ADVERTISEMENT

ರಾಣೆಬೆನ್ನೂರು ಕಾ ರಾಜಾ: ಅದ್ದೂರಿ ಶೋಭಾಯಾತ್ರೆ; ಮೆರುಗು ತಂದ ಕಲಾ ತಂಡಗಳು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 5:01 IST
Last Updated 5 ಅಕ್ಟೋಬರ್ 2025, 5:01 IST
<div class="paragraphs"><p>ರಾಣೆಬೆನ್ನೂರಿನಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯಿಂದ ಪ್ರತಿಷ್ಠಾಪಿಸಿದ ರಾಣೆಬೆನ್ನೂರು ಕಾ ರಾಜಾ ಗಣೇಶ ಮೂರ್ತಿಯ ವಿಸರ್ಜನಾ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು</p></div>

ರಾಣೆಬೆನ್ನೂರಿನಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯಿಂದ ಪ್ರತಿಷ್ಠಾಪಿಸಿದ ರಾಣೆಬೆನ್ನೂರು ಕಾ ರಾಜಾ ಗಣೇಶ ಮೂರ್ತಿಯ ವಿಸರ್ಜನಾ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು

   

ರಾಣೆಬೆನ್ನೂರು: ಇಲ್ಲಿಯ ನಗರಭೆ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸಿದ್ದ ರಾಣೆಬೆನ್ನೂರು ಕಾ ರಾಜಾ (ಶತಮಾನದ ಸಂಘ ಸೂರ್ಯ) ಗಣೇಶ ಮೂರ್ತಿಯ ವಿಸರ್ಜನಾ ಶೋಭಾಯಾತ್ರೆಯು ಶನಿವಾರ ಅದ್ದೂರಿಯಾಗಿ ನಡೆಯಿತು.

ಗಣೇಶೋತ್ಸವ ಅಂಗವಾಗಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಆರ್‌ಎಸ್‌ಎಸ್‌ ನೂರರ ಸಂಭ್ರಮ ನೆನೆಯುವ ಸನ್ನಿವೇಶಗಳನ್ನು ಇಟ್ಟುಕೊಂಡು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. 

ADVERTISEMENT

ವಿಶೇಷ ಗಣಪತಿ ಎನಿಸಿಕೊಂಡಿದ್ದ ‌ರಾಣೆಬೆನ್ನೂರು ಕಾ ರಾಜಾ ಗಣೇಶ ಮೂರ್ತಿಯನ್ನು ವೀಕ್ಷಿಸಲು ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಜನರು ಬಂದು ಹೋದರು. ಇದೇ ಗಣಪತಿ ಮೂರ್ತಿಯ ವಿಸರ್ಜನೆಯೂ ಅರ್ಥಪೂರ್ಣವಾಗಿ ಶನಿವಾರ ನೆರವೇರಿತು.

ನಗರಸಭೆ ಕ್ರೀಡಾಂಗಣದಿಂದ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಮೂರ್ತಿಯ ವಿಸರ್ಜನೆಯ ಶೋಭಾಯಾತ್ರೆ,  ಕುರುಬಗೇರಿ ಮೂಲಕ ಸಿದ್ದೇಶ್ವರನಗರಕ್ಕೆ ತೆರಳಿ ಅಲ್ಲಿಂದ ವಾಪಸ್‌ ಕುರುಬಗೇರಿ ವೃತ್ತದ ಮೂಲಕ ಮೌನೇಶ್ವರ ದೇವಸ್ಥಾನ ರಸ್ತೆ, ನೆಹರು ಮಾರುಕಟ್ಟೆ, ದುರ್ಗಾ ಕೂಟ, ದೇವರಗುಡ್ಡ ರಸ್ತೆ, ಎಂ.ಜಿ.ರಸ್ತೆ, ಚತುರ್ಮುಖಿ ದೇವಸ್ಥಾನ ವೃತ್ತ, ದೊಡ್ಡಪೇಟೆ, ಸುಭಾಷ್  ವೃತ್ತ, ಬಸವೇಶ್ವರ ದೇವಸ್ಥಾನ, ಕುಂಬಾರ ಓಣಿ, ಓಂ ವೃತ್ತ, ಸಂಗಮ ವೃತ್ತ, ಅಂಚೆ ಕಚೇರಿ ವೃತ್ತ, ಮೇಡ್ಲೇರಿ ವೃತ್ತ, ಬಿ.ಎಸ್‌. ರಸ್ತೆ ಮತ್ತು ಬಸ್‌ ನಿಲ್ದಾಣ ರಸ್ತೆಯಲ್ಲಿ ಸಾಗಿತು.

ರಾಜ್ಯ, ಅಂತರ ರಾಜ್ಯಗಳಿಂದ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪುರುಷರು – ಮಹಿಳೆಯರ ಡೊಳ್ಳು ಕುಣಿತ, ತಮಟೆ, ದುರಗಮುರಗಿಯರ ಕಲೆ, ಚಂಡಿ, ಮದ್ದಳೆ, ಕಂಸಾಳೆ, ನಾಸಿಕ್‌ ಡೋಲ್‌, ಜಗ್ಗಲಗಿ ಮೇಳ, ಲಂಬಾಣಿ ಶೈಲಿಯ ನೃತ್ಯ, ಅಣಕು ಗೊಂಬೆಗಳು, ನಂದಿಕೋಲು, ಅಟವಾಳಗಿ ಸಹೋದರರ ಪುರವಂತಿಕೆ ಹಾಗೂ ವೀರಗಾಸೆ, ದರ್ಬಾರ್‌ ಹಾಲ್‌ ಪರಿಕರಗಳ ಮೇಳ, ಹುಲಿ ಕುಣಿತ, ಕೇರಳದ ದೇವತಾ ಮೂರ್ತಿಗಳು, ಮಕ್ಕಳ ನೃತ್ಯ ತಂಡಗಳು ಮೆರವಣಿಗೆಗೆ ಮೆರುಗು ತಂದವು.

ಟ್ರ್ಯಾಕ್ಟರ್‌ನಲ್ಲಿ ವಿವಿಧ ದೇವತೆಗಳ ಬೃಹತ್‌ ಮೂರ್ತಿಗಳು ಹಾಗೂ ಆರ್‌ಎಸ್‌ಎಸ್‌ ಪಥ ಸಂಚಲನದ ಸ್ಥಬ್ದ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಮಹಿಳೆಯರು ಮತ್ತು ಯುವಕರಿಗಾಗಿ ಡಿಸ್ಕ್ ಜಾಕಿ ವ್ಯವಸ್ಥೆ ಮಾಡಲಾಗಿತ್ತು. 

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರಿಗೆ, ರಸ್ತೆಯುದ್ದಕ್ಕೂ ಕುಡಿಯುವ ನೀರು, ಪುಲಾವ್‌, ಚಿತ್ರನ್ನ ವ್ಯವಸ್ಥೆ ಮಾಡಲಾಗಿತ್ತು.

ಬಸ್‌ ನಿಲ್ದಾಣದ ವೃತ್ತದಲ್ಲಿ ಸಿಡಿಮದ್ದು ಸಿಡಿಸಲಾಯಿತು.  ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳ ಆರ್‌ಎಸ್‌ಎಸ್‌ ಕಾರ್ಯಕರ್ತರು, ಶಾಲಾ– ಕಾಲೇಜು ವಿದ್ಯಾರ್ಥಿಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.

ಅಂತಿಮವಾಗಿ ಹಳೇ ಪಿ.ಬಿ. ರಸ್ತೆಯ ಹರಿಹರ ತುಂಗಭದ್ರಾ ನದಿಗೆ ತೆರಳಿ ಗಣೇಶ ವಿಸರ್ಜನೆ ಮಾಡಲಾಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಗಣ ಹೋಮ

ರಾಣೆಬೆನ್ನೂರು: ಅಶೋಕ ವೃತ್ತದಲ್ಲಿ ಗಣೇಶ ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಿದ್ದ ವಿರಾಟ್‌ ಹಿಂದೂ ಮಹಾ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಮಿತಿಯಿಂದ ಶನಿವಾರ ಗಣ ಹೋಮ ಏರ್ಪಡಿಸಲಾಗಿತ್ತು.

ಅರ್ಚಕರ ತಂಡದ ಪ್ರಭಯ್ಯ ಹಿರೇಮಠ, ಶಿವರಾಜ ಅವರು ಗಣಹೋಮ ನಡೆಸಿಕೊಟ್ಟರು. ನಂತರ ಪ್ರಸಾದ ವಿತರಣೆ ನಡೆಯಿತು.

ಮಾಜಿ ಶಾಸಕ ಅರುಣ ಕುಮಾರ ಪೂಜಾರ, ನಗರಸಭೆ ಉಪಾಧ್ಯಕ್ಷ ನಾಗೇಂದ್ರಸಾ ಪವಾರ, ಶಿವಕುಮಾರ ಹಾರಕನಾಳ, ಜಗದೀಶ ಯಲಿಗಾರ, ಮೃತ್ಯುಂಜಯ ಕಾಕೋಳ, ಅಮೋಘ ಬದಾಮಿ, ಅನಿಲ ಸಿದ್ದಾಳಿ, ರಾಜು ಬಣಕಾರ, ಕೊಟ್ರೇಶ ಕೆಂಚಪ್ಪನವರ, ಮೈಲಪ್ಪ ಗೋಣಿಬಸಮ್ಮನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.