ADVERTISEMENT

ಜನರೇ ನನ್ನ ರಿಮೋಟ್ ಕಂಟ್ರೋಲ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ಹಾನಗಲ್‌ ಪಟ್ಟಣದಲ್ಲಿ ಬಿಜೆಪಿಯಿಂದ ರೋಡ್‌ ಷೋ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 15:52 IST
Last Updated 27 ಅಕ್ಟೋಬರ್ 2021, 15:52 IST
ಹಾನಗಲ್‌ ಪಟ್ಟಣದಲ್ಲಿ ಬುಧವಾರ ಉಪಚುನಾವಣೆ ಪ್ರಚಾರಾರ್ಥ ಬಿಜೆಪಿ ವತಿಯಿಂದ ‘ರೋಡ್‌ ಷೋ’ ನಡೆಯಿತು.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಡಾ.ಕೆ.ಸುಧಾಕರ್‌ ಆರ್‌.ಶಂಕರ್‌, ಶಿವರಾಜ ಸಜ್ಜನರ, ಶಿವಕುಮಾರ ಉದಾಸಿ ಇದ್ದಾರೆ
ಹಾನಗಲ್‌ ಪಟ್ಟಣದಲ್ಲಿ ಬುಧವಾರ ಉಪಚುನಾವಣೆ ಪ್ರಚಾರಾರ್ಥ ಬಿಜೆಪಿ ವತಿಯಿಂದ ‘ರೋಡ್‌ ಷೋ’ ನಡೆಯಿತು.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಡಾ.ಕೆ.ಸುಧಾಕರ್‌ ಆರ್‌.ಶಂಕರ್‌, ಶಿವರಾಜ ಸಜ್ಜನರ, ಶಿವಕುಮಾರ ಉದಾಸಿ ಇದ್ದಾರೆ   

ಹಾವೇರಿ: ನನ್ನ ರಿಮೋಟ್ ಕಂಟ್ರೋಲ್ ಜನರ ಬಳಿ ಇದೆ. ಜನರೇ ನನ್ನ ರಿಮೋಟ್ ಕಂಟ್ರೋಲ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದರು.

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಹಾನಗಲ್ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಬುಧವಾರ ಆಯೋಜಿಸಿದ್ದ ‘ಬೃಹತ್ ರೋಡ್ ಷೋ’ನಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರು ನನ್ನನ್ನು ‘ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ’ ಎಂದು ಕರೆದಿದ್ದಾರೆ.‌ ಅವರು ಹೇಳಿದ್ದು ನಿಜ. ನನ್ನ ರಿಮೋಟ್ ಕಂಟ್ರೋಲ್ ಜನರ ಬಳಿ ಇದೆ. ಆದರೆ ಸಿದ್ದರಾಮಯ್ಯ ಕಂಟ್ರೋಲ್ ದೆಹಲಿಯ ಕುಟುಂಬವೊಂದರ ಕೈಯಲ್ಲಿದೆ ಎಂದು ಆರೋಪಿಸಿದರು.

ADVERTISEMENT

ಸ್ವಾಭಿಮಾನ ತೋರಿಸಿ:

ಹಾನಗಲ್ ಕ್ಷೇತ್ರದ ಜನ ಸ್ವಾಭಿಮಾನಿಗಳು. ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಿರುವುದು ಸಿ.ಎಂ ಉದಾಸಿ. ಹೀಗಾಗಿ ನಮ್ಮ ಸ್ವಾಭಿಮಾನವನ್ನು ಪ್ರದರ್ಶಿಸುವ ಅವಕಾಶ ಒದಗಿ ಬಂದಿದೆ. ಪ್ರತಿಯೊಬ್ಬ ಮತದಾರರು ಮತ ಚಲಾಯಿಸಿ, ಸ್ವಾಭಿಮಾನವನ್ನು ಪ್ರದರ್ಶಿಸಿ, ಬಿಜೆಪಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷದವರು ‘ಕತ್ತಲ ರಾತ್ರಿ’ ಮಾಡಲು ಬರುತ್ತಾರೆ. ನಿಮ್ಮ ಮತ ಕದಿಯಲು ಪ್ರಯತ್ನ ಮಾಡುತ್ತಾರೆ. ಅವರ ಆಮಿಷಕ್ಕೆ ಬಲಿ‌ಯಾಗಬೇಡಿ ಎಂದು ಬಸವರಾಜ ಬೊಮ್ಮಾಯಿ ಮತದಾರರಿಗೆ ಮನವಿ ಮಾಡಿದರು.

ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು.ಮೋದಿಯವರ ಅಭಿವೃದ್ಧಿ ಪರ್ವವನ್ನು ನೀವು ನೋಡಿದ್ದೀರಿ.ಉದಾಸಿ ನನ್ನ ಆತ್ಮೀಯರು, ಅವರ ಜೊತೆ ಹಲವಾರು ಬಾರಿ ಕ್ಷೇತ್ರಕ್ಕೆ ಬಂದಿದ್ದೇನೆ.ಉದಾಸಿ ಆತ್ಮಕ್ಕೆ ಶಾಂತಿ ಸಿಗಬೇಕು ಅಂತಿದ್ದರೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ,ಸಿದ್ದರಾಮಯ್ಯ ಅನ್ನಭಾಗ್ಯದ ಮಾತನಾಡುತ್ತಾರೆ.ಆದರೆ ಅನ್ನಭಾಗ್ಯ ಕಾರ್ಯಕ್ರಮದಲ್ಲಿ ಗೋಣಿತೊಟ್ಟು ಮಾತ್ರ ಸಿದ್ದರಾಮಯ್ಯನದು.ಅದರೊಳಗಿನ ಅಕ್ಕಿ ಮೋದಿಯವರದ್ದು.ಬಿ.ಎಸ್.ಯಡಿಯೂರಪ್ಪ ಅವರು ಬಡವರು ದೀನ– ದಲಿತರ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದಾರೆ.ಯಡಿಯೂರಪ್ಪನವರು ದಲಿತರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರು ಎಂದು ಹೇಳಿದರು.

ಹಾನಗಲ್‌ ಪಟ್ಟಣದ ಕುಮಾರೇಶ್ವರ ವಿರಕ್ತಮಠದಿಂದ ಆರಂಭಗೊಂಡ ಬಿಜೆಪಿ ‘ರೋಡ್‌ ಷೋ’ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಕಾರ್ಯಕರ್ತರು ಕೇಸರಿ ಶಲ್ಯ ಹಾಕಿಕೊಂಡು, ಬಿಜೆಪಿ ಬಾವುಟ ಬೀಸುತ್ತಾ, ಮೆರವಣಿಗೆಗೆ ರಂಗು ತಂದರು. ಕಾರ್ಯಕರ್ತರು ಮೋದಿಗೆ ಜೈಕಾರ ಹಾಕಿದರು. ಹರ್ಷೋದ್ಗಾರ, ಚಪ್ಪಾಳೆ, ಶಿಳ್ಳೆಗಳ ಮೂಲಕ ಸಂತಸ ವ್ಯಕ್ತಪಡಿಸಿದರು.

ರೋಡ್‌ ಷೋದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ತೋಟಗಾರಿಕೆ ಸಚಿವ ಮುನಿರತ್ನ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್‌ ಸದಸ್ಯ ಆರ್.ಶಂಕರ್‌, ಶಾಸಕ ರಾಜುಗೌಡ, ಅರುಣ್‌ಕುಮಾರ್‌ ಪೂಜಾರ್‌, ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಕಲ್ಯಾಣಕುಮಾರ್‌ ಶೆಟ್ಟರ್‌, ರಾಜುಗೌಳಿ ಇತರರು ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.