ADVERTISEMENT

ರಾಣೆಬೆನ್ನೂರು, ಹಿರೇಕೆರೂರ: ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತದಾರರು

ರಾಣೆಬೆನ್ನೂರು, ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 495 ಮತಗಟ್ಟೆ ಸ್ಥಾಪನೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 20:00 IST
Last Updated 4 ಡಿಸೆಂಬರ್ 2019, 20:00 IST
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ   

ಹಾವೇರಿ: ‘ಜಿಲ್ಲೆಯ ರಾಣೆಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನವು ಡಿ.5ರಂದು ಬೆಳಿಗ್ಗೆ 7ರಿಂದ ಸಂಜೆ 6ಗಂಟೆವರೆಗೆ ನಡೆಯಲಿದ್ದು, ಒಟ್ಟು 495 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ಡಿ.4ರಂದು ರಾಣೆಬೆನ್ನೂರು ನಗರದ ಸೇಂಟ್‌ ಲಾರೆನ್ಸ್‌ ಪ್ರೌಢಶಾಲೆ ಹಾಗೂ ಹಿರೇಕೆರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಮಸ್ಟರಿಂಗ್‌ ಕಾರ್ಯ ನಡೆಯಲಿದೆ. ಮತಗಟ್ಟೆ ಸಿಬ್ಬಂದಿ ಇವಿಎಂ ಯಂತ್ರದೊಂದಿಗೆ ನಿಯೋಜಿತ ಮತಗಟ್ಟೆಗೆ ತೆರಳಲಿದ್ದಾರೆ ಎಂದು ಬುಧವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹಿರೇಕೆರೂರು ವಿಧಾನಸಭಾ ಕ್ಷೇತ್ರಕ್ಕೆ 229 ಹಾಗೂ ರಾಣೆಬೆನ್ನೂರು ಕ್ಷೇತ್ರಕ್ಕೆ 266 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಪೈಕಿ ರಾಣೆಬೆನ್ನೂರಿನಲ್ಲಿ 54 ಹಾಗೂ ಹಿರೇಕೆರೂರಿನಲ್ಲಿ46 ಮತಗಟ್ಟೆಗಳನ್ನು ‘ಸೂಕ್ಷ್ಮ ಮತಗಟ್ಟೆಗಳು’ ಎಂದು ಗುರುತಿಸಲಾಗಿದೆ. ಈ ಮತಗಟ್ಟೆಗಳ ವ್ಯಾಪ್ತಿಗೆ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ, ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಮತದಾನ ಕಾರ್ಯಕ್ಕಾಗಿ ಪ್ರತಿ ಮತಗಟ್ಟೆಗೆ 4 ಮಂದಿಯಂತೆ ಒಟ್ಟು 2,180 ಸಿಬ್ಬಂದಿ ನೇಮಿಸಲಾಗಿದೆ. ಈ ಸಿಬ್ಬಂದಿಗೆ ಎರಡು ಹಂತಗಳಲ್ಲಿ ಪೂರ್ಣ ಪ್ರಮಾಣದ ತರಬೇತಿ ನೀಡಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ತಲಾ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ತಿಳಿಸಿದರು.

ಅಂಚೆ ಮತಪತ್ರ ವಿತರಣೆ:ಮತದಾನ ಕಾರ್ಯಕ್ಕಾಗಿ ನಿಯೋಜಿತ ಸಿಬ್ಬಂದಿ ಮತದಾನ ನಡೆಯಲಿರುವ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಲ್ಲಿ ಅವರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಅಂಚೆ ಮತ ಪತ್ರ ಮತ್ತು ಚುನಾವಣಾ ಕರ್ತವ್ಯ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಎರಡು ಕ್ಷೇತ್ರಗಳಲ್ಲಿ 37 ಸಿಬ್ಬಂದಿಗೆ ಅಂಚೆ ಪತ್ರ ಹಾಗೂ 466 ಸಿಬ್ಬಂದಿಗೆ ಚುನಾವಣಾ ಕರ್ತವ್ಯ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ. ಅಲ್ಲದೆ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ 298 ಯೋಧರಿಗೆ ಅಂಚೆ ಮತ ಪತ್ರಗಳನ್ನು ಕಳುಹಿಸಲಾಗಿದೆ ಎಂದು ವಿವರಿಸಿದರು.

ಮಸ್ಟರಿಂಗ್:ರಾಣೆಬೆನ್ನೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹುಣಸಿಕಟ್ಟಿ ರಸ್ತೆಯ ಸೇಂಟ್ ಲಾರೆನ್ಸ್ ಪ್ರೌಢ ಶಾಲೆಯಲ್ಲಿ ಹಾಗೂ ಹಿರೇಕೆರೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಮಸ್ಟರಿಂಗ್’ ಕಾರ್ಯ ನಡೆಯಲಿದೆ. ಡಿ.9ರಂದು ಹಾವೇರಿಯ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ‘ಮತ ಎಣಿಕೆ’ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.