ರಾಣೆಬೆನ್ನೂರು (ಹಾವೇರಿ ಜಿಲ್ಲೆ): ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಮೈಕ್ರೊ ಫೈನಾನ್ಸ್‌ನವರ ಕಿರುಕುಳ ಹೆಚ್ಚುತ್ತಿದ್ದು, ಜನರು ಬೇಸತ್ತು ಗ್ರಾಮ ತೊರೆಯುವುದು ಮುಂದುವರೆದಿದೆ. ಮನೆಗಳಿಗೆ ಬೀಗ ಹಾಕಿ, ಬೇರೆ ಊರುಗಳಿಗೆ ಹೋಗುತ್ತಿದ್ದಾರೆ.
‘ನಗರದ ಅಡವಿ ಆಂಜನೇಯ ಬಡಾವಣೆ ಅಶೋಕನಗರ ಮತ್ತು ತಾಲ್ಲೂಕಿನ ಯರೇಕುಪ್ಪಿ, ಗುಡ್ಡದಹೊಸಳ್ಳಿ, ಹೆಡಿಯಾಲ, ಕುಸಗೂರ ಸೇರಿ ವಿವಿಧ ಗ್ರಾಮಗಳಲ್ಲಿ ಮನೆ ಖರ್ಚು ವೆಚ್ಚಗಳಿಗೆ ಹಲವರು ಸಾಲ ಪಡೆದಿದ್ದಾರೆ. ಆದರೆ, ಈಗ ಅವರಿಗೆ ಮೈಕ್ರೊ ಫೈನಾನ್ಸ್ ಕಂಪನಿಯವರು ಹಗಲು, ರಾತ್ರಿಯೆನ್ನದೇ ಕೊಡುತ್ತಿರುವ ಕಿರುಕುಳ ತಾಳಲು ಆಗುತ್ತಿಲ್ಲ’ ಎಂದು ಜನರು ಆರೋಪಿಸಿದರು.
ಅಡವಿ ಅಂಜನೇಯ ಬಡಾವಣೆಯಲ್ಲಿ ಬಡವರು, ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು, ಆಟೊ ಚಾಲಕರು, ಕೂದಲು, ಪಿನ್ ಮತ್ತು ಸ್ಟೇಷನರಿ ವ್ಯಾಪಾರ ಮಾಡುತ್ತ ಜೀವನ ನಡೆಸುವವರೇ ಹೆಚ್ಚು ವಾಸವಿದ್ದಾರೆ.
ಅಡವಿ ಆಂಜನೇಯ ಬಡಾವಣೆಯ ನಿವಾಸಿ ಅಮೀದಾ (ಆರಿಭಾ) ಶಿಡೇನೂರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಮನೆಯಲ್ಲಿ ಕಷ್ಟ ಇದೆ ಎಂದು ಸಾಲ ಪಡೆದಿದ್ದೆ. ಒಂದು ವಾರವೂ ಬಡ್ಡಿ ಕಟ್ಟುವುದು ತಪ್ಪಿಸಿಲ್ಲ. ನಾನು ಕೆಲಸಕ್ಕೆಂದು ಪೇಟೆಗೆ ಹೋಗಿದ್ದೆ, ಆಗ ಫೈನಾನ್ಸ್‌ನವರು ಮನೆ ಮುಂದೆ ಬಂದು ಹಣ ಕಟ್ಟಬೇಕೆಂದು ಒತ್ತಾಯಿಸಿದ್ದಾರೆ. ಅಮ್ಮ ಬರುವವರೆಗೆ ಕಾಯಿರಿ. ಗಲಾಟೆ ಮಾಡಬೇಡಿ ಎಂದು ಮನೆಯಲ್ಲಿದ್ದ ಮಗಳು ಕೋರಿದರೂ ಫೈನಾನ್ಸ್ ಕಂಪನಿಯವರು ಸುಮ್ಮನಾಗಿಲ್ಲ. ಮನೆಯಿಂದ ಕದಲುವುದಿಲ್ಲವೆಂದು ಎಚ್ಚರಿಕೆ ನೀಡುತ್ತಾರೆ’ ಎಂದು ಅಡವಿ ಆಂಜನೇಯ ಬಡಾವಣೆಯ ನಿವಾಸಿ ಅಮೀದಾ (ಆರಿಭಾ) ಶಿಡೇನೂರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮನೆಯಲ್ಲಿ ಗಂಡು ಮಕ್ಕಳು ಕೆಲಸಕ್ಕೆ ಹೋಗಿರುತ್ತಾರೆ. ಮನೆಯಲ್ಲಿದ್ದ ವಿಧವೆಯವರ ಗೋಳು ಹೇಳತೀರದು. ಮಂಗಳವಾರ ಸಂಜೆ ಫೈನಾನ್ಸ್ ಕಂಪನಿ ಸಿಬ್ಬಂದಿ ನಮ್ಮ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ನನಗೆ ತೊಂದರೆ ಇದೆ, ಕಾಲಾವಕಾಶ ಕೊಡಿ ಎಂದು ಅಂಗಲಾಚಿದರೂ ಜೋರು ಮಾಡಿದರು. ಕೂಡಲೇ ಗ್ರಾಮೀಣ ಠಾಣೆ ಪಿಎಸ್‌ಐ ಹಿರೇಮಠ ಅವರು ಬಂದು ಪರಿಶೀಲಿಸಿದರು. ಆಗ, ಫೈನಾನ್ಸ್ ಕಂಪನಿ ಸಿಬ್ಬಂದಿ ಇನ್ನು ಮುಂದೆ ತೊಂದರೆ ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆ ಪತ್ರ ಬರೆದು ಕೊಟ್ಟಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.