ಬ್ಯಾಡಗಿ : ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರೈತರು ಆರ್ಥಿಕವಾಗಿ ಸಭಲರಾಗಲು ಕೃಷಿಯೊಂದಿಗೆ ಕೃಷಿಯೇತರ ಚಟುವಟಿಕೆಗಳಲ್ಲಿ ಸಕ್ರೀಯರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಹೈನುಗಾರಿಗೆ ಉತ್ತಮ ಆದಾಯವನ್ನು ತಂಡು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ರಾಜ್ಯ ಅರಣ್ಯ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲ್ಲೂಕಿನ ತರೇದಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಹಾಲು ಉತ್ಪಾದಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಿಶ್ರ ತಳಿ ಜಾನುವಾರುಗಳ ಪ್ರದರ್ಶನ, ಮಿಶ್ರತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆಗೆ ಗೋಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೃಷಿ ವೆಚ್ಚವನ್ನು ಸರಿದೂಗಿಸಲು ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ, ಎರೆಹುಳು ಗೊಬ್ಬರ ಉತ್ಪಾದನೆ ಸೇರಿದಂತೆ ಇನ್ನಿತರ ಕೃಷಿಯೇತರ ಚಟುವಟಿಕೆಗಳು ಅನಿವಾರ್ಯವಾಗಿವೆ’ ಎಂದರು.
ಜಾನುವಾರು ಪ್ರದರ್ಶನದಲ್ಲಿ 200ಕ್ಕೆ ಹೆಚ್ಚು ಹಸು ಹಾಗೂ ಎಮ್ಮೆಗಳು ಪಾಲ್ಗೊಂಡಿದ್ದವು. ಹಾಲು ಕರೆಯುವ ಸ್ಪರ್ಧೆಯನ್ನು ಜರ್ಸಿ, ಎಚ್‌ಎಫ್ ಮತ್ತು ಎಮ್ಮೆ ಹೀಗೆ ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು.
ಜರ್ಸಿ ವಿಭಾಗದಲ್ಲಿ ಶಶಿಗೌಡ ಪಾಟೀಲ ಅವರ ಹಸು (11.9ಲೀ) ಪ್ರಥಮ, ಜಯಪ್ಪ ಪೂಜಾರ ಅವರ ಹಸು (10.9 ಲೀ) ದ್ವಿತೀಯ ಹಾಗೂ ಗಣೇಶ ಸಾಲಿ ಅವರ ಹಸು (10.3 ಲೀ) ತೃತೀಯ ಸ್ಥಾನ ಪಡೆದವು. ಎಫ್ಎಚ್ ವಿಭಾಗದಲ್ಲಿ ನಾಗಪ್ಪ ಕದರಮಂಡಲಗಿ ಅವರ ಹಸು (5.75 ಲೀ) ಪ್ರಥಮ, ಶಶಿಕುಮಾರ ಬಣಕಾರ (5.25 ಲೀ) ಹಾಗೂ ಈರಣಗೌಡ ಪಾಟೀಲ (4.4ಲೀ) ತೃತಿಯ ಸ್ಥಾನ ಪಡೆದುಕೊಂಡವು.
ಎಮ್ಮೆ ವಿಭಾಗದಲ್ಲಿ ಸುಭಾಸ ಸಾಲಿ ಅವರ ಎಮ್ಮೆ (3.75 ಲೀ) ಪ್ರಥಮ, ವಿರೂಪಾಕ್ಷಪ್ಪ ಗುಂಡಪ್ಪನವರ ಅವರ ಎಮ್ಮೆ (3 ಲೀ) ದ್ವಿತೀಯ ಹಾಗೂ ಜಯಪ್ಪ ಪೂಜಾರ ಅವರ ಎಮ್ಮೆ (2ಲೀ) ತೃತೀಯ ಸ್ಥಾನವನ್ನು ಪಡದುಕೊಂಡವು.
ಪಶುಪಾಲನಾ ಉಪನಿರ್ದೇಶಕ ಎಸ್.ವಿ.ಸಂಶಿ ಪ್ರಾಸ್ತಾವಿಕವಾಗಿ ಮಾತನಾಡಿ ಹಸಿರು ಮೇವಿನ ಆಹಾರ, ಅದರೊಂದಿಗೆ ಖನಿಜ ಮಿಶ್ರಿತ ಸಮತೋಲನ ಆಹಾರವನ್ನು ನೀಡಬೇಕೆಂದು ಸಲಹೆ ನೀಡಿದರು.
ಮಲ್ಲೂರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೂಪಾ ಕಾಟೇನಹಳ್ಳಿ, ಸದಸ್ಯ ಎಂ.ಜಿ.ಪಾಟೀಲ, ಮುಖಂಡರಾದ ದಾನಪ್ಪ ಚೂರಿ, ಚನ್ನಬಸಪ್ಪ ಹುಲ್ಲತಿ, ಶಂಭು ಪಾಟೀಲ, ಲಿಂಗರಾಜು ಕುಮ್ಮೂರ, ಕುಮಾರ ಪೂಜಾರ, ಎನ್.ಜಿ.ಪಾಟೀಲ, ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಎಸ್.ಎನ್.ಚವಡಾಳ, ಡಾ.ನೀಲಕಂಠ ಅಂಗಡಿ, ಡಾ.ನಾಗರಾಜ ಬಣಕಾರ, ರಾಘವೇಂದ್ರ ಎಲಿವಾಳ, ನವೀನಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.