ADVERTISEMENT

ಹಾವೇರಿ: ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಂಕಾಪುರ ಪಿಎಸ್‌ಐ ಅಮಾನತು

ಪ್ರಜಾವಾಣಿ ವರದಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 11:08 IST
Last Updated 12 ಆಗಸ್ಟ್ 2021, 11:08 IST
ಬಂಕಾಪುರ ಪೊಲೀಸ್‌ ಠಾಣೆಯ ಪಿಎಸ್‌ಐ ಸಂತೋಷ ಪಾಟೀಲ ಅವರು ಸಾರ್ವಜನಿಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ದೃಶ್ಯ
ಬಂಕಾಪುರ ಪೊಲೀಸ್‌ ಠಾಣೆಯ ಪಿಎಸ್‌ಐ ಸಂತೋಷ ಪಾಟೀಲ ಅವರು ಸಾರ್ವಜನಿಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ದೃಶ್ಯ   

ಹಾವೇರಿ: ಬಂಕಾಪುರ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಡಿಜಿಪಿ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪಿಎಸ್‌ಐ ಸಂತೋಷ ಪಾಟೀಲ ಅವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಅಮಾನತುಗೊಳಿಸಿದ್ದಾರೆ.

ಪೊಲೀಸ್‌ ಠಾಣೆಯಲ್ಲಿ ಯುವಕರ ಗುಂಪು ಪಿಎಸ್‌ಐ ಅವರೊಂದಿಗೆ ಕೇಕ್‌ ಕತ್ತರಿಸಿ, ಸಿಹಿ ತಿನಿಸಿ, ಹಾರ ಹಾಕಿ ಶಾಲು ಹೊದಿಸಿ ಅಭಿನಂದಿಸುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಆ.12ರಂದು ‘ಸಿ.ಎಂ ತವರು ಜಿಲ್ಲೆಯಲ್ಲೇ ಡಿಜಿಪಿ ಆದೇಶ ಉಲ್ಲಂಘನೆಯ ಆರೋಪ; ಠಾಣೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ಪಿಎಸ್‌ಐ’ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿಯಿಂದ ಎಚ್ಚೆತ್ತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಇಲಾಖೆ ವಿಚಾರಣೆ ಕಾಯ್ದಿರಿಸಿ ಪಿಎಸ್ಐ ಅವರನ್ನು ಅಮಾನತುಗೊಳಿಸಿದ್ದಾರೆ. ಈ ಮೂಲಕ ಇಲಾಖೆಯ ಸಿಬ್ಬಂದಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ADVERTISEMENT

ಮೊದಲ ಪ್ರಕರಣ: ಆ.2ರಂದು ಡಿಜಿಪಿ ಪ್ರವೀಣ್‌ ಸೂದ್‌ ಅವರು, ಪೊಲೀಸ್‌ ಇಲಾಖೆಯ ಅಧಿಕಾರಿಗಳು ಸ್ವಾಗತ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಶಿಸ್ತು ಹಾಗೂ ಶಿಷ್ಟಾಚಾರವನ್ನು ಕಾಯ್ದುಕೊಳ್ಳುವ ಬಗ್ಗೆ ಸುತ್ತೋಲೆ ಹೊರಡಿಸಿದ್ದರು. ‘ಪೊಲೀಸ್‌ ಠಾಣೆಗಳು ಸಾರ್ವಜನಿಕ ಕಚೇರಿಗಳಾಗಿದ್ದು, ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಮುಂತಾದ ಖಾಸಗಿ ಆಚರಣೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಇಂತಹ ಆಚರಣೆಗಳು ಪೊಲೀಸ್‌ ಇಲಾಖೆಗೆ ಶೋಭೆ ತರುವುದಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದರು.

ಸುತ್ತೋಲೆ ಹೊರಡಿಸಿದ 10 ದಿನಗಳಲ್ಲಿ ಡಿಜಿಪಿ ಆದೇಶ ಉಲ್ಲಂಘಿಸಿ, ಶಿಸ್ತುಕ್ರಮಕ್ಕೆ ಗುರಿಯಾದ ರಾಜ್ಯದ ಮೊದಲ ಪ್ರಕರಣ ಎಂದು ‘ಬಂಕಾಪುರ ಪ್ರಕರಣ’ವನ್ನು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.