ADVERTISEMENT

ರಾಣೆಬೆನ್ನೂರು | ದೀಪಾವಳಿ ಹಬ್ಬಕ್ಕೆ ಗರಿಗೆದರಿದ ವ್ಯಾಪಾರ

ಹೂವು, ಹಣ್ಣು, ದೀಪ ಖರೀದಿ ಜೋರು: ಕಿಕ್ಕಿರಿದು ತುಂಬಿದ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 2:16 IST
Last Updated 21 ಅಕ್ಟೋಬರ್ 2025, 2:16 IST
ರಾಣೆಬೆನ್ನೂರಿನ ನೆಹರು ಮಾರುಕಟ್ಟೆ, ಎಂ.ಜಿ.ರಸ್ತೆ ಮತ್ತು ಬಿ.ಎಸ್‌. ರಸ್ತೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ವ್ಯಾಪಾರ ವಹಿವಾಟು ಜೋರಾಗಿತ್ತು
ರಾಣೆಬೆನ್ನೂರಿನ ನೆಹರು ಮಾರುಕಟ್ಟೆ, ಎಂ.ಜಿ.ರಸ್ತೆ ಮತ್ತು ಬಿ.ಎಸ್‌. ರಸ್ತೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ವ್ಯಾಪಾರ ವಹಿವಾಟು ಜೋರಾಗಿತ್ತು   

ರಾಣೆಬೆನ್ನೂರು: ಹಣತೆಗಳ ಹಬ್ಬ ದೀಪಾವಳಿಯು ದೀಪಗಳಿಗಷ್ಟೇ ಪ್ರಾಮುಖ್ಯ ಪಡೆದಿಲ್ಲ. ರೈತರ ಒಡನಾಡಿಗಳಾಗಿ ನಿತ್ಯದ ಬದುಕಿನೊಂದಿಗೆ ಜೊತೆ ಜೊತೆಯಾಗಿ ಹೆಜ್ಜೆ ಹಾಕುವ ದನಕರುಗಳನ್ನು ಪೂಜಿಸುವ ಹಬ್ಬವಾಗಿದೆ. ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಿಎಸ್‌ಟಿ ಕಡಿತ, ರಿಯಾಯ್ತಿಗಳು ಮತ್ತು ಸುಲಭ ಹಣಕಾಸು ಯೋಜನೆಗಳಿಂದಾಗಿ ವಾಹನ, ಆಭರಣ, ಜವಳಿ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ವ್ಯಾಪಾರ ಚೇತರಿಕೆ ಕಂಡಿದೆ. ಆನ್‌ಲೈನ್ ಮತ್ತು ಆಫ್ ಲೈನ್ ವ್ಯಾಪಾರೋದ್ಯಮದ ಉತ್ಸಾಹವನ್ನು ಹೆಚ್ಚಿಸಿವೆ.

ನಗರದಲ್ಲಿ ನರಕಚತುರ್ದಶಿ ಆಚರಣೆ ದಿನ ಸೋಮವಾರ ಬೆಳಿಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ದಿನಸಿ ಹಾಗೂ ಇತರೆ ವಸ್ತುಗಳನ್ನು ಖರೀದಿ ಮಾಡಲು ವ್ಯಾಪಾರ ವಹಿವಾಟು ಜೋರಾಗಿತ್ತು. ಭಾನುವಾರ ಭಾರಿ ಮಳೆಯಾಗಿದ್ದರಿಂದ ವ್ಯಾಪಾರ ವಹಿವಾಟು ಹೇಳಿಕೊಳ್ಳುವಷ್ಟು ಇರಲಿಲ್ಲ. ಅಮವಾಸ್ಯೆ ಕೂಡ ಸೋಮವಾರ ಸಂಜೆಯಿಂದಲೇ ಆರಂಭವಾಗಿದ್ದರಿಂದ ಹೊಸ ಬಟ್ಟೆ, ವಸ್ತ್ರ ಖರೀದಿ, ನಾನಾ ತರಹದ ಹಣ್ಣು ಹಂಪಲ, ತಳಿರು ತೋರಣ, ಎಲೆ, ಅಡಿಕೆ ಮತ್ತು ಅಲಂಕಾರ ವಸ್ತುಗಳು, ಆಕಾಶ ಬುಟ್ಟಿ, ಮಣ್ಣಿನ ದೀಪಗಳ ಖರೀದಿ ಹೆಚ್ಚಾಗಿತ್ತು.

ADVERTISEMENT

ಇಲ್ಲಿನ ಎಂ.ಜಿ.ರಸ್ತೆ, ನೆಹರು ಮಾರುಕಟ್ಟೆ, ದೇವರಗುಡ್ಡ ರಸ್ತೆ, ದುರ್ಗಾವೃತ್ತ ಹಾಗೂ ಮೇಡ್ಲೇರಿ ವೃತ್ತ, ಬಿ.ಎಸ್‌.ರಸ್ತೆಯಲ್ಲಿದೊಡ್ಡಪೇಟೆ, ಎಂ.ಜಿ.ರಸ್ತೆಯ ಬಟ್ಟೆಅಂಗಡಿ, ಕಿರಾಣಿ, ಸ್ಟೇಶನರಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಿತ್ತು. ಹಿರೆಕೆರೂರು, ದಾವಣಗೆರೆ, ಶಿವಮೊಗ್ಗ, ಬ್ಯಾಡಗಿ ಹರಿಹರ, ಹರಪನಹಳ್ಳಿ, ರಟ್ಟೀಹಳ್ಳಿ, ಮಾಸೂರ, ಹಡಗಲಿ, ಹರಿಹರ, ಶಿಕಾರಿಪುರ, ಶಿರಾಳಕೊಪ್ಪ, ಹಾವೇರಿ, ಗುತ್ತಲ, ಹಾವನೂರ, ಲಿಂಗದಹಳ್ಳಿ, ಆರೇಮಲ್ಲಾಪುರ, ಐರಣಿ, ಬೇಲೂರ, ಮುದೇನೂರ ಮುಂತಾದ ಗ್ರಾಮಗಳ ರೈತರು ಲೋಳೆಸರ, ಕವಚಿ ಕಡ್ಡಿ ಹುಲ್ಲು, ಜೋಳದ ದಂಟು, ಕಬ್ಬು, ಬಾಳೆ ಕಂದು ಮಾವಿನ ತೋರಣ ಮಾರಾಟಕ್ಕೆ ತಂದಿದ್ದರು.

ರಾಜಸ್ಥಾನ ಮತ್ತು ಗುಜರಾತ್‌ನ ವ್ಯಾಪಾರಸ್ಥರು ವಾಹನಗಳ ಅಲಂಕಾರಕ್ಕೆ ಬೇಕಾದ ಆಕರ್ಷಕದ ಬಣ್ಣದ ಗೊಂಡೆ ಮಾರಾಟಕ್ಕೆ ತಂದಿದ್ದರು. ವಿವಿಧ ವಿನ್ಯಾಸದ ₹ 20 ನಿಂದ ಹಿಡಿದು ₹ 400ವರೆಗಿನ ಮಣ್ಣಿನ ಹಣತೆಗಳನ್ನು ವ್ಯಾಪಾರಸ್ಥರು ಅಲ್ಲಲ್ಲಿ ಮಾರಾಟ ಮಾಡಿದರು. ಆಕರ್ಷಕ ದೀಪಗಳು ಮಹಿಳೆಯರ ಗಮನ ಸೆಳೆದವು. ಎಂ.ಜಿ.ರಸ್ತೆಯಲ್ಲಿ ಹೂವಿನ ಮಾರುಕಟ್ಟೆ ವಿವಿಧ ಬಗೆಯ ಪುಷ್ಪಗಳ ರಾಶಿಯಿಂದ ಭರ್ತಿಯಾಗಿತ್ತು.

ಮನೆ ಅಲಂಕಾರಕ್ಕೆ ಮತ್ತು ಹಿರಿಯರಿಗೆ ಯಡಿ ಹಾಕಲು, ಕುಂಬಳಕಾಯಿ ₹ 50 ರಿಂದ 100, ಶೇಬು ₹ 120, ಚಿಕ್ಕು ₹ 80, ಪೇರಲ ₹ 60, ₹ 80 ರಿಂದ 120, ದಾಳಿಂಬೆ ₹ 160, ದ್ರಾಕ್ಷಿ ₹ 80, ಕಿತ್ತಳೆ ₹ 60, ಸೀತಾಫಲ ₹ 70, ಬಾಳೆಹಣ್ಣು ಕೆಜಿ ₹ 50 , ಸಣ್ಣದು ತೆಂಗಿನ ಕಾಯಿ ₹ 20 , ದೊಡ್ಡದು ₹ 50, ಬಾಳೆ ಕಂದು ₹ 25 ಜೋಡಿ, ಕಬ್ಬು ₹ 30 ಜೋಡಿ, ತಾಳೆ ಗರಿ ₹ 20, ಕವಚಿಕಡ್ಡಿ ₹ 25 ಜೊತೆ, ಕಮಲದ ಹೂ ₹ 45, ಸೇವಂತಿಗೆ ಹೂ ಸೇವಂತಿಗೆ 100 ರಿಂದ 150 ಮಾರು, ಚಂಡು ಹೂ ₹ 40 ಮಾರು, ಚಂಡು ಹೂ ₹ 40 ಮಾರು, ಮಲ್ಲಿಗೆ ಮತ್ತು ಕನಕಾಂಬರ ₹ 200 ಆಸು ಪಾಸು ಇದ್ದವು.

ಸುಗಂಧಿ ಮತ್ತು ಚಂಡು ಹೂ, ಗುಲಾಬಿ ಹೂ ಮಾಲೆಗಳು ಸಣ್ಣವು ₹50 ರಿಂದ ₹100, ದೊಡ್ಡವು ₹ 200 ರಿಂದ ₹300 ವರೆಗೆ ದರ ಇತ್ತು.

ಬಿಡಿ ಹೂ, ಗಲಾಟೆ ಹೂ, ಹೊನ್ನಾರ್ಕಿ ಹೂ, ಉತ್ತರಾಣಿ ಕಡ್ಡಿ, ಗುಣಮಟ್ಟದ ಹಳದಿ, ಬಿಳಿ, ಕೆಂಪು, ನೇರಳಿ ವರ್ಣದ ಸೇವಂತಿ ಮತ್ತು ಚಂಡು ಹೂ, ವಿವಿಧ ಬಣ್ಣದ (ಬಟನ್ಸ್)‌ ಹೂಗಳು ಕೆಜಿಗೆ ₹ 300 ರಿಂದ ₹ 400 ವರೆಗೆ ಮಾರಾಟವಾದವು. ಉತ್ತಮ ದರಕ್ಕೆ ಮಾರಾಟವಾಗಿದ್ದರಿಂದ ದೀಪಾವಳಿ ಹಬ್ಬವೂ ಹೂ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿತು.

ರಾಣೆಬೆನ್ನೂರಿನ ಬಿ.ಎಸ್‌.ರಸ್ತೆಯಲ್ಲಿ ದೀಪಾವಳಿ ಅಂಗವಾಗಿ ವ್ಯಾಪಾರ ವಹಿವಾಟು ಜೋರಾಗಿತ್ತು
ರಾಣೆಬೆನ್ನೂರಿನ ನೆಹರು ಮಾರುಕಟ್ಟೆ ಎಂ.ಜಿ.ರಸ್ತೆ ಮತ್ತು ಬಿ.ಎಸ್‌. ರಸ್ತೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ವ್ಯಾಪಾರ ವಹಿವಾಟು ಜೋರಾಗಿತ್ತು.
ಮಣ್ಣಿನ ಹಣತೆ ಮಾರಾಟ ಮಾಡಿದರು
ರಾಣೆಬೆನ್ನೂರಿನ ನೆಹರು ಮಾರುಕಟ್ಟೆ ಎಂ.ಜಿ.ರಸ್ತೆಯಲ್ಲಿ ಕುಂಬಳಕಾಯಿ ಮಾರಾಟ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.