
ರಾಣೆಬೆನ್ನೂರು: ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರಸ್ತೆಗಳ ತಗ್ಗುಗುಂಡಿಗಳನ್ನು ಮುಚ್ಚಿಸಬೇಕೆಂದು ಆಗ್ರಹಿಸಿ ತಾಲ್ಲೂಕು ರೈತ ಸಂಘ, ಸದೃಢ ಕರ್ನಾಟಕ ನಿರ್ಮಾಣ ವೇದಿಕೆ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಶುಕ್ರವಾರ ನಗರಸಭೆಯ ಎದುರು ಪ್ರತಿಭಟನೆ ನಡೆಸಿದರು.
ನಂತರ ನಗರಸಭೆ ಅಧ್ಯಕ್ಷೆ ಚಂಪಕಾ ರಮೇಶ ಬಿಸಲಹಳ್ಳಿ ಹಾಗೂ ಪೌರಾಯುಕ್ತ ಎಫ್.ವೈ. ಇಂಗಳಗಿ ಅವರಿಗೆ ಮನವಿ ಸಲ್ಲಿಸಿದರು.
‘ಸತತ ಮಳೆಯಿಂದ ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ವ್ಯಾಪಾರ ವಹಿವಾಟಿಗೆ ನಗರಕ್ಕೆ ಬರುವವರು, ತಾಲ್ಲೂಕಿನಲ್ಲಿ ಇರುವ ಪುಣ್ಯ ಕ್ಷೇತ್ರಗಳಿಗೆ ವಿವಿಧ ತಾಲ್ಲೂಕು, ಜಿಲ್ಲೆ, ರಾಜ್ಯಗಳಿಂದ ಬರುವ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲಿ ನೋಡಿದರೂ ಹದಗೆಟ್ಟ ರಸ್ತೆಗಳೇ ಕಾಣುತ್ತಿವೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.
ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ‘ಮಳೆಗಾಲವಾದ್ದರಿಂದ ರಸ್ತೆ ಗುಂಡಿಗಳಲ್ಲಿ ನೀರು ನಿಂತು ಬೈಕ್ ಸವಾರರು ಬಿದ್ದು ಕೈಕಾಲು ಊನ ಮಾಡಿಕೊಂಡಿದ್ದಾರೆ. ಶಾಲಾ ಕಾಲೇಜು ವಾಹನಗಳು ಪದೇ ಪದೇ ಹಾಳಾಗುತ್ತಿವೆ. ಆಟೊದವರು ರಸ್ತೆ ದುರಸ್ತಿಗೆ ಒತ್ತಾಯಿಸಿ ಈಗಾಗಲೇ ನಗರಸಭೆಗೆ ಮನವಿ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಆಟೊ ಚಾಲಕರು ಮತ್ತು ಮಾಲೀಕರು ರೋಸಿ ಹೋಗಿದ್ದಾರೆ’ ಎಂದರು.
‘ನಗರದಲ್ಲಿ ವಾರ್ಡ್ ಸದಸ್ಯರು ಮತ್ತು ಅಧಿಕಾರಿಗಳು ಇದ್ದಾರೋ ಇಲ್ಲವೋ ಎನ್ನುವಂತಾಗಿದೆ. ಸಂಗಮ ವೃತ್ತ, ಕುರುಬಗೇರಿ ಕ್ರಾಸ್‌ನಿಂದ ಸೊಪ್ಪಿನಪೇಟೆ ಮಾರ್ಗವಾಗಿ ಹಾದುಹೋಗುವ ಬೆನಕನಕೊಂಡ ಬೈಪಾಸ್ ಹಾಗೂ ಹಲಗೇರಿ ಬೈಪಾಸ್‌ವರೆಗೆ ಹಾಳಾಗಿರುವ ಡಾಂಬರ್ ರಸ್ತೆಯನ್ನು ತೆಗೆದು ಕಾಂಕ್ರೀಟ್ ರಸ್ತೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಹಳೆಯ ತರಕಾರಿ ಮಾರುಕಟ್ಟೆ ಕೆಸರು ಗದ್ದೆಯಂತಾಗಿದೆ. ಇದರಿಂದ ಇಲ್ಲಿನ ಜನತೆ ನರಕಯಾತನೆ ಪಡುವಂತಾಗಿದೆ. ಹಿರಿಯ ನಾಗರಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ದೂರಿದರು.
ಕೂಡಲೇ ರಸ್ತೆಯಲ್ಲಿನ ತಗ್ಗುಗುಂಡಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ವಿವಿಧ ಸಂಘ–ಸಂಸ್ಥೆಗಳ ಆಶ್ರಯದಲ್ಲಿ ನಗರಸಭೆ ಎದುರು ಅಹೋ ರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಂಜುನಾಥ ಗುಡ್ಡಣ್ಣನವರ, ರಾಜೇಶ ಅಂಗಡಿ, ಮಂಜುನಾಥ ಸಂಬೋಜಿ, ಮಾಲತೇಶ ಮಡಿವಾಳರ, ಯಲ್ಲಪ್ಪ ಚಿಕ್ಕಣ್ಣನವರ, ಶೈಲಕ್ಕ ಹರನಗಿರಿ, ನಾಗರಾಜ ಕಟಿಗಿ, ಬಿ.ಎಚ್. ಕುರಿ, ನಿಂಗಪ್ಪ ಜಾಲಗಾರ, ಚಂದ್ರಶೇಖರ ಕಾಂಬಳೆ, ರಾಘು ಬಿ.ಟಿ, ಶಿವಾಜಿ ಬೋಸ್ಲೆ, ಗುತ್ತೆಪ್ಪ, ಕೆ.ಡಿ. ಅಡವೇರ, ಸಿದ್ದಪ್ಪ ದೇವರಗುಡ್ಡ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.