ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ದುರ್ಗಾದೇವಿ, ಮಾಂತಗೇಮ್ಮದೇವಿ, ವಿಘ್ನೇಶ್ವರ, ಮಾತಂಗೆಮ್ಮದೇವಿ ಮತ್ತು ಆಂಜನೇಯಸ್ವಾಮಿ ಜಾತ್ರೆ ಹಾಗೂ ‘ನಮ್ಮೂರ ಜಾತ್ರಾ ಮಹೋತ್ಸವ’ ಅಂಗವಾಗಿ ಮಂಗಳವಾರ ದುರ್ಗಾದೇವಿ ಮೂರ್ತಿ ಮೆರವಣಿಗೆ ಅನೇಕ ಭಕ್ತ ಸಮೂಹದ ನಡುವೆ ಸಡಗರದಿಂದ ಜರುಗಿತು.
ಮೆರವಣಿಗೆಗೆ ಅರಳೆಲೆಮಠದ ರೇವಣಸಿದ್ಧೇಶ್ವರ ಸ್ವಾಮೀಜಿ, ಕೆಂಡದಮಠದ ಶಿವಪುತ್ರಯ್ಯ ಸ್ವಾಮೀಜಿ ಚಾಲನೆ ನೀಡಿದರು. ದೇವಿ ಮೂರ್ತಿ ದಾನಿ ದಿವಾಕರ ವೆರ್ಣೇಕರ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಗಣ್ಯರು ಪೂಜೆ ಸಲ್ಲಿಸಿದರು. ನಂತರ ಆರಂಭವಾದ ಮೆರವಣಿಗೆ ಉತ್ಸವದಲ್ಲಿ ಚಿಕ್ಕೋಡಿ ಮರಿಸಿದ್ದೇಶ್ವರ ಡೊಳ್ಳು ಕುಣಿತ ಮತ್ತು ಡೊಳ್ಳಿನ ಜಾನಪದ ಮೇಳ, ಝಾಂಜ್ ಮೇಳ, ಯುವಕರ ಕೋಲಾಟ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಸಂಭ್ರಮದಿಂದ ಸಾಗಿತು.
ಮೆರವಣಿಗೆಯ ಸ್ವಾಗತಕ್ಕಾಗಿ ಪ್ರತಿ ಓಣಿಗಳಲ್ಲಿ ಮಾವು, ಬಾಳೆ ಹಾಗೂ ತೆಂಗಿನ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ವಿದ್ಯುತ್ ದೀಪಗಳಿಂದ ಸಿಂಗಾರ ಮಾಡಲಾಗಿತ್ತು. ಮನೆ, ಮನೆಗಳ ಅಂಗಳದಲ್ಲಿ ಬಣ್ಣದ ರಂಗೋಲಿಗಳನ್ನು ಹಾಕಲಾಗಿತ್ತು. ಪುರಸಭೆ ಪೌರಕಾರ್ಮಿಕರು ಮೆರವಣಿಗೆ ಬೀದಿಗಳನ್ನು ಸ್ವಚ್ಛಗೊಳಿಸಿದ್ದರು. ಮಹಿಳೆಯರು, ಮಕ್ಕಳು ಸೇರಿದಂತೆ ವಿವಿಧ ಗಣ್ಯರು ಹೂಹಾರ ಹಾಕಿ, ಹಣ್ಣು ಕಾಯಿಗಳಿಂದ ಪೂಜಿಸಿದರು. ದೇವಿ ಮೂರ್ತಿಗೆ ಮಹಿಳೆಯರು ಆರತಿ ಮಾಡಿ ಶ್ರದ್ಧಾಭಕ್ತಿ ಮೆರೆದರು.
ಬೆಳಿಗ್ಗೆ ದೇವಸ್ಥಾನದಲ್ಲಿ ದುರ್ಗಾ ದೇವಿಗೆ ಮಹಾಭಿಷೇಕ, ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಪಲ್ಲಕ್ಕಿ ಮಹೋತ್ಸವ ಹರವಿ ವಂಶಸ್ಥರ ಮನೆಗೆ ತೆರಳಿ ನಂತರ ದೇವಸ್ಥಾನಕ್ಕೆ ತಲುಪಿತು. ಹೊಂಡದ ದುರ್ಗಾ ದೇವಸ್ಥಾನದ ಸೇವಾ ಸಮಿತಿ ಸದಸ್ಯರು, ಸುತ್ತಲಿನ ಗ್ರಾಮಗಳ ಭಕ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.