ADVERTISEMENT

‍ಹಾವೇರಿ | ಪಿಎಲ್‌ಡಿ ಚುನಾವಣೆ: ‘ಕೈ’ ಬೆಂಬಲಿತರ ಜಯಭೇರಿ

14 ನಿರ್ದೇಶಕ ಸ್ಥಾನಗಳಿಗೆ ನಡೆದಿದ್ದ ಚುನಾವಣೆ ಪ್ರಕ್ರಿಯೆ | ಮತದಾನದ ಮೂಲಕ 12 ನಿರ್ದೇಶಕರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 8:51 IST
Last Updated 17 ಡಿಸೆಂಬರ್ 2025, 8:51 IST
ಹಾವೇರಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ ನಿರ್ದೇಶಕರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮಂಗಳವಾರ ವಿಜಯೋತ್ಸವ ಆಚರಿಸಿದರು
ಹಾವೇರಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ ನಿರ್ದೇಶಕರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮಂಗಳವಾರ ವಿಜಯೋತ್ಸವ ಆಚರಿಸಿದರು   

ಹಾವೇರಿ: ಬಿಜೆಪಿ ಬೆಂಬಲಿತ ನಿರ್ದೇಶಕರ ಆಡಳಿತದಲ್ಲಿದ್ದ ಹಾವೇರಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಪಿಎಲ್‌ಡಿ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಬೆಂಬಲಿತ 7 ಸದಸ್ಯರು ಗೆಲುವು ಸಾಧಿಸಿದ್ದಾರೆ. ಇದರ ಜೊತೆಯಲ್ಲಿ, ಕೈ ಬೆಂಬಲಿತ ಇಬ್ಬರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ, 9 ಸದಸ್ಯರು ಬಹುಮತದೊಂದಿಗೆ 20 ವರ್ಷಗಳ ನಂತರ ಬ್ಯಾಂಕ್‌ನ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಬೆಂಬಲಿತರು ಸಜ್ಜಾಗಿದ್ದಾರೆ.

ಚುನಾವಣೆ ವೇಳಾಪಟ್ಟಿ ಪ್ರಕಾರ ನವೆಂಬರ್ 30ರಂದು ನೂತನ ನಿರ್ದೇಶಕರ ಆಯ್ಕೆಗಾಗಿ ಮತದಾನ ನಡೆದಿತ್ತು. ಆದರೆ, ಮತ ಎಣಿಕೆಗೆ ನ್ಯಾಯಾಲಯದ ತಡೆಯಾಜ್ಞೆ ಇತ್ತು. ಇತ್ತೀಚೆಗೆ ತಡೆಯಾಜ್ಞೆ ತೆರುವಾಗಿದ್ದರಿಂದ, ಮಂಗಳವಾರ ಮತ ಎಣಿಕೆ ಪ್ರಕ್ರಿಯೆ ನಡೆಯಿತು.

ADVERTISEMENT

ಮತದಾನ ನಡೆದಿದ್ದ 12 ಸ್ಥಾನಗಳ ಪೈಕಿ 7 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಉಳಿದ, ಐದು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಬ್ಯಾಂಕ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಪಡೆಯಲು ಅಗತ್ಯವಿರುವ ಬಹುಮತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಸಿಕ್ಕಿದೆ. ಕೆಲವೇ ದಿನಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯೂ ಆಗಲಿದೆ. ರಿಟರ್ನಿಂಗ್ ಅಧಿಕಾರಿ ಪ್ರಕಾಶ ಎಸ್. ಹಿರಗೂಳಿ ಅವರು ಚುನಾವಣೆ ಪ್ರಕ್ರಿಯೆ ನಡೆಸಿದರು.

ಮತ ಎಣಿಕೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಪ್ರವಾಸಿ ಮಂದಿರದಲ್ಲಿ ಸೇರಿದ್ದ ನೂತನ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರು, ಪರಸ್ಪರ ಬಣ್ಣ ಹಚ್ಚಿ ವಿಜಯೋತ್ಸವ ಆಚರಿಸಿದರು.

ಮತದಾನದಲ್ಲಿ ಆಯ್ಕೆಯಾದ ನಿರ್ದೇಶಕರು: ಉಳಿವೆಪ್ಪ ಶಿವಬಸಪ್ಪ ಹಲಗಣ್ಣನವರ, ಪರಮೇಶಗೌಡ ಹೊನ್ನಪ್ಪಗೌಡ ಪಾಟೀಲ, ಕಿರಣ ಚನ್ನಬಸಪ್ಪ ಕೊಳ್ಳಿ, ಉಮೇಶ ಶಿವಾನಂದಪ್ಪ ಹೆಡಿಯಾಲ, ಬಸವರಾಜ ರಾಮಪ್ಪ ಬಾಲಕ್ಕನವರ, ಗುರುನಾಥಯ್ಯ ವೀರಯ್ಯ ಮಳ್ಳೂರಮಠ (ಕಮತರ), ಗುಡ್ಡನಗೌಡ ಚನ್ನಬಸನಗೌಡ ಮುದಿಗೌಡ್ರ, ಶೇಖಪ್ಪ ಹನುಮಂತಪ್ಪ ಕಳ್ಳಿಮನಿ, ಶೆದಿಯಪ್ಪ ಸಿದ್ದಪ್ಪ ಕಾಶಂಬಿ, ಮಂಜಯ್ಯ ವಿರೂಪಾಕ್ಷಯ್ಯ ಹಿರೇಮಠ, ಚಂಪಕ್ಕ ಹನಮರೆಡ್ಡಿ ಭರಮರಡ್ಡೇರ, ಅನ್ನಪೂರ್ಣಾ ನೀಲಪ್ಪ ಹಳ್ಳಾಕಾರ.

ಅವಿರೋಧ ಆಯ್ಕೆ; ಪರಮೇಶಪ್ಪ ನೀಲಪ್ಪ ಶಿವಣ್ಣನವರ ಹಾಗೂ ಮಹಾದೇವಪ್ಪ ಪುಟ್ಟಪ್ಪ ಭಜಂತ್ರಿ.

ಶಾಸಕರ ಸಹೋದರ ಅವಿರೋಧ ಆಯ್ಕೆ

ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರ ಸಹೋದರ ಪರಮೇಶಪ್ಪ ನೀಲಪ್ಪ ಶಿವಣ್ಣನವರ ಅವರು ಪಿಎಲ್‌ಡಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುತ್ತಲ ಬಿನ್ ಸಾಲಗಾರರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾಗಿ ಪರಮೇಶ್ವರಪ್ಪ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಬಿಜೆಪಿ ಬೆಂಬಲಿತರಾದ ಮಂಜಪ್ಪ ಬಿದರಿ ಹಾಗೂ ಪ್ರಕಾಶ ಕೆಂಚಮಲ್ಲ ಉಮೇದುವಾರಿಕೆ ಸಲ್ಲಿಸಿದ್ದರು.

ಬಿಜೆಪಿ ಮುಖಂಡರ ಮಾತುಕತೆ ಬಳಿಕ ಕೆಂಚಮಲ್ಲ ಅವರು ನಾಮಪತ್ರ ವಾಪಸು ಪಡೆದು ಮಂಜಪ್ಪ ಬಿದರಿ ಅವರಿಗೆ ಅವಕಾಶ ನೀಡಿದ್ದರು. ಕೈ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸಹೋದರನ ಗೆಲುವಿಗಾಗಿ ಶಾಸಕ ಬಸವರಾಜ ಶಿವಣ್ಣನವರ ಅವರು ಚುರುಕಿನ ಪ್ರಚಾರ ನಡೆಸುತ್ತಿದ್ದರು. ರಾಜಕೀಯ ಬೆಳವಣಿಗೆಯಂದಾಗಿ ಬಿಜೆಪಿಯ ಮಂಜಪ್ಪ ಬಿದರಿ ಅವರು ಕೊನೆಕ್ಷಣದಲ್ಲಿ ನಾಮಪತ್ರ ಹಿಂಪಡೆದಿದ್ದರಿಂದ ಶಾಸಕರ ಸಹೋದರ ನೂತನ ನಿರ್ದೇಶಕರಾಗಿದ್ದಾರೆ.

ಬಸಾಪುರ ಸಾಲಗಾರರ ಪರಿಶಿಷ್ಟ ಜಾತಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಬೆಂಬಲಿತ ಮಹಾದೇವಪ್ಪ ಪುಟ್ಟಪ್ಪ ಭಜಂತ್ರಿ ವಿರುದ್ಧ ಬಿಜೆಪಿಯ ಚೋಳಪ್ಪ ಲಮಾಣಿ ನಾಮಪತ್ರ ಸಲ್ಲಿಸಿದ್ದರು. ಚೋಳಪ್ಪ ಸಹ ಕೊನೆಕ್ಷಣದಲ್ಲಿ ನಾಮಪತ್ರ ವಾಪಸು ಪಡೆದಿದ್ದರಿಂದ ಈ ಕ್ಷೇತ್ರಕ್ಕೆ ಅವಿರೋಧ ಆಯ್ಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.