ADVERTISEMENT

ರಾಣೆಬೆನ್ನೂರು: ಪ್ರಿಯಕರ ಜತೆ ಸೇರಿ ಮಗಳನ್ನು ಸಾಯಿಸಿದ ತಾಯಿ!

ಪೊಲೀಸರ ಎದುರು ತಡವಾಗಿ ತಪ್ಪೊಪ್ಪಿಕೊಂಡ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 3:04 IST
Last Updated 11 ಸೆಪ್ಟೆಂಬರ್ 2025, 3:04 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ರಾಣೆಬೆನ್ನೂರು: ಪ್ರಿಯಕರನೊಂದಿಗೆ ಜೀವನ ನಡೆಸಲು ಅಡ್ಡಿಯಾಗಿದ್ದಾಳೆಂದು ನಾಲ್ಕು ವರ್ಷದ ಹೆತ್ತ ಮಗಳನ್ನು ಇಬ್ಬರು ಸೇರಿ ಸಾಯಿಸಿದ ಘಟನೆ ತಾಲ್ಲೂಕಿನ ಗುಡ್ಡದ ಆನ್ವೇರಿ ಗ್ರಾಮದಲ್ಲಿ ಆಗಸ್ಟ್‌ನಲ್ಲಿ ನಡೆದಿರುವುದು ತಡವಾಗಿ ಮಂಗಳವಾರ ಬೆಳಕಿಗೆ ಬಂದಿದೆ.

ADVERTISEMENT

ಪತ್ನಿಯಿಂದ ಮಗಳನ್ನು ಕೊಡಿಸುವಂತೆ ಪತಿಯು ಪೊಲೀಸರ ಮೊರೆ ಹೋಗಿದ್ದರು.  ಆಗ ಪೊಲೀಸರು ಅನೈತಿಕವಾಗಿ ಜೀವನ ನಡೆಸುತ್ತಿದ್ದ ಇಬ್ಬರನ್ನು ಕರೆಸಿಕೊಂಡು ವಿಚಾರಿಸಿದಾಗ ಸತ್ಯ ಹೊರಬಂದಿದೆ.

ನಗರದ ಎಕೆಜಿ ಕಾಲನಿಯಲ್ಲಿ ಜೀವನ ನಡೆಸುತ್ತಿದ್ದ ಗಂಗಮ್ಮ ಮಂಜುನಾಥ ಗುತ್ತಲ (36) ಹಾಗೂ ಗೌರಿಶಂಕರ ನಗರ ಅಣ್ಣಪ್ಪ ಹನುಮಂತಪ್ಪ ಮಡಿವಾಳರ (40) ಕೊಲೆ ಮಾಡಿದ ಆರೋಪಿಗಳಾಗಿದ್ದು, ಸದ್ಯ ನಗರ ಠಾಣೆ ಪೊಲೀಸರ ವಶದಲ್ಲಿದ್ದಾರೆ.

ಘಟನೆ ಹಿನ್ನೆಲೆ: ಎರಡು ತಿಂಗಳ‌ ಹಿಂದೆ ಗಂಗಮ್ಮ ತನ್ನ ಪತಿಯನ್ನು ಬಿಟ್ಟು ಮಗಳನ್ನು ಕರೆದುಕೊಂಡು ಅಣ್ಣಪ್ಪನ ಜೊತೆ ಹೋಗಿ ಗುಡ್ಡದ ಆನ್ವೇರಿ ಗ್ರಾಮದಲ್ಲಿ ವಾಸವಾಗಿದ್ದರು. ಆದರೆ ಇಬ್ಬರ ನಡುವಿನ ಅಕ್ರಮ ಸಂಬಂಧಕ್ಕೆ ಮಗಳು ಅಡ್ಡಿಯಾಗುತ್ತಿದ್ದಾಳೆಂದು ಆಕೆಯ ಕೊಲೆಗೆ ಸಂಚು ರೂಪಿಸಿದ್ದಾರೆ.

ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಹಾವೇರಿ ತಾಲ್ಲೂಕಿನ ಕುರಗುಂದ ಗ್ರಾಮದ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಬಳಿ ಸುಟ್ಟು ಹಾಕಲು ಪ್ರಯತ್ನಿಸಿದ್ದರು. ಆದರೆ ಬಾಲಕಿಯ ದೇಹ ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಗುತ್ತಲ ಠಾಣೆ ಪೊಲೀಸರು ತನಿಖೆ ನಡೆಸಿ ಬಾಲಕಿಯನ್ನು ಅಪರಿಚಿತ ಶವ ಎಂದು ಅಂತ್ಯಸಂಸ್ಕಾರ ಮಾಡಿದ್ದರು.

ಪ್ರಿಯಕರ ಜತೆಗೆ ಜೀವನ ಮಾಡು ಆದರೆ ನನ್ನ ಮಗಳನ್ನು ನನಗೆ ಕೊಟ್ಟು ಬಿಡು ಎಂದು ಮಂಜುನಾಥ ಪಟ್ಟುಹಿಡಿದಾಗ, ಆಗ ಪತ್ನಿ ಗಂಗಮ್ಮ ಮಗಳು ಮೈಸೂರಿನಲ್ಲಿದ್ದಾಳೆ. ಅಲ್ಲಿ ಇಲ್ಲಿ ಇದ್ದಾಳೆ. ಆಕೆಗೆ ಆರಾಮ ಇಲ್ಲ, ಆಸ್ಪತ್ರೆಯಲ್ಲಿದ್ದಾಳೆ ಎಂದು ಕಥೆ ಕಟ್ಟುತ್ತ ಒಂದು ತಿಂಗಳು ಕಾಲ ದೂಡಿದ್ದಾಳೆ.

ಇದರಿಂದಾಗಿ ಮಂಜುನಾಥ ಮಗಳನ್ನು ಕೊಡಿಸುವಂತೆ ಮಂಗಳವಾರ ನಗರ ಠಾಣೆ ಪಿಎಸ್ಐ ಗಡ್ಡಪ್ಪ ಗುಂಜುಟಗಿ ಮೊರೆ ಹೋಗಿದ್ದರು. ಗಂಗಮ್ಮ ಮತ್ತು ಅಣ್ಣಪ್ಪನನ್ನು ಕರೆಸಿಕೊಂಡ ಪಿಎಸ್ಐ ಅವರು ವಿಚಾರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.