ADVERTISEMENT

ನಿಮ್ಮಪ್ಪನ ಮನೆ ಆಸ್ತಿ ಕೇಳ್ತಿಲ್ಲ: ಪ್ರಸನ್ನಾನಂದಪುರಿ ಸ್ವಾಮೀಜಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 12:38 IST
Last Updated 13 ಅಕ್ಟೋಬರ್ 2020, 12:38 IST
ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠ
ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠ   

ಹಾವೇರಿ: ‘ಮೀಸಲಾತಿ ನಿಮ್ಮಪ್ಪನ ಮನೆ ಆಸ್ತಿಯಲ್ಲ. ನಾವು ನಿಮ್ಮಪ್ಪನ ಮನೆ ಆಸ್ತಿ ಕೇಳ್ತಿಲ್ಲ. ಮೀಸಲಾತಿ ನಮ್ಮ ಸಂವಿಧಾನಬದ್ಧ ಹಕ್ಕು. ಮೀಸಲಾತಿ ವಿಚಾರದಲ್ಲಿ ನಮ್ಮ ಕಿವಿಗೆ ಹೂವು ಇಡ್ತಿದ್ದಾರೆ’ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಬಿ.ಎಸ್‌.ಯಡಿಯೂರಪ್ಪ ಅವರು ಮೀಸಲಾತಿ ಹೆಚ್ಚಳದ ಬಗ್ಗೆ ಮಾತು ಕೊಟ್ಟಿದ್ದರು. ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಮಾತು ಮರೆತಿದ್ದಾರೆ. ವಾಲ್ಮೀಕಿ ಸಮುದಾಯದ ಬೇಡಿಕೆ ಈಡೇರಿಸದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಜೈಲಿನಲ್ಲಿಟ್ಟರೂ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತೇವೆ’ ಎಂದರು.

ಬೇಡರ ಶಾಪ: ಬೇಡರ ಶಾಪ ತಟ್ಟಿ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡಿತು.ಬಿಜೆಪಿಯವರ ಚರ್ಮ ದಪ್ಪ ಇದೆ. ಈಗ ಅವರಿಗೆ ಚಾಟಿ ಬೀಸಬೇಕಿದೆ. ಸಿ.ಎಂ. ಯಡಿಯೂರಪ್ಪ ಕೂಡಲೇ ಕ್ಯಾಬಿನೆಟ್‌ ಸಭೆ ಕರೆದು ನ್ಯಾ.ನಾಗಮೋಹನದಾಸ ವರದಿ ಅನುಷ್ಠಾನಕ್ಕೆ ತರಬೇಕು. ಆಶ್ವಾಸನೆ, ಆಶ್ವಾಸನೆಯಾಗಿಯೇ ಉಳಿಯಬಾರದು ಎಂದು ಗುಡುಗಿದರು.

ADVERTISEMENT

ಬೆಂಗಳೂರು ಚಲೋ: ಅ’21ರಂದು ಬೆಂಗಳೂರಿನಲ್ಲಿ ಧರಣಿ ಕೂರುತ್ತೇನೆ.ಹತ್ತು ದಿನಗಳ ಕಾಲ ಎಲ್ಲರೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ. ಅ.31ರಂದು ಬೆಂಗಳೂರಿನಲ್ಲಿ ವಾಲ್ಮೀಕಿ ಜಯಂತಿ ನಡೆಯಲಿದೆ. ಸಮುದಾಯದವರು ಒಗ್ಗೂಡಿ ಅಂದು ‘ಬೆಂಗಳೂರು ಚಲೋ’ ಮಾಡೋಣ ಬನ್ನಿ ಎಂದು ಕರೆ ನೀಡಿದರು.ನಾವು ರಾಜಧಾನಿಗೆ ಲಗ್ಗೆ ಇಟ್ಟರೆ ನಮ್ಮನ್ನು ಬಂಧಿಸಬಹುದು.ಇಡೀ ರಾಜ್ಯದ ಸಮುದಾಯದ ಜನರು ಬೆಂಗಳೂರಿಗೆ ಬಂದ್ರೆ ಎಷ್ಟು ಜನರನ್ನು ಬಂಧಿಸುತ್ತಾರೆ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.