
ರಾಣೆಬೆನ್ನೂರು: ಪಾದಚಾರಿ ಮಾರ್ಗ ಒತ್ತುವರಿ. ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ. ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳು. ಪಾದಚಾರಿ ಓಡಾಟಕ್ಕೆ ತೊಂದರೆಯಾದರೂ
ಕಣ್ಮುಚ್ಚಿ ಕುಳಿತ ಪೊಲೀಸರು. ಬಳಕೆಯಾಗದೇ ಪಾಳುಬಿದ್ದ ಪಾದಚಾರಿ ಮೇಲ್ಸೇತುವೆ...
ನಗರದ ಸಂಚಾರ ವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ಹಳಿ ತಪ್ಪಿದೆ. ಅವೈಜ್ಞಾನಿಕ ನಡೆದ ಹಾಗೂ ಸಂಚಾರ ನಿಯಮ ಉಲ್ಲಂಘನೆಯಿಂದಾಗಿ ನಿತ್ಯವೂ ನಗರದಲ್ಲಿ ದಟ್ಟಣೆ ಉಂಟಾಗುತ್ತಿದೆ. ಇದರಿಂದಾಗಿ ವಾಹನಗಳ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ಅಡೆತಡೆ ಉಂಟಾಗುತ್ತಿದೆ.
ಕೇಂದ್ರ ಬಸ್ ನಿಲ್ದಾಣದ ಬಳಿಯೇ ಪಾದಚಾರಿ ಮಾರ್ಗ ಒತ್ತುವರಿಯಾಗಿದೆ. ಹಣ್ಣು ಮಾರಾಟಗಾರರು, ಸರ್ಕಾರದ ಜಾಗದಲ್ಲಿ ಗೂಡಂಗಡಿ ಇಟ್ಟುಕೊಂಡು ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದಾರೆ. ವಾಹನಗಳನ್ನು ನಿಲ್ಲಿಸುವ ಜಾಗದಲ್ಲಿ ಗೂಡಂಗಡಿಗಳು ಇರುವುದರಿಂದ, ರಸ್ತೆಯಲ್ಲಿಯೇ ಜನರು ವಾಹನ ನಿಲ್ಲಿಸುತ್ತಿದ್ದಾರೆ.
ಹಳೇ ಪಿ.ಬಿ.ರಸ್ತೆಯ ಅಕ್ಕ–ಪಕ್ಕದಲ್ಲಿ ದಿನದಿಂದ ದಿನಕ್ಕೆ ಅಕ್ರಮ ಗೂಡಂಗಡಿಗಳು ತಲೆ ಎತ್ತುತ್ತಿವೆ. ಇವುಗಳಿಗೆ ನಗರಸಭೆಯವರು ಲಗಾಮು ಹಾಕುತ್ತಿಲ್ಲ. ಸರ್ಕಾರಿ ಜಾಗ ಒತ್ತುವರಿಯಾಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ಕಣ್ಮುಚ್ಚಿ
ಕುಳಿತುಕೊಂಡಿದ್ದಾರೆ.
ಆರಂಭದಲ್ಲಿ ಸಣ್ಣ ಪಾತ್ರೆ ಇಟ್ಟುಕೊಂಡು ನಿಲ್ಲುವ ಬೀದಿಬದಿ ವ್ಯಾಪಾರಿ, ಕ್ರಮೇಣ ದೊಡ್ಢ ಗೂಡಂಗಡಿಯನ್ನೇತೆರೆಯುತ್ತಿದ್ದಾರೆ. ದಿನ ಕಳೆದಂತೆ ಸರ್ಕಾರಿ ಜಾಗದಲ್ಲಿ ಅಕ್ರಮ ವ್ಯಾಪಾರ ನಡೆಯುತ್ತಿದೆ. ಇದರಿಂದ ನಗರಸಭೆಗೂ ತೆರಿಗೆ ವಂಚನೆಯಾಗುತ್ತಿದೆ. ನಗರಸಭೆಯ ಕೆಲ ಸಿಬ್ಬಂದಿ, ಗೂಡಂಗಡಿಯವರಿಂದ ಅಕ್ರಮವಾಗಿ ಹಣ ವಸೂಲಿ ಮಾಡಿ ಅನುಕೂಲ ಮಾಡಿಕೊಟ್ಟಿರುವ ಆರೋಪವೂ ಇದೆ.
‘ಬಸ್ ನಿಲ್ದಾಣ ಎದುರಿನ ಹಳೇ ಪಿ.ಬಿ.ರಸ್ತೆಯ ಎರಡು ಬದಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿಯಾಗಿದೆ. ಇದನ್ನು ಕೂಡಲೇ ತೆರವು ಮಾಡಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪಾಳು ಬಿದ್ದ ಸ್ಕೈವಾಕ್: ಬಸ್ ನಿಲ್ದಾಣ ಎದುರು ರಸ್ತೆ ದಾಟಲು ಪಾದಚಾರಿಗಳಿಗಾಗಿ ಸ್ಕ್ರೈವಾಕ್ ನಿರ್ಮಿಸಲಾಗಿದೆ. ಆದರೆ, ಈ ಸ್ಕೈವಾಕ್ ಬಳಕೆಯಾಗದೇ ಪಾಳು ಬಿದ್ದಿದೆ.
ನಗರಸಭೆಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸ್ಕೈವಾಕ್ ನಿರ್ಮಿಸಲಾಗಿದೆ. ಅದು ಜಾಹೀರಾತಿಗೆ ಮಾತ್ರ ಸೀಮಿತವಾಗಿದೆ. ಯಾರೊಬ್ಬರೂ ಇಲ್ಲಿ ಓಡಾಡುತ್ತಿಲ್ಲ. ಕಿಡಿಗೇಡಿಗಳು, ಮದ್ಯಪಾನಿಗಳು, ಅನಾಥರು ವಾಸಮಾಡುವ ತಾಣವಾಗಿದೆ.
ಎಪಿಎಂಸಿ: ಇಲ್ಲಿನ ಎಪಿಎಂಸಿ ಸುತ್ತಮುತ್ತಲು ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಜಿಲ್ಲೆಯ ವಿವಿಧ ಊರು ಹಾಗೂ ಹೊರ ಜಿಲ್ಲೆಗಳಿಂದಲೂ ರೈತರು ಎಪಿಎಂಸಿಗೆ ಬರುತ್ತಿದ್ದಾರೆ. ಹಲಗೇರಿ ರಸ್ತೆಯ ವೃತ್ತದಿಂದ ಅಂಚೆ ಕಚೇರಿ ಮೂಲಕ ಎಪಿಎಂಸಿ ಯಾರ್ಡ್ ಹೋಗುವ ರಸ್ತೆಯಲ್ಲಿ ಉಂಟಾಗುವ ದಟ್ಟಣೆಗೆ ರೈತರು ಸುಸ್ತಾಗಿದ್ದಾರೆ.
ಬಸ್ ನಿಲ್ದಾಣ ಮತ್ತು ಕೋರ್ಟ್ ವೃತ್ತದಿಂದ ರೈಲ್ವೆ ಸ್ಟೇಶನ್, ಎಪಿಎಂಸಿಗೆ ಹೋಗುವ ರಸ್ತೆ ಕಿರಿದಾಗಿದೆ. ಎರಡೂ ಬದಿಗೂ ವಾಹನಗಳನ್ನು ಜನರು
ನಿಲ್ಲಿಸುತ್ತಿದ್ದಾರೆ.
ಬೀದಿಬದಿ ವ್ಯಾಪಾರಸ್ಥರು, ಹೂವು–ಹಣ್ಣು ಮಾರಾಟಗಾರರು, ಕಬ್ಬಿನ ಹಾಲು, ಬಟ್ಟೆ, ಪಾನಿ ಪುರಿ, ಬಾಳೆ ಹಣ್ಣು ವಾಪಾರಸ್ಥರು ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದರಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು ಜೀವ ಕೈಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.
ಹಲಗೇರಿ ವೃತ್ತ: ಹಳೇ ಪಿ.ಬಿ.ರಸ್ತೆಯ ಮೂಲಕ ಹಿರೇಕೆರೂರು, ರಟ್ಟಿಹಳ್ಳಿ, ಹುಬ್ಬಳ್ಳಿ–ಧಾರವಾಡ ಮತ್ತು ಹರಿಹರ, ದಾವಣಗೆರೆ ಕಡೆಗೆ ಹೋಗುವ ವಾಹನಗಳು ಹಲಗೇರಿ ವೃತ್ತದ ಮೂಲಕ ಹೋಗುತ್ತವೆ. ಇದರ ಬಳಿ ಶಾಲಾ–ಕಾಲೇಜುಗಳಿವೆ. ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಎಂ.ಜಿ.ರಸ್ತೆ: ನಗರದ ಹೃದಯ ಭಾಗವಾಗಿರುವ ಎಂ.ಜಿ.ರಸ್ತೆಯ ಎರಡೂ ಬದಿಗೆ ಪಾದಚಾರಿ ಮಾರ್ಗ ಒತ್ತುವರಿಯಾಗಿದೆ. ಇದನ್ನು ತೆರವು ಮಾಡುವಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ವಿಫಲರಾಗಿದ್ದಾರೆ.
ರಾಣೆಬೆನ್ನೂರು ಸಮೀಪದಲ್ಲಿ ದೇವರಗುಡ್ಡ, ಉಕ್ಕಡಗಾತ್ರಿ, ಕದರಮಂಡಲಗಿ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳಿವೆ. ಅಮವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ಹೆಚ್ಚಿನ ಜನರು, ರಾಣೆಬೆನ್ನೂರು ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದಲೇ ಕ್ಷೇತ್ರಕ್ಕೆ ಹೋಗುತ್ತಾರೆ.
ಇತ್ತೀಚಿನ ದಿನಗಳಲ್ಲಿ ದಟ್ಟಣೆ ಸಮಸ್ಯೆ ಹೆಚ್ಚಾಗಿರುವುದರಿಂದ ಭಕ್ತರು ಹಾಗೂ ಪ್ರವಾಸಿಗರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಗೆ ಪ್ರವೇಶಿಸುವಾಗ ಮೊದಲಿಗೆ ರಾಣೆಬೆನ್ನೂರಿಗೆ ಬರಬೇಕು. ಇಲ್ಲಿಯ ಸಂಚಾರ ವ್ಯವಸ್ಥೆ ನೋಡಿ ಜನರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆರಮೇಶ ಎಚ್., ರಾಣೆಬೆನ್ನೂರು ನಿವಾಸಿ
ಪಾದಚಾರಿ ಮಾರ್ಗ ಒತ್ತುವರಿಯನ್ನು ಕೂಡಲೇ ತೆರವು ಮಾಡಬೇಕು. ಸುಗಮ ಸಂಚಾರಕ್ಕೆ ಹಾಗೂ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ರೂಪಿಸಬೇಕುಚಂದ್ರಪ್ಪ ಎಂ., ರಾಣೆಬೆನ್ನೂರು ನಿವಾಸಿ
ಹಲಗೇರಿ ವೃತ್ತ, ಬಸ್ ನಿಲ್ದಾಣ (ಕೋರ್ಟ್) ವೃತ್ತ ಮತ್ತು ಅಂಚೆ ಕಚೇರಿ ವೃತ್ತದಲ್ಲಿ ಸಂಚಾರ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಬಸ್ ನಿಲ್ದಾಣದ ಸಮೀಪದ ಸಿಗ್ನಲ್ ಮಾತ್ರ ಕಾರ್ಯಾಚರಣೆಯಲ್ಲಿದ್ದು, ಉಳಿದ ಕಡೆಗಳಲ್ಲಿ ಸಿಗ್ನಲ್‌ಗಳು ಹಾಳಾಗಿ ವರ್ಷಗಳೇ ಆಗಿವೆ.
‘ನಗರದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಅದರ ಜೊತೆಯಲ್ಲಿ ಸಿಗ್ನಲ್‌ಗಳೂ ಹಾಳಾಗಿವೆ. ಇವುಗಳ ದುರಸ್ತಿ ಇದುವರೆಗೂ ಆಗಿಲ್ಲ. ಸಂಚಾರ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜೊತೆಗೆ, ನಗರಸಭೆಯವರು ಹಾಗೂ ಪೊಲೀಸರ ನಡುವೆ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ’ ಎಂದು ಸ್ಥಳೀಯ ನಿವಾಸಿಗಳು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.