ADVERTISEMENT

ದೇಶದ ಸಂಪತ್ತು ಖಾಸಗಿಯವರ ಪಾಲು

ಧಾರವಾಡ ಕ್ಷೇತ್ರದಲ್ಲಿ ಸಲೀಂ ಪರ ಅಲೆ: ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 16:21 IST
Last Updated 6 ಡಿಸೆಂಬರ್ 2021, 16:21 IST
ಪಿ.ವಿ.ಮೋಹನ್‌, ಎಐಸಿಸಿ ಕಾರ್ಯದರ್ಶಿ 
ಪಿ.ವಿ.ಮೋಹನ್‌, ಎಐಸಿಸಿ ಕಾರ್ಯದರ್ಶಿ    

ಹಾವೇರಿ: ‘ಐವತ್ತು ವರ್ಷ ಕಾಂಗ್ರೆಸ್‌ ದೇಶಕ್ಕೆ ಸಂಪತ್ತು ಸೃಷ್ಟಿಸಿತ್ತು. ಆದರೆ, ಬಿಜೆಪಿ ಏಳೇ ವರ್ಷಗಳಲ್ಲಿ ದೇಶದ ಸಂಪತ್ತನ್ನು ತಮ್ಮ ಸ್ನೇಹಿತರಾದ ಖಾಸಗಿ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದೆ’ ಎಂದು ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್‌ ಆರೋಪಿಸಿದರು.

ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ‘ಮಧ್ಯಪ್ರದೇಶ, ಹರಿಯಾಣ ಮತ್ತು ಕರ್ನಾಟಕ ರಾಜ್ಯಗಳನ್ನು ಪ್ರಧಾನಿ ಕಚೇರಿಯಿಂದ ನಿಯಂತ್ರಿಸಲಾಗುತ್ತಿದೆ. ಬಿಜೆಪಿಯವರು ಸಂಪುಟ ಪುನರ್‌ರಚನೆಗೆ ಕೈ ಹಾಕಿದರೆ, ಸರ್ಕಾರ ಕೂಡಲೇ ಬಿದ್ದು ಹೋಗುತ್ತದೆ. ಬಿಟ್‌ ಕಾಯಿನ್‌ ದಂಧೆಯಲ್ಲೂ ಬಿಜೆಪಿ ನಾಯಕರ ಹೆಸರು ಕೇಳಿ ಬಂದಿದೆ. ಕರ್ನಾಟಕ ಅತಿಭ್ರಷ್ಟ ರಾಜ್ಯ ಎಂಬ ಅಪಕೀರ್ತಿಗೆ ಪಾತ್ರವಾಗಿದೆ ಎಂದು ಟೀಕಿಸಿದರು.

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಿದರೆ ಮತದಾರರ ಒಲವು ಏನು ಎಂಬುದು ಬಿಜೆಪಿಗೆ ಗೊತ್ತಾಗುತ್ತದೆ. ಹೀಗಾಗಿ ಚುನಾವಣೆ ಮುಂದೂಡುತ್ತಿದ್ದಾರೆ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಬೆಲೆ ಏರಿಕೆ, ತೈಲಬೆಲೆ ಏರಿಕೆಯಿಂದ ಬೇಸತ್ತಿರುವ ಜನರು ಬಿಜೆಪಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ADVERTISEMENT

ಧಾರವಾಡ ಕ್ಷೇತ್ರದ ಮೂರು ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ. ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹಮದ್‌ ಅವರು 4 ಸಾವಿರ ಮೊದಲ ಪ್ರಾಶಸ್ತ್ಯದ ಮತಗಳಿಂದ ಗೆಲ್ಲಲಿದ್ದಾರೆ. ಕಾಂಗ್ರೆಸ್‌ ಸಭೆಗಳಲ್ಲಿ ಹೆಚ್ಚಿನ ಯುವಕರು ಕಾಣಿಸಿಕೊಳ್ಳುತ್ತಿದ್ದಾರೆ. ಮೂರು ಜಿಲ್ಲೆಗಳಿಗೆ ಸಲೀಂ ಅವರು ಹೆಚ್ಚಿನ ಅನುದಾನ ನೀಡಿದ್ದಾರೆ. ಜನರ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ. ಗ್ರಾ.ಪಂ. ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದರು.

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್‌ ಜಬ್ಬಾರ ಮಾತನಾಡಿ, ‘ಸಿದ್ದರಾಮಯ್ಯ ಸರ್ಕಾರ ಜನರಿಗೆ ‘ಅನ್ನಭಾಗ್ಯ’ ನೀಡಿದೆ. ಇಲ್ಲದಿದ್ದರೆ ಕೋವಿಡ್‌ ಕಾಲದಲ್ಲಿ ಜನರು ಹಸಿವಿನಿಂದ ನರಳಬೇಕಿತ್ತು. ಅಧಿಕಾರ ವಿಕೇಂದ್ರೀಕರಣದಲ್ಲಿ ಬಿಜೆಪಿಗೆ ಆಸಕ್ತಿಯಿಲ್ಲ ಕೆಲಸವನ್ನೇ ಮಾಡದೇ ಮತ ಕೇಳಲು ಬಂದ ಬಿಜೆಪಿಗೆ ತಕ್ಕ ಪಾಠ ಕಲಿಸಿ’ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ, ಡಿ.ಬಸವರಾಜು, ವಿ.ಎಸ್‌.ಆರಾಧ್ಯ, ಶ್ರೀನಿವಾಸ ಹಳ್ಳಳ್ಳಿ ಇದ್ದರು.

ಗೃಹ ಸಚಿವರ ವಜಾಕ್ಕೆ ಆಗ್ರಹ

‘ಕರ್ನಾಟಕ ಪೊಲೀಸರಿಗೆ ದೇಶದಲ್ಲಿ ಒಳ್ಳೆಯ ಹೆಸರಿದೆ. ಆದರೆ,ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಮ್ಮದೇ ಇಲಾಖೆಯ ಸಿಬ್ಬಂದಿ ಬಗ್ಗೆ ಹಗುರವಾಗಿ ಮಾತನಾಡಿ, ಪೊಲೀಸರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿದ್ದಾರೆ. ಅವರಲ್ಲಿ ಭೀತಿ ಹುಟ್ಟಿಸಿ, ಆರ್‌ಎಸ್‌ಎಸ್‌ ನೀತಿಗೆ ಅನುಸಾರ ನಡೆದುಕೊಳ್ಳುವಂತೆ ಪರೋಕ್ಷ ಒತ್ತಡ ಹೇರುತ್ತಿದ್ದಾರೆ. ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್‌ ಆಗ್ರಹಿಸಿದರು.

ಬಿಜೆಪಿಯವರು ಪೊಲೀಸ್‌ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ. ಶಿಕ್ಷಣ ಇಲಾಖೆಯಲ್ಲೂ ಆರ್‌ಎಸ್‌ಎಸ್‌ ನೀತಿ ಸೇರಿಸುವ ಹುನ್ನಾರ ನಡೆಸಿದ್ದಾರೆ. ಶೇ 40 ಕಮಿಷನ್‌ ಸರ್ಕಾರ ಎಂದು ಗುತ್ತಿಗೆದಾರರಿಂದ ಕರೆಸಿಕೊಂಡಿರುವ ಬಿಜೆಪಿಯವರು ಪೊಲೀಸರ ಲಂಚದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.