ADVERTISEMENT

ಶಿಗ್ಗಾವಿ: ಕೆರೆಯಲ್ಲ ಇದು ವನಹಳ್ಳಿ ಹತ್ತಿರದ ಸರ್ವಿಸ್ ರಸ್ತೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 2:19 IST
Last Updated 23 ಜುಲೈ 2025, 2:19 IST
ಶಿಗ್ಗಾವಿ ತಾಲ್ಲೂಕಿನ ವನಹಳ್ಳಿ ಕ್ರಾಸ್ ಹತ್ತಿರದ ಸರ್ವಿಸ್ ರಸ್ತೆ ಮಳೆ ನೀರಿನಿಂದ ತೆಗ್ಗು, ಗುಂಡಿ ಬಿದ್ದು ಹಾಳಾಗಿದೆ
ಶಿಗ್ಗಾವಿ ತಾಲ್ಲೂಕಿನ ವನಹಳ್ಳಿ ಕ್ರಾಸ್ ಹತ್ತಿರದ ಸರ್ವಿಸ್ ರಸ್ತೆ ಮಳೆ ನೀರಿನಿಂದ ತೆಗ್ಗು, ಗುಂಡಿ ಬಿದ್ದು ಹಾಳಾಗಿದೆ   

ಶಿಗ್ಗಾವಿ: ಕಳೆದ ಎರಡು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ವನಹಳ್ಳಿ ಗ್ರಾಮದ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದರಿ ಪಕ್ಕದ ಸರ್ವಿಸ್ ರಸ್ತೆ ತಗ್ಗುಗುಂಡಿಗಳು ಬಿದ್ದು, ಇಡೀ ರಸ್ತೆಯಲ್ಲ ಕೆರೆಯಂತೆ ಕಾಣುತ್ತಿದೆ. ಈ ಭಾಗದ ಸಾರ್ವಜನಿಕರು ಸಂಚಾರಕ್ಕಾಗಿ ನಿತ್ಯ ಪರದಾಡುವಂತಾಗಿದೆ.

ಹೆದ್ದಾರಿ ರಸ್ತೆಯಲ್ಲಿ ವಾಹನ ದಟ್ಟನೆ ಕಾರಣ ಗ್ರಾಮೀಣ ಭಾಗದ ವಾಹನಗಳು, ರೈತರ ಬಂಡಿಗಳು ಹಾಗೂ ದ್ವಿಚಕ್ರ ವಾಹನ ಮತ್ತು ಪಾದಚಾರಿಗಳು ಹೆಚ್ಚಾಗಿ ಓಡಾಡಲು ಸಹಕಾರಿಯಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ಈವರೆಗೆ ಹೆದ್ದಾರಿ ಪಕ್ಕದಲ್ಲಿನ ಸರ್ವಿಸ್ ರಸ್ತೆಗಳ ಕಾಮಗಾರಿ ಪೂರ್ಣಗೊಂಡಿಲ್ಲ.

ಅಲ್ಲಲ್ಲಿ ತುಂಡು ಕಾಮಗಾರಿ ಮಾಡಿ ಅರ್ಧಕ್ಕೆ ಬಿಟ್ಟಿದ್ದಾರೆ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ವಾಹನಗಳು ಸಾಗಲು ಸಾಧ್ಯವಿಲ್ಲದಾಗಿದೆ. ಆದರೂ ಸಹ ಅಧಿಕಾರಿಗಳು ಈ ಕಡೆ ಗಮನ ಹರಿಸುತ್ತಿಲ್ಲ ಎಂದು ಈ ಭಾಗದ ಜನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ADVERTISEMENT

ಶಿಗ್ಗಾವಿ ಪಟ್ಟಣದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಫಿನಿಕ್ಸ್ ಸ್ಕೂಲ್ ನಂತರ ವನಹಳ್ಳಿ ಕ್ರಾಸ್‌ವರೆಗೆ ಸರ್ವಿಸ್ ರಸ್ತೆ ಕಾಮಗಾರಿ ಅಪೂರ್ಣಗೊಂಡಿದೆ. ಅದರಿಂದಾಗಿ ನಿತ್ಯ ವನಹಳ್ಳಿ, ಕಾಮನಹಳ್ಳಿ, ಗೂಟಗೋಡಿ ಸೇರಿದಂತೆ ಈ ಭಾಗದ ಗ್ರಾಮೀಣ ಜನರು ಸರ್ವಿಸ್ ರಸ್ತೆಗಳು ಹದಗೆಟ್ಟಿರುವ ಕಾರಣ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಆದರೆ ಅಪಘಾತದ ಭಯದಿಂದ ಹದಗೆಟ್ಟಿರುವ ಸರ್ವಿಸ್ ರಸ್ತೆಯಲ್ಲಿ ಅನಿವಾರ್ಯವಾಗಿ ಓಡಾಡುವಂತಾಗಿದೆ ಎಂದು ಗ್ರಾಮೀಣ ಜನರು ಆತಂಕ ತೋಡಿಕೊಂಡರು.

ಹದಗೆಟ್ಟಿರುವ ಸರ್ವಿಸ್ ರಸ್ತೆಯಲ್ಲಿ ನಿತ್ಯ ಫಿನಿಕ್ಸ್ ಸ್ಕೂಲ್ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶದ ಮಕ್ಕಳು ಓಡಾಡುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಗಳಾಗುತ್ತಿವೆ. ಬೇಸಿಗೆಯಲ್ಲಿ ಧೂಳಿನಿಂದ ರಸ್ತೆ ಕಾಣದಂತಾಗುತ್ತಿವೆ. ಹೀಗಾಗಿ ಈ ರಸ್ತೆಯಲ್ಲಿ ಸಾಕಷ್ಟು ಜನ ಬಿದ್ದು ಗಾಯಗೊಂಡಿದ್ದಾರೆ.

ಇನ್ನು ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಮೌಖಿಕವಾಗಿ ಸಾಕಷ್ಟು ಬಾರಿ ಮನವಿ ಮಾಡಿದರು ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ.  ಸುಗಮ ಸಂಚಾರಕ್ಕೆ ಸಂಬಂಧಿಸಿದ ಇಲಾಖೆ ಗಮನ ಹರಿಸಬೇಕು.
ಶಂಕರಗೌಡ್ರ ಪಾಟೀಲ, ರೈತ ಮುಖಂಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.