ರಾಣೆಬೆನ್ನೂರು: ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಬೇಕು. ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಬೇಕು. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಬೇಕು. ಕಚೇರಿ ಒಳಗಡೆ ಗುಟ್ಕಾ, ತಂಬಾಕು. ಬಿಡಿ. ಸಿಗರೇಟ್, ಎಲೆ ಅಡಿಕೆ ಜಗಿಯುವದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಸ್ವಾಭಿಮಾನಿ ಕರವೇ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಂತರ ಉಪತಹಶೀಲ್ದಾರ ಎಸ್.ವಿ.ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿದರು.
ಕರವೇ ಮುಖಂಡ ಶಿವಕುಮಾರ ಜಾಧವ ಮಾತನಾಡಿ, ನಗರವು ಜಿಲ್ಲೆಯಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ತಹಶೀಲ್ದಾರ ಕಚೇರಿ ಮಾತ್ರ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಪ್ರತಿದಿನ ಸಾವಿರಾರು ಜನರು ಇಲ್ಲಿನ ಕಚೇರಿಗೆ ತಮ್ಮ ಕೆಲಸಕ್ಕೆ ಬರುತ್ತಾರೆ. ಗ್ರಾಮೀಣ ಪ್ರದೇಶದಿಂದ ಬಂದವರಿಗೆ ಕುಡಿಯಲು ನೀರಿಲ್ಲ. ಶೌಚಾಲಯ ಗಬ್ಬು ನಾರುತ್ತಿವೆ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿಲ್ಲ. ಕಚೇರಿ ಆವರಣ ಎಲ್ಲಕಡೆ ಸ್ವಚ್ಚತೆ ಮರೀಚಿಕೆಯಾಗಿದೆ ಎಂದು ದೂರಿದರು.
ನಗರಸಭೆ ಮತ್ತು ತಹಶೀಲ್ದಾರ ಕಚೇರಿ ವಿವಿಧ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಿನಿ ವಿಧಾನಸೌಧದ ಸುತ್ತಲೂ ಕಸ ಬೆಳೆದು ನಿಂತಿದೆ. ದುರ್ವಾಸನೆ ಬೀರುತ್ತಿರುವ ಶೌಚಾಲಯ, ಅಧಿಕಾರಿಗಳ ಕೊಠಡಿಯ ಹೊರ ಭಾಗದಲ್ಲಿ ಆಳೆತ್ತರ ಗಿಡ ಗಂಟೆಗಳು ಬೆಳೆದು ನಿಂತಿವೆ. ಕುಡಿಯುವ ನೀರಿನ ನಲ್ಲಿಯ ಸಂಪರ್ಕವೇ ಇಲ್ಲದ ಶೌಚಾಲಯ. ಸೊಳ್ಳೆಗಳ ಕಾಟ ಹೇಳ ತೀರದು. ವಯೋವೃದ್ದರು ಚಟಪಡಿಸುವಂತಾಗಿದೆ ಎಂದರು.
ಒಂದು ತಿಂಗಳೊಳಗೆ ಸರಿಪಡಿಸದಿದ್ದರೆ ಮಿನಿವಿಧಾನ ಸೌಧದ ಎದುರುಗಡೆ ಸ್ವಾಭಿಮಾನಿ ಕರವೇ ವೇದಿಕೆಯಿಂದ ಬೃಹತ್ ಹೋರಾಟ ಮಾಡಲಾಗವುದು ಎಂದು ಎಚ್ಚರಿಸಿದರು.
ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಸಿದ್ಧಾರೂಢ ಗುರುಂ, ಕೊಟ್ರೇಶಪ್ಪ ಎಮ್ಮಿ, ಗೋಪಿ ಕುಂದಾಪುರ, ಹನುಮಂತಪ್ಪ ಕಬ್ಬಾರ, ಭೀಮಣ್ಣ ಅರಳಿಕಟ್ಟಿ, ಎಲ್ಲಪ್ಪ ಚಿಕ್ಕಣ್ಣನವರ, ಚಂದ್ರಯ್ಯ ಹಿರೇಮಠ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.