ರಾಣೆಬೆನ್ನೂರು: ಇಲ್ಲಿನ 33ನೇ ವಾರ್ಡ್ ವ್ಯಾಪ್ತಿಯ ಈಶ್ವರ ನಗರದ ರಸ್ತೆ, ಚರಂಡಿ ಹಾಗೂ ಉದ್ಯಾನಗಳಲ್ಲಿ ಬಿದ್ದಿರುವ ತ್ಯಾಜ್ಯ ರಾಶಿಯು ವಿಲೇವಾರಿ ಆಗದ ಕಾರಣ ಈ ಪ್ರದೇಶವು ತಿಪ್ಪೆ ಗುಂಡಿಯಂತೆ ಗೋಚರಿಸುತ್ತಿದೆ.
ಬಡಾವಣೆಯ ರಸ್ತೆಯ ಬದಿಗಳಲ್ಲಿ ಸುತ್ತಮುತ್ತಲಿನ ನಿವಾಸಿಗಳು ಕಸ ಸುರಿಯುತ್ತಿರುವುದು ಸಮಸ್ಯೆಗೆ ಕಾರಣವಾಗಿದ್ದು, ಈ ಕಸವನ್ನು ಬಿದಿ ನಾಯಿಗಳು, ದನಗಳು ಮತ್ತು ಹಂದಿಗಳು ಚೆಲ್ಲಾಪಿಲ್ಲಿ ಮಾಡುತ್ತಿವೆ. ಇದರಿಂದ ದಿನದಿಂದ ದಿನಕ್ಕೆ ಸಮಸ್ಯೆ ವಿಸ್ತರಿಸಿಕೊಳ್ಳುತ್ತಿದೆ.
ಕಸದ ರಾಶಿಯಿಂದ ಮೇಲೆ ಬರುವ ಗಲೀಜು ಗಾಳಿಯಲ್ಲಿ ಹಾರಾಡಿಕೊಂಡು ಬೈಕ್ ಸವಾರರ ಕಣ್ಣಿಗೆ ರಾಚಿಕೊಳ್ಳುತ್ತಿದೆ. ಚರಂಡಿಗಳಲ್ಲಿ ಕೊಳಚೆ ತುಂಬಿಕೊಂಡಿದ್ದು, ಹಲವು ತಿಂಗಳುಗಳಿಂದ ಸ್ವಚ್ಛತೆಯಾಗಿಲ್ಲ. ನಗರಸಭೆ ಕಸದ ವಾಹನಗಳು ಸರಿಯಾಗಿ ಸಮಯಕ್ಕೆ ಬಾರದ ಕಾರಣ ಜನರು ರಸ್ತೆಗಳಲ್ಲಿಯೆ ಕಸ ತಂದು ಹಾಕುತ್ತಿದ್ದಾರೆ.
ಮೂಲ ಸೌಲಭ್ಯಗಳ ಸಮಸ್ಯೆ: ಈಶ್ವರ ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಚರಂಡಿಗಳು ಕಿತ್ತು ಹೋಗಿವೆ. ಈಶ್ವರ ನಗರದಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.
‘ಸಮಸ್ಯೆಗಳನ್ನು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅಧಿಕಾರಿಗಳು ಬರೀ ಭರವಸೆ ನೀಡುತ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ ನಡೆದ ಬಜೆಟ್ ಪೂರ್ವ ಸಭೆಯಲ್ಲಿಯೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರಸಭೆ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದೇವೆ. ಇದುವರೆಗೂ ಸ್ವಚ್ಚತೆ ಮಾಡಿಲ್ಲ’ ಎಂದು ನೀಡ್ಸ್ ಸಂಸ್ಥೆಯ ಸಿಇಓ ಎಚ್.ಎಫ್. ಅಕ್ಕಿ ದೂರಿದರು.
ಕಿತ್ತುಹೋದ ರಸ್ತೆಗಳಲ್ಲಿ ಬೈಕ್ ಸವಾರರು ಮಗುಚಿ ಗಾಯ ಮಾಡಿಕೊಳ್ಳುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಪ್ರತಿದಿನ ನಸುಕಿನಲ್ಲಿ ವಾಯುವಿಹಾರಕ್ಕೆ ತೆರಳುವ ಜನರು ಕೂಡಾ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
‘ರಸ್ತೆಯ ಎರಡೂ ಬದಿಯಲ್ಲಿ ಇರುವ ಚರಂಡಿಗಳು ಕಾಂಕ್ರೀಟ್ ಕಿತ್ತಿವೆ. ಹಂದಿಗಳು ವಾಸಿಸುವ ತಾಣವಾಗಿ ಮಾರ್ಪಟ್ಟಿದೆ. ಚರಂಡಿ ನೀರು ಸರಾಗವಾಗಿ ಹರಿಯದೇ ನಿಲ್ಲುವುದರಿಂದ ಹಚ್ಚ ಹಸಿರಿನಿಂದ ಕೂಡಿದ್ದು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಈಶ್ವರನಗರದ ಖಾಲಿ ನಿವೇಶನಗಳಲ್ಲಿ ಪಾರ್ಥೇನಿಯಂ ಹಾಗೂ ಮುಳ್ಳಿನ ಗಿಡಗಳು ಬೆಳೆದು ಸಮಸ್ಯೆಯ ತಾಣಗಳಾಗಿವೆ’ ಎನ್ನುವುದು ಸ್ಥಳೀಯ ನಿವಾಸಿಗಳ ಅಳಲು.
‘ನಗರದಲ್ಲಿ ಸ್ವಚ್ಛತೆ ಎನ್ನುವುದು ಮಾಯವಾಗಿದೆ. ಚಿಕುನ್‌ಗುನ್ಯ, ಡೆಂಗಿ ಜ್ವರ ಹಾಗೂ ಮಲೇರಿಯಾದಂತಹ ರೋಗ ಹರಡುವ ಬೀತಿ ಉಂಟಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು. ಸಂಬಂಧಿಸಿದ ನಗರಸಭೆ ಅಧಿಕಾರಿಗಳು ಕೂಡಲೇ ಇತ್ತಕಡೆ ಗಮನ ಹರಿಸಿ ಸ್ವಚ್ಚತೆಗೆ ಮುಂದಾಗಬೇಕು’ ಎಂದು ಮಾಲತೇಶ ಪೂಜಾರ ಆಗ್ರಹಿಸಿದರು.
‘ಮೊದಲಿನ ಸಿಬ್ಬಂದಿ ಇಲ್ಲಿನ ಸಮಸ್ಯೆಗಳ ಬಗ್ಗೆ ದೂರವಾಣಿ ಮೂಲಕ ತಿಳಿಸಿದರೆ ತಕ್ಷಣ ಸ್ಪಂದಿಸುತ್ತಿದ್ದರು. ಕಳೆದ ಐದಾರು ತಿಂಗಳಿಂದ ಇಲ್ಲಿನ ಸಮಸ್ಯೆಗಳ ಬಗ್ಗೆ ನಗರಸಭೆ ಹೆಲ್ತ್ ಇನೆಸ್ಪೆಕ್ಟರ್ ಅವರಿಗೆ ಕರೆ ಮಾಡಿದರೆ ಫೋನ್ ಎನ್ನುವುದಿಲ್ಲ. ಕಸ ಸಂಗ್ರಹಿಸುವ ವಾಹನ ಐದಾರು ದಿನಕ್ಕೊಮ್ಮೆ ಬರುತ್ತದೆ. ನಾವಾಗಿ ಕರೆ ಮಾಡಿದಾಗ ಬರುತ್ತಾರೆ. ಇಲ್ಲವಾದರೆ ಕಸ ಒಯ್ಯಲು ಬರದೇ ಇಲ್ಲ’ ಎಂದು ಈಶ್ವರನಗರದ ಮಹಿಳಾ ಸಂಘದ ಸದಸ್ಯೆಯರು ದೂರಿದರು.
‘ಈಶ್ವರ ನಗರದ 33ನೇ ವಾರ್ಡ್ ವ್ಯಾಪ್ತಿಯ ಎಲ್ಲಾ ಪ್ರಮುಖ ರಸ್ತೆಗಳು ಹಾಗೂ ಉಪ ರಸ್ತೆಗಳು ಕಸದ ರಾಶಿಯಿಂದ ತುಂಬಿವೆ. ಕಟ್ಟಡದ ಅವಶೇಷಗಳನ್ನು ತಂದು ರಾಶಿ ಹಾಕಿದ್ದಾರೆ. ಸ್ಥಳೀಯ ಸ್ವಚ್ಚತೆ ಮರೀಚಿಕೆಯಾಗಿದೆ. ನಗರಸಭೆ ಅಧಿಕಾರಿಗಳು ವಾರ್ಡ್‌ಗೆ ಭೇಟಿ ನೀಡಿ ಸ್ವಚ್ಛತೆ ಮಾಡಿಸಲು ಮುಂದಾಗಬೇಕು. ಇಲ್ಲವಾದರೆ ನಗರಸಭೆ ಎದುರುಗಡೆ ಪ್ರತಿಭಟನೆ ನಡೆಸಲಾಗುವುದು’ ಎಂದು ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಘಟಕದ ಅಧ್ಯಕ್ಷ ಸಂಜೀವರೆಡ್ಡಿ ಮದಗುಣಕಿ ಒತ್ತಾಯಿಸಿದರು.
ಈಶ್ವರನಗರದಲ್ಲಿ ಬಿದ್ದಿರುವ ಕಸದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೂಡಲೇ ರಸ್ತೆ ಬದಿಗೆ ಮತ್ತು ಪಾರ್ಕ್ ಸುತ್ತ ಇರುವ ಜಾಲಿ ಕಸ ತೆಗೆಸಿ ಸ್ವಚ್ಚಗೊಳಿಸಲು ಕ್ರಮಕೈಗೊಳ್ಳಲಾಗುವುದುಎಫ್.ಐ. ಇಂಗಳಗಿ ನಗರಸಭೆ ಪೌರಾಯುಕ್ತರು
ಸೊಳ್ಳೆಗಳ ಕಾಟದಿಂದ ಜನತೆ ರೋಸಿ ಹೋಗಿದ್ದಾರೆ. ಫಾಗಿಂಗ್ ಮಾಡಿಸಲು ನಗರಸಭೆ ಅಧಿಕಾರಿಗಳ ತಂದಿದ್ದೇವೆ. ಇದುವರೆಗೂ ಫಾಗಿಂಗ್ ಮಾಡಿಸಿಲ್ಲಮಾಲತೇಶ ಪೂಜಾರ ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.