
ಸವಣೂರು : ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡಾಗ ಮಾತ್ರ ಗ್ರಾಮೀಣ ಭಾಗದ ಬಡ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಸಾಧ್ಯವಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊಸನೀರಲಗಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
’ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ನಾವು ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ರಕ್ಷಿಸುವುದು ಅಗತ್ಯವಾಗಿದೆ. ಶಾಲೆಯಲ್ಲಿ ಕೇವಲ 40 ಮಕ್ಕಳಿದ್ದಲ್ಲಿ, ಶಾಲೆ ಮುಚ್ಚಲಾಗುತ್ತದೆ ಅಥವಾ ಬೇರಡೆ ಮಕ್ಕಳನ್ನು ವರ್ಗಾಯಿಸಲಾಗುತ್ತದೆ ಎಂಬುದು ತಪ್ಪು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿದೆ.
ಗ್ರಾಮದ ದಾನಿಗಳೂ ಸಹ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಾಕಷ್ಟು ದೂರ ದೃಷ್ಟಿ ಇಟ್ಟುಕೊಂಡು ಶಾಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.
75ನೇ ವರ್ಷದ ಲಾಂಚನವನ್ನು ಅನಾವರಣಗೊಳಿಸಿ ಶಾಸಕ ಯಾಸೀರ ಅಹ್ಮದಖಾನ ಪಠಾಣ ಮಾತನಾಡಿ, ಈ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಲು ಲೋಕೋಪಯೋಗಿ ಸಚಿವರು, ನನಗೆ ಬೆನ್ನೆಲುಬಾಗಿ ನಿಂತು ನನ್ನ ಕ್ಷೇತ್ರವನ್ನು ದತ್ತು ಪಡೆದುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿಯೇ ಹೊಸನೀರಲಗಿ ಗ್ರಾಮ ಅನ್ಯ ಗ್ರಾಮಗಳಿಗೆ ಮಾದರಿಯಾಗಿದ್ದು, ಈ ಗ್ರಾಮದ ಜನರು ಗ್ರಾಮದ ಅಭಿವೃದ್ಧಿ ಹಿತದೃಷ್ಟಿಯಿಂದ ಎಲ್ಲರೂ ಪಕ್ಷಬೇಧ ಮರೆತು ಎಲ್ಲರೂ ಒಕ್ಕಟ್ಟಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ. ಗ್ರಾಮದ ದಾನಿಗಳ ಸಹಕಾರವೊಂದಿದ್ದರೆ, ಗ್ರಾಮಕ್ಕೆ ಕೆಪಿಎಸ್ ಶಾಲೆ ತರುವುದರ ಮೂಲಕ ಈ ಗ್ರಾಮವನ್ನು ಶಿಕ್ಷಣ ಕ್ಷೇತ್ರದಲ್ಲಿಯೇ ಮಾದರಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಂಸದ ಬಸವರಾಜ ಬೊಮ್ಮಾಯಿ ಅವರು ಅಮೃತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಂಪೀರ ಖಾದ್ರಿ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಬಿಜೆಪಿ ರೈತಮೋರ್ಚಾ ಜಿಲ್ಲಾ ಘಟಕ ಅಧ್ಯಕ್ಷ ಗಂಗಾಧರ ಬಾಣದ ಮಾತನಾಡಿದರು.
ಕಾಗಿನೆಲೆ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹಾಗೂ ರಾಣೆಬೆನ್ನೂರ ಶನೇಶ್ವರಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಶಿಕ್ಷಕ ಎಸ್.ಟಿ ಮಹಾಪುರುಷ ಅವರು ಅಮೃತ ಮಹೋತ್ಸವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಎಸ್‌ಆರ್‌ಟಿಸಿ ರಾಜ್ಯ ಉಪಾಧ್ಯಕ್ಷ ಸುನೀಲ ಹನುಮಣ್ಣನವರ, ಜಿ.ಪಂ ಮಾಜಿ ಸದಸ್ಯ ಶಿವರಾಜ ಅಮರಾಪೂರ, ಪಂಚ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಾಗಪ್ಪ ತಿಪ್ಪಕ್ಕನವರ, ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಎಂ.ಜೆ ಮುಲ್ಲಾ, ತಹಶೀಲ್ದಾರ ರವಿಕುಮಾರ ಕೊರವರ, ಆರಕ್ಷಕ ನಿರೀಕ್ಷಕ ತಿಮ್ಮಯ್ಯ ಚಾಮನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್ ಬಾರ್ಕಿ, ಕೆಡಿಪಿ ಸದಸ್ಯ ರವಿ ಕರಿಗಾರ, ಪ್ರಮುಖರಾದ ನಿಂಗಪ್ಪ ಹಳವಳ್ಳಿ, ಕಾಂತೇಶ ವಾಲ್ಮೀಕಿ, ನಾಗರಾಜ ವಾಲ್ಮೀಕಿ, ಮಹಾಂತೇಶ ಸಾಲಿ ಸೇರಿದಂತೆ ಗ್ರಾಮದ ಹಿರಿಯರು, ಭೂದಾನಿಗಳು, ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಶಾಲೆಯ ಶಿಕ್ಷಕರು, ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.