ADVERTISEMENT

ಹಂಸಭಾವಿ | ಮಳೆ ಕೊರತೆ: ಬಾರದ ವಲಸೆ ಹಕ್ಕಿ

ರಾಜೇಂದ್ರ ನಾಯಕ
Published 12 ಅಕ್ಟೋಬರ್ 2023, 4:51 IST
Last Updated 12 ಅಕ್ಟೋಬರ್ 2023, 4:51 IST
ಹಂಸಭಾವಿ ಸಮೀಪದ ದೂಪದಹಳ್ಳಿಯ ಕಡಲಕಟ್ಟಿ ಕೆರೆ ನೀರಿಲ್ಲದೇ ಬಣಗುಡುತ್ತಿದ್ದು, ವಲಸೆ ಪಕ್ಷಿಗಳು ಕಣ್ಮರೆಯಾಗಿವೆ
ಹಂಸಭಾವಿ ಸಮೀಪದ ದೂಪದಹಳ್ಳಿಯ ಕಡಲಕಟ್ಟಿ ಕೆರೆ ನೀರಿಲ್ಲದೇ ಬಣಗುಡುತ್ತಿದ್ದು, ವಲಸೆ ಪಕ್ಷಿಗಳು ಕಣ್ಮರೆಯಾಗಿವೆ   

ಹಂಸಭಾವಿ: ಪ್ರತಿ ಸಲ ಮುಂಗಾರು ಆರಂಭವಾಗುತ್ತಿದ್ದಂತೆಯೇ ಅಲ್ಲಿ ಸಾವಿರಾರು ವಲಸೆ ಹಕ್ಕಿಗಳ ಚಿಲಿಪಿಲಿ ಸದ್ದು ಹೇಳುತ್ತಿತ್ತು. ಆದರೆ ಇದೀಗ ಅಲ್ಲಿ ಹುಡುಕಿದರೂ ಒಂದೂ ಪಕ್ಷಿಯೂ ಕಾಣ ಸಿಗುವುದಿಲ್ಲ.!

ಇದು ಹಿರೇಕೆರೂರು ತಾಲ್ಲೂಕಿನ ದೂಪದಹಳ್ಳಿ -ನೂಲಗೇರಿ ಗ್ರಾಮಗಳ ನಡುವೆ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿರುವ ಕರಲಕಟ್ಟೆ ಕೆರೆಯ ದುಸ್ಥಿತಿ.

ಜಿಲ್ಲೆಯಲ್ಲಿ ಹಾವೇರಿ ಸಮೀಪದ ಹೆಗ್ಗೇರಿ, ಗುತ್ತಲ ಸಮೀಪದ ದೊಡ್ಡಕೆರೆ ಹಾಗೂ ಅಕ್ಕಿಆಲೂರಿನ ಈಶ್ವರ ಕೆರೆಯಂತೆಯೇ ಈ ಕೆರೆಗೂ ವಿದೇಶಿ ಹಕ್ಕಿಗಳು ನೂರಾರು ಕಿ.ಮೀ ದೂರದಿಂದ ವಲಸೆ ಬಂದು ತಮ್ಮ ಸಂತಾನ ವೃದ್ದಿಸಿಕೊಳ್ಳುತ್ತಿದ್ದವು. ಆದರೆ, ಈ ವರ್ಷ ಮಳೆಯ ಕೊರತೆಯಿಂದ ಕೆರೆಗೆ ಹನಿ ನೀರೂ ಬಂದಿಲ್ಲ. ಹೀಗಾಗಿ ಇಲ್ಲಿ ವಲಸೆ ಹಕ್ಕಿಗಳ ಚಿಲಿಪಿಲಿ ಸದ್ದು ಮಾಯವಾಗಿದೆ.

ADVERTISEMENT
ಪಕ್ಷಿಧಾಮದ ಅಭಿವೃದ್ದಿಗೆ ಯಾವ ಜನಪ್ರತಿನಿಧಿಗೂ ಆಸಕ್ತಿ ಇಲ್ಲ. ಹಕ್ಕಿಗಳ ವಾಸದ ತಾಣವಾಗಿರುವ ಕೆರೆಕಟ್ಟೆ ಕೆರೆಯ ಹೂಳು ತೆಗೆಸಿ ಕೆರೆಗೆ ನೀರು ತುಂಬಿಸಿದರೆ ಕಣ್ಮರೆಯಾಗಿರುವ ಪಕ್ಷಿಗಳನ್ನು ಮತ್ತೆ ಕಾಣಬಹುದು
ಮಲ್ಲಿಕಾರ್ಜುನ ಬಣಕಾರ, ಸ್ಥಳೀಯರು

ಅಗಸನಕಟ್ಟೆ ಮೂಲ ತಾಣ

2009 ರಿಂದಲೂ ಈ ವಲಸೆ ಹಕ್ಕಿಗಳಿಗೆ ದೂಪದಹಳ್ಳಿಯ ಅಗಸನಕಟ್ಟೆ ಕೆರೆ ಮೂಲ ತಾಣವಾಗಿತ್ತು. ಆದರೆ ಅಲ್ಲಿ ಹಕ್ಕಿಗಳ ನೆಲೆಯಾಗಿದ್ದ ಜಾಲಿಯ ಮರಗಳು ಸುತ್ತಲಿನ ಒತ್ತುವರಿಯಿಂದ ಕೊಡಲಿ ಪೆಟ್ಟಿಗೆ ತುತ್ತಾದವು. ಹೀಗಾಗಿ ಈ ವಲಸೆ ಹಕ್ಕಿಗಳು ಅದೇ ಗ್ರಾಮದ ಪಕ್ಕದ ಕರಲಕಟ್ಟೆ ಕೆರೆಯನ್ನು ತಮ್ಮ ಸಂತಾನೋತ್ಪತ್ತಿಗೆ ಆಯ್ಕೆ ಮಾಡಿಕೊಂಡಿದ್ದವು. 

ಪ್ರತಿ ವರ್ಷ ಜೂನ್‌ ತಿಂಗಳ ಆರಂಭದಿಂದ ಫೆಬ್ರುವರಿ ಕೊನೆಯ ತನಕ ಕಾಣಸಿಗುತ್ತಿದ್ದ ಹಕ್ಕಿಗಳು, ಈ ವರ್ಷ ಮಳೆಯ ಕೊರತೆಯಿಂದ ಬಂದಿಲ್ಲ.

ಮಡ್ಲೂರ ಏತ ನೀರಾವರಿಯಿಂದ ಇಲ್ಲಿಗೆ ನೀರು ತರಲು ಮಾರ್ಗದ ಸಮಸ್ಯೆ ಎದುರಾಗಿದೆ. ಬೇರೆ ಯೋಜನೆಯಿಂದ ನೀರು ತಂದು ಈ ವಲಸೆ ಪಕ್ಷಿಧಾಮವನ್ನು ಅಭಿವೃದ್ದಿ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಯು.ಬಿ.ಬಣಕಾರ, ಶಾಸಕ

ದೇಶಿ, ವಿದೇಶಿ ಹಕ್ಕಿಗಳ ಕಲರವ

‘ಇಲ್ಲಿ ಬಿಳಿಕೊಕ್ಕರೆ, ಕಂದು ಕೊಕ್ಕರೆ, ಕೃಷ್ಣವಾಹನ ಪಕ್ಷಿ, ಗೀಜುಗ, ಚಿಟಗುಬ್ಬಿ, ಗುಣಮಣಕ, ಹೆಬ್ಬಾತು, ಚಮಚ ಚುಂಚಿನ ಬಾತುಕೋಳಿ, ಬಾತುಕೋಳಿ, ನೀರುಕೋಳಿ, ಭಾರತೀಯ ನೀರುಕಾಗೆ, ಕಾಮನ್‌ ಮೈನಾ, ಕುಂಡೆಕುಸುಕ, ಕಾಜಾಣ, ಬೆಳ್ಳಕ್ಕಿ, ಜೇನುಹಿಡುಕ, ನೀಲಕಂಠ, ಕಿಂಗ್‌ ಫಿಷರ್‌, ಟಿಟ್ಟಿಭ ಹಾಗೂ ಗರುಡ ಸೇರಿದಂತೆ ಅನೇಕ ಜಾತಿಯ ಹಕ್ಕಿಗಳು ಇಲ್ಲಿಗೆ ಬರುತ್ತಿದ್ದವು. ಕೆರೆಯ ಮಧ್ಯ ಭಾಗದಲ್ಲಿ ಜಾಲಿ ಮರಗಳಿರುವ ಕಾರಣಕ್ಕೆ ವಲಸೆ ಹಕ್ಕಿಗಳಿಗೆ ತಮ್ಮ ಸಂತಾನ ವೃದ್ದಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಡ್ವಾರ್ಫ್‌ ಕ್ಯಾಸನೋರಿ, ಕ್ರೈಸೆಡ್‌ಗಾರ್ನ್‌, ಕ್ಯಾಲಿಫೋರ್ನಿಯಾ ಬುರ್ಲಿ, ಆಸ್ಟ್ರಿಚ್‌ ಸಿಪಾಯಿ ಕೊಕ್ಕರೆ, ಬುಲ್ಬುಲ್‌ ಹಕ್ಕಿ, ಒಂಟಿಕಾಲಿನ ಕೊಕ್ಕರೆ, ಹಮ್ಮಿಂಗ್‌ ಬರ್ಡ್‌ ನಂತಹ ವಿದೇಶಿ ಹಕ್ಕಿಗಳೂ ಇಲ್ಲಿ ಸಂತಾನೋತ್ಪತ್ತಿಗಾಗಿ ಬರುತ್ತವೆ’ ಎನ್ನುತ್ತಾರೆ ದೂಪದಹಳ್ಳಿಯ ಶಿಕ್ಷಕ ಈರಣ್ಣ ಕಾಟೇನಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.