ADVERTISEMENT

ಹಾವೇರಿ: ಕಾಯಕಲ್ಪಕ್ಕೆ ಕಾಯ್ದಿದೆ ರಾಚನಕಟ್ಟಿ ಕೆರೆ

ತ್ಯಾಜ್ಯವಸ್ತು, ಗಿಡಗಂಟಿಯಿಂದ ಮಲಿನಗೊಂಡ ಕೆರೆ ನೀರು

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 5:50 IST
Last Updated 15 ಜೂನ್ 2025, 5:50 IST
ಶಿಗ್ಗಾವಿ ಪಟ್ಟಣದಲ್ಲಿನ ರಾಚನಕಟ್ಟಿ ಕೆರೆ ಸುತ್ತಲು ಗಿಡಗಂಟಿ ಬೆಳೆದಿರುವುದು.
ಶಿಗ್ಗಾವಿ ಪಟ್ಟಣದಲ್ಲಿನ ರಾಚನಕಟ್ಟಿ ಕೆರೆ ಸುತ್ತಲು ಗಿಡಗಂಟಿ ಬೆಳೆದಿರುವುದು.   

ಶಿಗ್ಗಾವಿ: ಪಟ್ಟಣದ ರಾಚನಕಟ್ಟಿ ಕೆರೆ ತ್ಯಾಜ್ಯ ವಸ್ತು ಮತ್ತು ಸುತ್ತಲು ಗಿಡಗಂಟಿಗಳು ಬೆಳೆದು ಕೆರೆ ನೀರು ಮಲಿನವಾಗಿ ಗಬ್ಬು ವಾಸನೆ ಹರಡುತ್ತಿದೆ. ಹೀಗಾಗಿ ಸ್ಥಳೀಯ ಆಡಳಿತ ಈ ಕರೆ ಅಭಿವೃದ್ಧಿ ಕಾಯಕಲ್ಪ ನೀಡುವುದು ಮುಖ್ಯವಾಗಿದೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.

ಪ್ರಾಚೀನ ಕಾಲದ ರಾಚನಕಟ್ಟೆ ಪಟ್ಟಣದ ಜನರ ಜೀವನಾಡಿಯಾಗಿದ್ದು, ಆದರೆ ಕೆರೆ ಸಂಪೂರ್ಣ ಮಲಿನವಾಗುವ ಕಾರಣ ಜನಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲದಾಗಿದೆ. ಕೆರೆ ಸುತ್ತಲಿನ ನಿವಾಸಿಗಳು, ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡುವ ಶೌಚಾಲಯಗಳಿಲ್ಲದ ಕಾರಣ ಈ ಕೆರೆ ಶೌಚಾಲಯವಾಗಿ ಮಾರ್ಪಟ್ಟಿದೆ. ಅಲ್ಲದೆ ಹಂದಿನಾಯಿಗಳ ವಾಸ ಸ್ಥಾನವಾಗಿದೆ. ಅದರಿಂದಾಗಿ ಕೆರೆ ನೀರು ಕಲುಷಿತವಾಗಿ ದುರ್ನಾಸನೆ ಹರಡುತ್ತಿದೆ. ಹೀಗಾಗಿ ಕೆರೆ ಹತ್ತಿರದ ರಸ್ತೆಯಲ್ಲಿ ಜನ ಓಡಾಡದಂತಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಕೆರೆ ದಂಡೆ ಸುತ್ತಲು ಗಿಡಗಂಟಿಗಳು ಬೆಳೆದು ಕಾಡಿನಂತೆ ಕಾಣುತ್ತಿದೆ. ಕೆರೆ ನೀರಿನ ಮೇಲೆ ಹಸಿರು ಪಾಚಿಗಟ್ಟಿದೆ. ಅದರಿಂದಾಗಿ ನೀರು ಸಂಪೂರ್ಣ ಹಸಿರಾಗಿದೆ. ಪಟ್ಟಣದ ಮದ್ಯಭಾಗದಲ್ಲಿನ ಈ ಕೆರೆಗೆ ಪುರಸಭೆ ಅಭಿವೃದ್ಧಿ ಮಾಡುವ ಮೂಲಕ ಕಾಯಕಲ್ಪ ನೀಡುವ ಕಾರ್ಯ ಕೈಗೊಳ್ಳಬೇಕು. ಕೆರೆಯನ್ನು ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಬೇಕು ಎಂದು ರೈತ ಮುಖಂಡ ಮಂಜುನಾಥ ಹಾವೇರಿ ದೂರುತ್ತಾರೆ.

ADVERTISEMENT

ಕೆರೆ ಸುತ್ತಲಿನ ತ್ಯಾಜ್ಯ ವಸ್ತುವನ್ನು ಪುರಸಭೆ ಪೌರಕಾರ್ಮಿಕರು ನಿತ್ಯ ವಿಲೇವಾರಿ ಮಾಡಲಾಗುತ್ತಿದೆ. ಜಾಗೃತಿ ಕಾರ್ಯ ಮಾಡಲಾಗಿದೆ. ಅಲ್ಲದೆ ಅಭಿವೃದ್ಧಿ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ
ಮಲ್ಲೇಶಪ್ಪ ಆರ್, ಪುರಸಭೆ ಮುಖ್ಯಾಧಿಕಾರಿ ಶಿಗ್ಗಾವಿ

ಕಾಡನಕಟ್ಟಿ ಕೆರೆಯಿಂದ ರಾಚನಕಟ್ಟಿ ಕೆರೆವರೆಗೆ ರಾಜ ಕಾಲುವೆ ನಿರ್ಮಾಣವಾಗಬೇಕಿದೆ. ಅದರಿಂದ ಕೆರೆಗೆ ಇನ್ನಷ್ಟು ನೀರ ಬರಲು ಸಾಧ್ಯವಿದೆ. ಅನುದಾನ ಕೊರತೆಯಿಂದ ಆಗುತ್ತಿಲ್ಲ.
– ಸಿದ್ಡಾರ್ಥಗೌಡ ಪಾಟೀಲ, ಪುರಸಭೆ ಅಧ್ಯಕ್ಷ

ತ್ಯಾಜ್ಯ ಎಸೆಯದಂತೆ ಜಾಗೃತಿ ಕೆರೆ

ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕಾಗಿದೆ. ಆದರೆ ಸದ್ಯ ಪುರಸಭೆಯಲ್ಲಿ ಯಾವುದೇ ಅನುದಾನವಿಲ್ಲ. ಆದರೂ ಸಹ ಸುತ್ತಲಿನ ಜನರು ತ್ಯಾಜ್ಯ ವಸ್ತು ಹಾಕದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಸಹ ಸಹಕಾರ ನೀಡಬೇಕು. ಅಂದರಿಂದ ರಾಚನಕಟ್ಟಿ ಕೆರೆ ಅಂದಚಂದವನ್ನು ಹೆಚ್ಚಿಸಲು ಸಾಧ್ಯವಿದೆ ಎನ್ನುತ್ತಾರೆ ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ

ಅಕ್ರಮ ಚಟುವಟಿಕೆ ತಾಣ

ಕೆರೆ ದಂಡೆಯಲ್ಲಿರುವ ವ್ಯಾಪಾರಸ್ಥರು ತಮ್ಮ ಅಂಗಡಿಯಲ್ಲಿನ ತ್ಯಾಜ್ಯ ವಸ್ತುಗಳನ್ನು ಬಿಸಾಡುತ್ತಿದ್ದಾರೆ. ಕುಡಕರು ಕೆರೆ ದಂಡೆಯಲ್ಲಿ ಕುಳಿತು ಔತನಕೂಟ ನಡೆಸುತ್ತಿದ್ದಾರೆ. ಕುಡಿದ ಖಾಲಿ ಬಾಟಲ್ ಪ್ಲಾಸ್ಟಿಕ್ ಚೀಲಗಳನ್ನು ಚೆಲ್ಲುತ್ತಿದ್ದಾರೆ. ಅಲ್ಲದೆ ಅನೈತಿಕ ಚಟುವಟಿಕೆ ತಾಣವಾಗಿದೆ. ಜನರ ಜೀವನಾಡಿಯಾದ ಈ ಕೆರೆ ಇಂದು ಡೆಂಗಿ ಮಲೇರಿಯಾ ಚಿಕುನ್‌ ಗುನ್ಯಾ ಸೇರಿದಂತೆ ಹಲವು ಸಾಂಕ್ರಾಮಿಕ ರೋಗರುಜಿನಗಳನ್ನು ಹರಡುವ ತಾಣವಾಗಿದೆ. ಅದರಿಂದಾಗಿ ಜನ ಭಯಭೀತರಾಗಿ ಓಡಾಡುತ್ತಿದ್ದಾರೆ. ಈ ಕರಿತು ಯಾವುದೇ ಅಧಿಕಾರಿಗಳು ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.