೀ ಸಮಾಜವೇ ತನ್ನ ಕುಟುಂಬವೆಂದು ತಿಳಿದು ಮುನ್ನಡೆಯುತ್ತಿದ್ದಾನೆ. ಮಗನ ಬೆಳ್ಳಿ ತುಲಭಾರ ನೋಡುವ ಅವಕಾಶ ಸಿಕ್ಕಿರುವುದು, ಹೆತ್ತವರಾದ ನಮಗೆ ಪೂರ್ವಜನ್ಮದ ಪುಣ್ಯ. ಮಗ ನಮ್ಮನ್ನು ಮಾತನಾಡಿಸದಿದ್ದರೂ ಪರವಾಗಿಲ್ಲ. ಆತನಿಂದ ಇಡೀ ಭಕ್ತ ಬಳಗದ ಉದ್ಧಾರವಾಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ’ ಎಂದು ಹೇಳಿದರು.
ಬಾಲ್ಯದಲ್ಲಿ ಜೊತೆಯಲ್ಲಿ ಆಟವಾಡುತ್ತಿದ್ದ ತಮ್ಮ ಇಂದು ಭಕ್ತರ ಪಾಲಿನ ಆರಾಧ್ಯ ದೈವ ಆಗಿದ್ದಾರೆ. ಅವರ ಭಕ್ತರ ಸೇವೆ ನೋಡಿ ಖುಷಿಯಾಗುತ್ತದೆ. ಇದನ್ನೆಲ್ಲ ದೂರದಿಂದಲೇ ಕಂಡು ಸಂತೋಷಪಡುತ್ತೇವೆ.ಕೊಟ್ರಯ್ಯ ಹಿರೇಮಠ, ಸದಾಶಿವ ಸ್ವಾಮೀಜಿಯವರ ಅಣ್ಣ
ಶ್ಯಾಗೋಟಿ ಫಕ್ಕೀರಯ್ಯ ಅವರ ಭಕ್ತಿ ಸೇವೆ ಅಪಾರ. ಅವರು ತಮ್ಮ ಮಗನನ್ನು ಶಿವಯೋಗಿ ಮಂದಿರಕ್ಕೆ ಕಳುಹಿಸಿ ಇಂದು ಲಕ್ಷಾಂತರ ಭಕ್ತರ ಸೇವೆಗಾಗಿ ‘ಸದಾಶಿವ ಸ್ವಾಮೀಜಿ’ ಅವರನ್ನು ನೀಡಿದ್ದಾರೆ.ಅನ್ನದಾನೀಶ್ವರ ಸ್ವಾಮೀಜಿ , ಅನ್ನದಾನೀಶ್ವರ ಸಂಸ್ಥಾನಮಠ ಮುಂಡರಗಿ
2010ರಲ್ಲಿ ಪಟ್ಟಾಧಿಕಾರ ‘ಗದಗ ತಾಲ್ಲೂಕಿನ ಶ್ಯಾಗೋಟಿಯಲ್ಲಿ 1988ರ ಆಗಸ್ಟ್ 20ರಂದು ಜನಿಸಿದ್ದ ಸದಾಶಿವ ಸ್ವಾಮೀಜಿ ಸ್ವಗ್ರಾಮದಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದರು. ನಂತರ ವಿರಾಗಿಗಳ ಯೋಗತಾಣ ಕುಮಾರ ಸ್ವಾಮೀಜಿಯವರ ಶಿವಯೋಗ ಮಂದಿರಕ್ಕೆ ಸೇರಿದರು. 6 ವರ್ಷ ಸಂಸ್ಕೃತ ಕನ್ನಡ ಇಂಗ್ಲಿಷ್ ವಿದ್ಯಾಭ್ಯಾಸದೊಂದಿಗೆ ಯೋಗ ಹಾಗೂ ಆಧ್ಯಾತ್ಮಿಕ ಶಿಕ್ಷಣ ಪಡೆದರು’ ಎಂದು ಕುಟುಂಬಸ್ಥರು ಹೇಳಿದರು. ‘ಹುಬ್ಬಳ್ಳಿಯ ಮೂರುಸಾವಿರಮಠದ ಕುಮಾರೇಶ್ವರ ಶಿವಯೋಗಿ ಸಾಧಕರ ಸಂಘದಲ್ಲಿ ಪ್ರವೇಶ ಪಡೆದು ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಪಡೆದರು. ನಂತರ ಬಿ.ಎ ವ್ಯಾಸಂಗ ಮಾಡಿದರು. ಹುಕ್ಕೇರಿಮಠದ ಶಿವಲಿಂಗ ಸ್ವಾಮೀಜಿ ಲಿಂಗೈಕ್ಯರಾದ ನಂತರ 2010 ಮೇ 23ರಂದು ಪಟ್ಟಾಧಿಕಾರಿಯಾದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.