ADVERTISEMENT

ಈಡಿಗರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ

ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಆರೋಪ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 15:31 IST
Last Updated 30 ಜುಲೈ 2023, 15:31 IST
ಬೆಳಗಾಲಪೇಟೆಯಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ಆಯೋಜಿಸಿದ್ದ ಚಿಂತನ ಶಿಬಿರವನ್ನು ಪ್ರಣವಾನಂದ ಸ್ವಾಮೀಜಿ ಉದ್ಘಾಟಿಸಿದರು
ಬೆಳಗಾಲಪೇಟೆಯಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ಆಯೋಜಿಸಿದ್ದ ಚಿಂತನ ಶಿಬಿರವನ್ನು ಪ್ರಣವಾನಂದ ಸ್ವಾಮೀಜಿ ಉದ್ಘಾಟಿಸಿದರು   

ಅಕ್ಕಿಆಲೂರ: ‘ರಾಜ್ಯದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದಿವರು ಸಮಾಜದ ನಾಯಕರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆದಿದ್ದು, ಇದಕ್ಕೆ ಮುಂದಿನ ದಿನಗಳಲ್ಲಿ ಸಮಾಜ ತಕ್ಕ ಉತ್ತರ ನೀಡಲಿದೆ’ ಎಂದು ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಎಚ್ಚರಿಸಿದರು.

ಹಾನಗಲ್ ತಾಲ್ಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ಭಾನುವಾರ ಆಯೋಜಿಸಿದ್ದ ಜಿಲ್ಲೆಯ ಚಿಂತನ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಅನ್ಯ ಜಾತಿ, ಸಮುದಾಯ, ಕುಲದವರು ಅವರ ಶ್ರೇಯೋಭಿವೃದ್ಧಿಗೆ ಹೋರಾಟಕ್ಕಿಳಿದಿವೆ. ನಾವೂ ಕೂಡ ಹಕ್ಕುಗಳಿಗಾಗಿ ಹೋರಾಟದ ಹಾದಿ ಹಿಡಿಯಬೇಕಿದೆ.

ಭಿನ್ನ, ಭೇದಗಳನ್ನೆಲ್ಲ ಬದಿಗೊತ್ತಿ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಹ ಭಾಗಿಗಳಾಗಬೇಕಿದೆ. ದಲಿತರು, ಹಿಂದುಳಿದ ವರ್ಗಗಳಿಗೆ ಸೇರಿದವರೂ ಸಹ ಪ್ರಗತಿಯತ್ತ ಸಾಗಿದ್ದು, ಈಡಿಗರೂ ಸಹ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ. ದೇಶದ ನಾನಾ ರಾಜ್ಯಗಳಲ್ಲಿ ನಮ್ಮ ಸಮಾಜಕ್ಕೆ ಸೇರಿದ ಮುಖ್ಯಮಂತ್ರಿಗಳಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗುವ ಯೋಗ ನಮ್ಮ ಸಮಾಜಕ್ಕೆ ಕೂಡಿ ಬರಲಿದೆ ಎಂದರು.

ADVERTISEMENT

ಸಮಾಜದ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಂಪೂರ್ಣ ಬೆಂಬಲ ನೀಡುವ ನಿರ್ಣಯವನ್ನು ಈ ಸಂದರ್ಭದಲ್ಲಿ ತೆಗೆದುಕೊಳ್ಳಲಾಯಿತು. ಸೆ. 9ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಸಮಾಜದ ನೇತೃತ್ವದಲ್ಲಿ ನಡೆಯುವ ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆಗೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ತೆರಳಲು ನಿರ್ಣಯಿಸಲಾಯಿತು.

ಮಹಾಮಂಡಳಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ನಾಯಕ್, ರಾಜ್ಯ ಉಪಾಧ್ಯಕ್ಷ ಉದಯ ಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಪರಶುರಾಮ ಈಳಿಗೇರ, ಮುಖಂಡರಾದ ರಾಕೇಶ್ ಈಳಿಗೇರ, ಮಂಜುನಾಥ ಈಳಿಗೇರ, ಸತೀಶ್ ಈಳಿಗೇರ, ಮುತ್ತಣ್ಣ ಈಳಿಗೇರ, ಪ್ರಭಾ ದೇವರಾಜ್, ಶಾಂತಾ ಈಳಿಗೇರ, ಬಸವರಾಜ ಈಳಿಗೇರ, ಮಾರುತೆಪ್ಪ ಈಳಿಗೇರ, ದೇವರಾಜ ಈಳಿಗೇರ, ಮಲ್ಲಿಕಾರ್ಜುನ ಈಳಿಗೇರ, ಪರಶುರಾಮ ಈಳಿಗೇರ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.