ರಾಣೆಬೆನ್ನೂರು: ಇಲ್ಲಿಯ ನಗರಸಭೆ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸಿರುವ ‘ರಾಣೆಬೆನ್ನೂರು ಕಾ ರಾಜಾ ಮಹಾಗಣಪತಿ–2025’ ಉತ್ಸವ ಭಕ್ತರ ಗಮನ ಸೆಳೆಯುತ್ತಿದೆ.
ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯಿಂದ ಶತಮಾನದ ಸಂಘ ಸೂರ್ಯ ಅವತಾರದಲ್ಲಿ ಈ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಶತಮಾನ ಪೂರೈಸಿದ ಆರ್‌ಎಸ್‌ಎಸ್ ಸಂಘಟನೆಯ ಇತಿಹಾಸ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.
‘ಶತಮಾನದ ಸಂಘ ಸೂರ್ಯ’ ವಿಷಯವನ್ನು ಇಟ್ಟುಕೊಂಡು ಸಂಘದ ಇತಿಹಾಸವನ್ನು ಯುವ ಪೀಳಿಗೆಗೆ ಮನಮುಟ್ಟುವಂತೆ ತಿಳಿಸಲು ವಿವಿಧ ಕಲಾಕೃತಿಗಳನ್ನು ರಚಿಸಲಾಗಿದೆ. ಆರ್‌ಎಸ್‌ಎಸ್ ಸಂಘದ ಇತಿಹಾಸ ಗಾಥೆಯನ್ನು ವರ್ಣಿಸುವುದರ ಜೊತೆಗೆ, 13ನೇ ಶತಮಾನದ ಒಡಿಶಾದ ಕೊನಾರ್ಕ್ (ಕೋನಾರ್ಕ್ ಎಂಬ ಶಬ್ಧ ಸಂಸ್ಕೃತದ ಕೋನ) ಹಾಗೂ ಅರ್ಕ (ಸೂರ್ಯ) ದೇವಸ್ಥಾನದ ಮಾದರಿಯಲ್ಲಿ ತೇಲುವ ಸೂರ್ಯ ದೇವ ಮೂರ್ತಿಯನ್ನು ನೆನಪಿಸಲಾಗಿದೆ.
‘ರಾಣೆಬೆನ್ನೂರು ಕಾ ರಾಜ ಮಹಾಗಣಪತಿ’ ಉತ್ಸವವು ರಾಣೆಬೆನ್ನೂರಿನ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಭಕ್ತಿ, ಸಂಸ್ಕೃತಿ ಮತ್ತು ಸಾಮಾಜಿಕ ಸಮಾನತೆಯ ಸಂದೇಶವನ್ನು ಹರಡುವ ಮಹಾಪರ್ವವಾಗಿದೆ. ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು, 17 ವರ್ಷದಿಂದ ಯಶಸ್ವಿಯಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬಂದಿದ್ದಾರೆ. ಮೂರ್ತಿ ಪ್ರತಿಷ್ಠಾಪನೆ ಮಾತ್ರವಲ್ಲದೇ ಸಮಾಜದ ಜಾಗೃತಿ, ಸಹೋದರತ್ವ ಮತ್ತು ರಾಷ್ಟ್ರಭಕ್ತಿಯ ಶ್ರೇಷ್ಠ ವೇದಿಕೆಯನ್ನಾಗಿ ರೂಪಿಸಿದ್ದಾರೆ. ತೇಲಾಡುತ್ತಿದ್ದ ಸೂರ್ಯ ವಿಗ್ರಹವನ್ನು ಇಲ್ಲಿ ಮರುಸೃಷ್ಠಿ ಮಾಡಲಾಗಿದೆ.
ನಗರದ ಆರ್‌ಟಿಇಎಸ್ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಪ್ರೊ. ಸತೀಶ ಶಿವಪ್ಪ ಭತ್ತದ ಅವರು ಒಡಿಶಾದ ಕೊನಾರ್ಕ್ ಸೂರ್ಯ ದೇವಸ್ಥಾನದ ಅಧ್ಯಯನ ಮಾಡಿದ್ದಾರೆ. ತಮ್ಮ ಅನುಭವದ ಮೂಲಕ ರಾಣೆಬೆನ್ನೂರು ಕಾ ರಾಜಾ ಮಂಟಪವನ್ನು ಸೃಷ್ಟಿಸಿದ್ದಾರೆ. ಯುವ ಪೀಳಿಗೆಗೆ ನೋಡಲೆಂದು ಎಐ ತಂತ್ರಜ್ಞಾನದ ಮೂಲಕ ಅತ್ಯಾಧುನಿಕವಾಗಿ ಸಿದ್ಧಪಡಿಸಿದ್ದಾರೆ.
ಬೆಂಗಳೂರಿನ ಇಂದ್ರಲೋಕ ಆರ್ಟ್ಸ್ ಸ್ಟುಡಿಯೋದ ಇಂದ್ರಕುಮಾರ ಎಚ್.ಕೆ ಅವರು ರಾಣೆಬೆನ್ನೂರು ಕಾ ರಾಜಾ ಮಂಟಪ ನಿರ್ಮಾಣದ ಕಲಾವಿದರಾಗಿದ್ದಾರೆ. ಅವರು 13 ವರ್ಷಗಳಿಂದ ಮಹಾಗಣಪತಿ ಮೂರ್ತಿ, ಮಂಟಪ ಹಾಗೂ ಇತರೆ ಕಲೆಯಲ್ಲಿ ಪರಿಣಿತಿ ಪಡೆದಿದ್ದಾರೆ.
ಸಾಹಿತಿ ಪ್ರೊ. ಪ್ರಮೋದ ನೆಲವಾಗಲ ಅವರು ಆರ್‌ಎಸ್‌ಎಸ್ ಸಂಘದ 80-90 ವರ್ಷಗಳ ಇತಿಹಾಸವನ್ನು ಸಂಗ್ರಹಿಸಿ ನೋಡುಗರ ಎದುರು ತೆರೆದಿಟ್ಟಿದ್ದಾರೆ. ಆಗಿನ ಅಖಂಡ ಧಾರವಾಡ ಜಿಲ್ಲೆಯಾಗಿದ್ದ ಈಗಿನ ಹಾವೇರಿ ಜಿಲ್ಲೆಗೆ ಆರ್‌ಎಸ್‌ಎಸ್ ಹೇಗೆ ಬಂತು ? ಎಂಬುದರ ಕುರುಹುಗಳನ್ನು ಪತ್ತೆ ಹಚ್ಚಿ ಚಿತ್ರ ಹಾಗೂ ವಿಷಯಗಳನ್ನು ಸಂಗ್ರಹಿಸಿ ಪ್ರದರ್ಶಿಸಿದ್ದಾರೆ. ಸಂಘದ ಗಣವೇಷಧಾರಿಗಳ ಆಕರ್ಷಕ ಪಥಸಂಚಲನದ ದೃಶ್ಯವೂ ಇದೆ.
ಬೆಂಗಳೂರಿನ ಎಂ.ಎಸ್. ರಾಘವೇಂದ್ರ ಅವರು, ಜಗತ್ತಿನ ನಾನಾ ದೇಶಗಳ ಆಚಾರ, ವಿಚಾರ, ಸಂಸ್ಕೃತಿ ಜತೆಗೆ ನಮ್ಮ ಸನಾತನ ಹಿಂದೂ ಧರ್ಮ ಬೆಳೆದು ಬಂದ ದಾರಿ ಹಾಗೂ ಹಿಂದೂ ಧರ್ಮದ ದೇವತೆಗಳ ವಿವರಣೆ, ಹಿಂದೂ ಆಚರಣೆಗಳ ಸಮಗ್ರ ಮಾಹಿತಿಯನ್ನು ಸಾಕ್ಷ್ಯಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.
ಡಾ. ಕೇಶವ ಬಲಿರಾಮ್ ಹೆಗಡೆ ಅವರು 1905ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಬ್ರಿಟಿಷರ ನೀತಿಯನ್ನು ವಿರೋಧಿಸಿದ್ದರು. ಶಾಲೆಯಲ್ಲಿ ವಂದೇ ಮಾತರಂ ಘೋಷಣೆ ಕೂಗಿದ್ದರಿಂದ, ಶಾಲೆಯಿಂದ ಅವರನ್ನು ಹೊರಗೆ ಹಾಕಲಾಗಿತ್ತು. ತಮ್ಮ ಬಾಲ್ಯದಲ್ಲಿಯೇ ಬ್ರಿಟಿಷರ ಧ್ವಜವನ್ನು ಕಿತ್ತೆಸೆಯಲು ಸುರಂಗ ಮಾರ್ಗ ಕೊರೆಯುತ್ತಿದ್ದರು ಎಂಬುದನ್ನು ನೆನಪಿಸುವ ದೃಶ್ಯ ನೋಡುಗರ ಮೈ ರೋಮಾಂಚನಗೊಳಿಸುತ್ತದೆ.
ರಾಣೆಬೆನ್ನೂರು ಕಾ ರಾಜಾ ಮಹಾಗಣಪತಿ ಮೂರ್ತಿ ವೀಕ್ಷಣೆ ಹಾಗೂ ಆರ್‌ಎಸ್‌ಎಸ್ ಪ್ರಾತ್ಯಕ್ಷಿಕೆ ವೀಕ್ಷಿಸಲು ನಿತ್ಯವೂ ಸಂಜೆ 6 ಗಂಟೆಯಿಂದ ರಾತ್ರಿ 10.30 ಗಂಟೆಯವರೆಗೆ ಅವಕಾಶವಿದೆ. ತಾಲ್ಲೂಕು ಮಾತ್ರವಲ್ಲದೇ, ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಜನರು ಬಂದು ಮೂರ್ತಿ ವೀಕ್ಷಿಸುತ್ತಿದ್ದಾರೆ. ಸಂಘಟಕರ ಶ್ರಮಕ್ಕೆ ಮಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಆರ್‌ಎಸ್‌ಎಸ್ ಸ್ಥಾಪನೆಯಿಂದ ಹಿಡಿದು ಇದುವರೆಗೂ ಹಲವು ಸವಾಲುಗಳನ್ನು ಎದುರಿಸುತ್ತ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಸಂಘದ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯಗುರುರಾಜ ಕುಲಕರ್ಣಿ ಆರ್‌ಎಸ್‌ಎಸ್ ಧಾರವಾಡ ವಿಭಾಗ ಬೌದ್ಧಿಕ ಪ್ರಮುಖ
ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ರಾಣೆಬೆನ್ನೂರು ಕಾ ರಾಜಾ ಗಣಪತಿ ಮೂರ್ತಿ 17ನೇ ವರ್ಷದ ಸಂಭ್ರಮದಲ್ಲಿದೆ. ಕಾರ್ಯಕರ್ತರು ಕಲಾವಿದರು ವಿಜ್ಞಾನಿಗಳು ಇತಿಹಾಸಕಾರರು ಎರಡು ತಿಂಗಳಿಂದ ಅಹೋರಾತ್ರಿ ಶ್ರಮಪಟ್ಟು ವೇದಿಕೆ ಸಿದ್ಧಪಡಿಸಿದ್ದಾರೆಪ್ರಕಾಶ ಬುರಡಿಕಟ್ಟಿ ವಂದೇ ಮಾತರಂ ಸ್ವಯಂ ಸೇವಾ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.