
ಹಾವೇರಿ: ‘ಸಿಂದಗಿ ಮಠದ ಲಿಂಗೈಕ್ಯ ಶಾಂತವೀರ ಪಟ್ಟಾಧ್ಯಕ್ಷರು ಯಾವುದೇ ಜಾತಿ-, ಪಂಥ, ಮತಕ್ಕೆ ಸೀಮಿತವಲ್ಲ. ಅವರು ಎಲ್ಲ ಸಮಾಜಕ್ಕೆ ಸೇರಿದವರು. ಮನುಕುಲಗಳ ಒಳಿತಿಗಾಗಿ ಶ್ರಮಿಸಿದವರು’ ಎಂದು ಗದಗ ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ನಗರದ ಸಿಂದಗಿ ಮಠದಲ್ಲಿ ‘ಲಿಂಗೈಕ್ಯ ಶಾಂತವೀರ ಪಟ್ಟಾಧ್ಯಕ್ಷರ 46ನೇ ಪುಣ್ಯ ಸ್ಮರಣೋತ್ಸವ’ದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ‘ಲಿಂಗೈಕ್ಯ ತೋಂಟದ ಸಿದ್ದಲಿಂಗ ಸ್ವಾಮೀಜಿ ಪುಣ್ಯಸ್ಮರಣೆ’ ಹಾಗೂ ‘ಪ್ರವಚನದ ಮಂಗಲೋತ್ಸವ’ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
‘ಸರ್ವರಲ್ಲೂ ಸಮಾನ ಮನೋಭಾವ ಹೊಂದಿದ್ದ ಲಿಂ. ಶಾಂತವೀರ ಪಟ್ಟಾಧ್ಯಕ್ಷರು, ಸದಾಚಾರಿ ಆಗಿದ್ದರು. ಅವರು ನುಡಿದಂತೆ ನಡೆದರು. ಭಕ್ತರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಮಾತೃ ಹೃದಯಿಯಾಗಿದ್ದರು. ಮಹಾತ್ಮರ ಜೀವನ ದರ್ಶನವೇ ಒಂದು ಆದರ್ಶ. ತಮ್ಮ ನಡೆ ಮತ್ತು ನುಡಿಗಳನ್ನು ಒಂದೇ ಎನ್ನುವಂತೆ ಬದುಕಿ, ಅರಿವು, ಆಚಾರ, ಅನುಭಾವದಿಂದ ಮಾನವ ಬದುಕಿಗೆ ದಾರಿದೀಪವಾದ ಜಂಗಮರಲ್ಲಿ ಶಾಂತವೀರ ಪಟ್ಟಾಧ್ಯಕ್ಷರು ಅಗ್ರಗಣ್ಯರು’ ಎಂದರು.
ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು. ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ಮುಧೋಳ ಸಿದ್ದಾರೂಢ ಶಿವಯೋಗಾಶ್ರಮದ ಸಿದ್ದರಾಮ ಸ್ವಾಮೀಜಿ, ಹೋತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ಸಾನ್ನಿಧ್ಯ ವಹಿಸಿದ್ದರು.
ಸಂಸ್ಕೃತ ಪಾಠಶಾಲೆಯ ಹಳೆಯ ವಿದ್ಯಾರ್ಥಿಗಳಾದ ಶಿವಮೊಗ್ಗದ ಮಹಾಲಿಂಗಯ್ಯ ಶಾಸ್ತ್ರಿ ಹಾಗೂ ಬೈಲಹೊಂಗಲದ ಮಹಾಂತೇಶ್ ಶಾಸ್ತ್ರಿ ಆರಾದ್ರಿಮಠ ಇವರನ್ನು ಸನ್ಮಾನಿಸಲಾಯಿತು.
ಕೂಡ್ಲಿಗಿಯ ಅಂತರರಾಷ್ಟ್ರೀಯ ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್ ಅವರಿಂದ ಹಾಸ್ಯ ಕಾರ್ಯಕ್ರಮ ಜರುಗಿತು. ಸಿಂಧಗಿ ಮಠದ ಸಂಚಾಲಕ ಶಿವಬಸಯ್ಯ ಆರಾಧ್ಯಮಠ, ಶಿವಣ್ಣ ಶಿರೂರ, ತಮ್ಮಣ್ಣ ಮುದ್ದಿ, ಚನ್ನಬಸಯ್ಯ ಹಿರೇಮಠ, ಮಹಾಂತೇಶ ಹಿರೇಮಠ, ರಾಮಾಪುರ ಶಾಸ್ತ್ರಿ ಹಾಗೂ ಇತರರು ಹಾಜರಿದ್ದರು.
ಸಮಾರಂಭಕ್ಕೂ ಮುನ್ನ, ಸಿಂದಗಿ ಮಠದಲ್ಲಿ ನಿರ್ಮಿಸಲಾದ ಸಂಸ್ಕೃತ ಪಾಠ ಶಾಲೆಯ ನವೀಕೃತ ಕೊಠಡಿಗಳ ಉದ್ಘಾಟನೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.