ADVERTISEMENT

ಹಾವೇರಿ:4 ತಿಂಗಳ ಬಾಕಿ ವೇತನಕ್ಕೆ ಆಗ್ರಹಿಸಿ ಎಐಟಿಯುಸಿ ನೇತ್ವತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 15:52 IST
Last Updated 12 ಆಗಸ್ಟ್ 2020, 15:52 IST
ನಾಲ್ಕು ತಿಂಗಳ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಎಐಟಿಯುಸಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಾವೇರಿ ಜಿಲ್ಲಾಡಳಿತ ಭವನದ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು  –ಪ್ರಜಾವಾಣಿ ಚಿತ್ರ 
ನಾಲ್ಕು ತಿಂಗಳ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಎಐಟಿಯುಸಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಾವೇರಿ ಜಿಲ್ಲಾಡಳಿತ ಭವನದ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು  –ಪ್ರಜಾವಾಣಿ ಚಿತ್ರ    

ಹಾವೇರಿ: ಜಿಲ್ಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರಿಗೆ 4 ತಿಂಗಳ (ಏಪ್ರಿಲ್‌ನಿಂದ ಜುಲೈ) ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ (ಎಐಟಿಯುಸಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಆಶಾ ಕಾರ್ಯಕರ್ತೆಯರಿಗೆ, ಟ್ಯಾಕ್ಸಿ ಚಾಲಕರಿಗೆ, ಕಟ್ಟಡ ಕಾರ್ಮಿಕರಿಗೆ ಕೋವಿಡ್‌ ಸಂದರ್ಭದಲ್ಲಿ ನೀಡಿದ ಪ್ರೋತ್ಸಾಹಧನದ ಮಾದರಿಯಲ್ಲೇ ಬಿಸಿಯೂಟ ಸಿಬ್ಬಂದಿಗೂ ₹5 ಸಾವಿರ ಮೊತ್ತ ನೀಡಬೇಕು. ಶಾಲೆಗಳು ಆರಂಭವಾಗುವವರೆಗೂ ಪ್ರತಿ ತಿಂಗಳು ಮಾಸಿಕ ಸಂಭಾವನೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಮಿತಿ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ‘ಜಿಲ್ಲೆಯಲ್ಲಿ 3909 ಮಹಿಳೆಯರು ಅಕ್ಷರದಾಸೋಹ ಬಿಸಿಯೂಟ ಯೋಜನೆಯಲ್ಲಿ 16 ವರ್ಷಗಳಿಂದ ಸಾಮಾಜಿಕ ಭದ್ರತೆ, ಪಿಂಚಣಿ ಮತ್ತಿತರ ಸೌಲಭ್ಯವಿಲ್ಲದೆ ಅಲ್ಪಸಂಭಾವನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಕೆಲಸವಿಲ್ಲದೆ ಬಿಸಿಯೂಟ ಸಿಬ್ಬಂದಿ ಜೀವನ ನಡೆಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಹಲವಾರು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಎಐಟಿಯುಸಿ ಜಿಲ್ಲಾ ಸಮಿತಿ ಕಾರ್ಯದರ್ಶಿ ರೇಖಮ್ಮ ಧನ್ನೂರ, ಅಧ್ಯಕ್ಷ ಜಿ.ಡಿ.ಪೂಜಾರ, ಪದಾಧಿಕಾರಿಗಳಾದ ಸರೋಜಮ್ಮ ಹಿರೇಮಠ, ಲಲಿತಾ ಬುಶೆಟ್ಟಿ, ರಾಜೇಶ್ವರಿ ದೊಡ್ಡಮನಿ, ಲತಾ ಹಿರೇಮಠ, ರೇಣುಕಾ ಶಿವಾಜಿ, ನಿರ್ಮಲಾ ಬಂಕಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.