ರಾಣೆಬೆನ್ನೂರು: ನಗರವು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ. ಆದರೆ ದಿನದಿಂದ ದಿನಕ್ಕೆ ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಯುಜಿಡಿ ಮತ್ತು 24/7 ಕಾಮಗಾರಿಯಿಂದ ಹದಗೆಟ್ಟ ರಸ್ತೆಗಳು, ಸ್ವಚ್ಛತೆ ಕಾಣದ ಚರಂಡಿಗಳು, ಬೀದಿ ದೀಪ, ಎಲ್ಲೆಂದರಲ್ಲಿ ಕಸ, ಅವ್ಯವಸ್ಥೆಯ ಆಗರವಾಗಿದೆ.
ಕೆಲವೆಡೆ ಸರಿಯಾದ ಬೀದಿ ದೀಪದ ವ್ಯವಸ್ಥೆ ಇಲ್ಲ. ಶಾಂತಿ ನಗರ, ಕೊಪ್ಪದ ಲೇಔಟ್ ಕ್ರಾಸ್, ಸಿದ್ದಾರೂಢನಗರ, ಶಿವಾಜಿನಗರ, ಶ್ರೀರಾಮನಗರ ಅಂಬೇಡ್ಕರ್ ಭವನದ ಹತ್ತಿರ, ಕಂಬಳಿ ಲೇ ಔಟ್, ಬಸವಾ ಪಾರ್ಕ್, ಆಂಜನೇಯ ಬಡಾವಣೆ, ಮಾರುತಿ ನಗರ ಹೀಗೆ ಹಲವೆಡೆ ಸರಿಯಾದ ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದೆ. ಆದರೆ ಚುನಾಯಿತ ಪ್ರತಿನಿಧಿಗಳು ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರಸಭೆಯು ಅಮೃತ ಸಿಟಿ ಯೋಜನೆಗೆ ಒಳಪಟ್ಟರೂ ಸ್ವಚ್ಛತೆ ಕಾಪಾಡುವಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಗಟ್ಟಲು ನಗರಸಭೆ ದಂಡಾಸ್ತ್ರ ಪ್ರಯೋಗಿಸುತ್ತಿದೆ. ಆದರೆ, ರಸ್ತೆ ಬದಿ, ಚಂರಂಡಿ, ದೊಡ್ಡ ಹಳೇ ಗುಂಡಿಗಳಲ್ಲಿ ಕಸ ಎಸೆಯುವುದಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ. ನಗರದ ಪ್ರಮುಖ ರಸ್ತೆಗಳ ಬದಿ, ಕುರುಬಗೇರಿ, ಸಿದ್ದೇಶ್ವರ ನಗರ, ಖಾಲಿ ನಿವೇಶನ, ಹಲಗೇರಿ ಬೈಪಾಸ್ ರಸ್ತೆ, ಗಣೇಶ ನಗರ ಸಾಮಿಲ್ ಬಳಿ, ರಸ್ತೆ, ಕೋರ್ಟ್ ಹಿಂಭಾಗ ಕುರಿ ಉಣ್ಣೆ ಕಚೇರಿ, ಹುಣಸೀಕಟ್ಟಿ ರಸ್ತೆ, ಹಳೇ ಪಿ.ಬಿ.ರಸ್ತೆ ಎಂಜಿನಿಯರಿಂಗ್ ಕಾಲೇಜು ಸಮೀಪ, ಸಾರ್ವಜನಿಕ ಆಸ್ಪತ್ರೆ ಸಮೀಪದ ಹಾಳು ಬಾವಿ, ಜಾನುವಾರು ಮಾರುಕಟ್ಟೆ ಬಳಿ ಹೆದ್ದಾರಿ ಬದಿಗೆ ಸೇರಿದಂತೆ ಹಲವೆಡೆ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ.
ಕಂಡ ಕಂಡ ಕಡೆಗೆ ಕಸ ಹಾಕುವದನ್ನು ತಡೆಯಲು ಪೌರಾಯುಕ್ತರು, ಪರಿಸರ ಎಂಜಿನಿಯರ್ ಹಾಗೂ ಆರೋಗ್ಯ ನಿರೀಕ್ಷಕರು ನಗರದಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸುತ್ತಿದ್ದು, ಸ್ಥಳದಲ್ಲಿಯೇ ದಂಡ ವಿಧಿಸುತ್ತಿದ್ದಾರೆ. ರಸ್ತೆ ಬದಿ ಕಸ ಹಾಕುವದನ್ನು ನಿಯಂತ್ರಿಸಲು ನಗರಸಭೆ ದಂಡ ವಿಧಿಸುತ್ತಿರುವುದು ಸ್ವಾಗತಾರ್ಹ. ಆದರೆ, ಕಸದ ಗಾಡಿ ಎರಡು ಮೂರು ದಿನಕ್ಕೊಮ್ಮೆ ಬರುತ್ತದೆ. ಹಸಿ ಕಸ ಎರಡು ದಿನ ಇಟ್ಟರೆ ಕೊಳೆತು ವಾಸನೆ ಬರುತ್ತದೆ ಎಂದು ಸಾರ್ವಜನಿಕರು ಖಾಲಿ ನಿವೇಶನಗಳಲ್ಲಿ ಕಸ ಹಾಕುತ್ತಿದ್ದಾರೆ. ನಗರಸಭೆಯಿಂದ ಮನೆ ಮನೆ ಕಸ ಸಂಗ್ರಹ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ಅದನ್ನು ಸರಿಪಡಿಸದೇ ದಂಡ ವಿಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ.
ರಸ್ತೆ ಬದಿಗೆ ಆಳೆತ್ತರ ಪೊದೆ, ಜಾಲಿ ಬೆಳೆದು ನಿಂತಿದೆ. ಹಳೇ ಅಂತರವಳ್ಳಿ ರಸ್ತೆಯ ದೇವಿಕಾ ಸ್ಕೂಲ್ ಸಮೀಪದ ರಸ್ತೆಯಲ್ಲಿ ಚರಂಡಿ ತುಂಬಿ ಮಳೆ ನೀರು, ತ್ಯಾಜ್ಯ ರಸ್ತೆ ಮೇಲೆ ಹರಿಯುತ್ತದೆ. ಚರಂಡಿಯ ಪ್ಲಾಸ್ಟಿಕ್ ಚೀಲ, ಕುಡಿದು ಬಿಸಾಕಿದ ನೀರಿನ ಬಾಟಲ್, ಸುತ್ತ ಮನೆಯವರು ಹಾಕಿದ ಕಸ ರಸ್ತೆ ಮೇಲೆ ಬಿದ್ದಿರುತ್ತದೆ. ಮಳೆ ನಿಂತ ಮೇಲೆ ಶಾಲಾ ಮಕ್ಕಳು ಕಸದಲ್ಲಿಯೇ ಅಡ್ಡಾಡುವಂತಾಗಿದೆ. ಕಲುಷಿತ ಚರಂಡಿ ವ್ಯವಸ್ಥೆಯಿಂದ ಎಲ್ಲಿ ನೋಡಿದರೂ ಡೆಂಗಿ, ಚಿಕುನ್ ಗುನ್ಯಾ, ಮಲೇರಿಯಾ ಹೀಗೆ ಹತ್ತು ಹಲವು ಕಾಯಿಲೆ ಹರಡುವ ಭೀತಿ ಉಂಟಾಗಿದೆ ಎನ್ನುತ್ತಾರೆ ಸುರೇಶ ಎ.
ಹೌಸಿಂಗ್ ಕಾಲೋನಿ ಮೊದಲ ಹಂತದ ರಸ್ತೆಗಳು ಹದಗೆಟ್ಟಿವೆ. ರಸ್ತೆಯ ಕಲ್ಲು ಕಿತ್ತು ಅಡ್ಡಾಡಲು ಅನಾನುಕೂಲವಾಗಿದೆ. ಖಾಲಿ ನಿವೇಶನಗಳಲ್ಲಿ ಜಾಲಿ ಮುಳ್ಳಿನ ಕಂಟಿಗಳು ಬೆಳೆದಿವೆ. ಬೀದಿ ದೀಪ ಹಾಳಾಗಿವೆ. ಡಿವೈಡರ್ ರಸ್ತೆಯಲ್ಲಿನ ಬೀದಿ ದೀಪ ಮುರಿದು ಬಿದ್ದಿವೆ. ಈ ಬಗ್ಗೆ ನಗರಸಭೆಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಬಸವರಾಜ ಬಡಿಗೇರ.
ಹಳೇ ಮಾಗೋಡ ಡಿವೈಡರ್ ರಸ್ತೆ ಹಾಳಾಗಿ ಅನೇಕ ವರ್ಷಗಳು ಗತಿಸಿದೆ. ಗಡಾದ ಆಸ್ಪತ್ರೆಯಿಂದ ಬೆಳವಿಗಿ ಆಸ್ಪತ್ರೆವರೆಗೆ, ಪ್ಲೇಯರ್ಸ್ ಪಾರ್ಕ್ ವರೆಗೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ನಗರಸಭೆಯಿಂದ ರಾಷ್ಟ್ರೋತ್ಥಾನ ಯೋಜನೆ ಅಡಿಯಲ್ಲಿ ಕಾಮಗಾರಿ ಕೈಗೊಂಡಿದ್ದು, ಗುತ್ತಿಗೆದಾರ ರಸ್ತೆ ಕಿತ್ತೆಸೆದು ಹೋಗಿ ಕೆಲಸ ನಿಂತು ಒಂದು ವರ್ಷ ಕಳೆದರೂ ಇತ್ತ ಕಡೆ ಗಮನ ಹರಿಸುತ್ತಿಲ್ಲ. ದಿನಾಲು ಬೈಕ್, ಸೈಕಲ್ ದುರಸ್ತಿಗೆ ಬರುತ್ತವೆ. ವಾಹನ ಟೈರ್‌ಗಳಿಗೆ ಚೂಪಾದ ಜಲ್ಲಿ ಕಲ್ಲುಗಳು ಚುಚ್ಚಿ ಟೈರ್ ಒಡೆದು ಹಾಳಾಗಿದ್ದರಿಂದ ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕುವಂತಾಗಿದೆ.
ನಸುಕಿನ ಜಾವ ಪತ್ರಿಕೆ, ಹಾಲು ಹಾಕಲು ಹುಡುಗರು ಈ ಏರಿಯಾಕ್ಕೆ ಹೋಗಲು ಮುಂದಾಗುತ್ತಿಲ್ಲ. ಈಗಲಾದರೂ ನಗರ ಸಭೆಯ ಅಧಿಕಾರಿಗಳು ಈ ಕಡೆ ಗಮನಹರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಇದೇ ರಸ್ತೆಯಲ್ಲಿ ಶಾಲೆ, ಆಸ್ಪತ್ರೆ, ಬಿಇಒ ಕಚೇರಿ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಡೆ ಏರಿಯಾಕ್ಕೆ ಹೋಗುವವರು ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ರಾತ್ರಿ ಹೊತ್ತು ಬೈಕ್ ಸವಾರರು ಬಿದ್ದು ಕೈಕಾಲು ಗಾಯಮಾಡಿಕೊಂಡಿದ್ದಾರೆ. ಅನೇಕ ಇಲ್ಲಿನ ಮೆಡ್ ಪ್ಲಸ್ ಕ್ರಾಸ್‌ನಿಂದ ಗೌರಿಶಂಕರದ ದೇವಸ್ಥಾನದ ವರೆಗಿನ ರಸ್ತೆಯಲ್ಲಿ ನಲ್ಲಿ ಹಾಕಲು ರಸ್ತೆ ಅಗೆದ ತೆಗ್ಗುಗಳು ಬಿದ್ದಿದ್ದು ಅದರಲ್ಲಿಯೇ ಅಡ್ಡಾಡುವಂತಾಗಿದೆ ಎನ್ನುತ್ತಾರೆ ಸಂಕಪ್ಪ ಮಾರನಾಳ.
ಮಾಗೋಡ ಡಿವೈಡರ್ ರಸ್ತೆ, ವಿಕಾಸ ನಗರದ ಶರಣ ಬಸವೇಶ್ವರ ದೇವಸ್ಥಾನ, ವಿನಾಯಕ ನಗರದ ಪೂರ್ವ ಬಡಾವಣೆಯ ಶಾಸಕ ಮಾದರಿ ಶಾಲೆ ಸೇರಿದಂತೆ ಅಲ್ಲಲ್ಲಿ ಜಲ್ಲಿಕಲ್ಲುಗಳನ್ನು ಹಾಕಿ ಸರಿಪಡಿಸುವ ವ್ಯವಸ್ಥೆ ಮಾಡಿದರೂ ಮಳೆಗೆ ಎಲ್ಲಾ ಕೊಚ್ಚಿಕೊಂಡು ಹೋಗಿದೆ. ಇದರಿಂದ ಬೈಕ್ ಸವಾರರಿಗೆ ಶಾಲಾ ಮಕ್ಕಳಿಗೆ ಅಡ್ಡಾಡಲು ತೊಂದರೆಯಾಗಿದೆ.
ನೆಹರು ಮಾರುಕಟ್ಟೆಯ ಕಲ್ಯಾಣ ಮಂಟಪದ ಹಿಂಭಾಗದ ವಾಣಿಜ್ಯ ಮಳಿಗೆಗಗಳ ಮುಂದೆ ಮಳೆಗಾಲದಲ್ಲಿ ನಿಂತರ ನೀರು ನಿಲ್ಲುತ್ತದೆ. ಸುತ್ತಮುತ್ತಲಿನ ವ್ಯಾಪಾರಸ್ಥರು, ಕಸ, ಬಾಳೆ ದಿಂಡು, ಹಳೇ ಖಾಲಿ ಚೀಲ, ಪ್ಲಾಸ್ಟಿಕ್ ಎಲ್ಲಾ ತಂದು ಹಾಕುತ್ತಾರೆ. ಚರಂಡಿ ಕಟ್ಟಿಕೊಂಡು ಮಳೆ ನೀರು ಹೊರಗಡೆ ಹೋಗುತ್ತಿಲ್ಲ. ಅಂಗಡಿಗಳು ಕುಸಿದು ಬೀಳುವ ಹಂತ ತಲುಪಿವೆ ಎಂದು ವ್ಯಾಪಾರಸ್ಥರು ದೂರಿದರು.
ಇನ್ನೇನು ನಗರಸಭೆ ಸದಸ್ಯರ ಅವಧಿ ಇನ್ನು 15 ದಿನ ಬಾಕಿ ಇದೆ. ಕೆಲವೇ ಕೆಲ ವಾರ್ಡುಗಳಲ್ಲಿ ಕಾಮಗಾರಿ ನಡೆದಿದ್ದು ಬಿಟ್ಟರೆ ಉಳಿದೆಲ್ಲ ಕಡೆ ವಾರ್ಡ್‌ಗಳಲ್ಲಿ ರಸ್ತೆಯ ಗುಂಡಿ ಮುಚ್ಚಿಸಲು ಆಗಿಲ್ಲ. ಈಗ ನಗರಸಭೆ ವಾಣಿಜ್ಯ ಮಳಿಗೆಯಿಂದ ಬಂದ ಅನುದಾನದಿಂದ ಹತ್ತು ಹಲವು ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ‘ನಮ್ಮ ಅವಧಿ ಇನ್ನೇನು ಮುಗಿಯುತ್ತ ಬಂದಿತು. ನಮ್ಮ ಅವಧಿಯಲ್ಲಿ ಕೆಲಸ ಆಗಿದ್ದರೆ ಒಳ್ಳೆಯದಾಗುತ್ತಿತ್ತು’ ಎಂದು ಹೆಸರು ಹೇಳಲಿಚ್ಛಿಸದ ಸದಸ್ಯರೊಬ್ಬರು ತಮ್ಮ ಅಳಲು ತೋಡಿಕೊಂಡರು.
ಪರವಾನಗಿ ರದ್ದು ಎಚ್ಚರಿಕೆ
ಪುಟಪಾತ್ ವ್ಯಾಪಾರಸ್ಥರಿಗೆ ಹೋಟೆಲ್ ವಾಣಿಜ್ಯ ಸಂಕೀರ್ಣದಾರರಿಗೆ ನೋಟಿಸು ನೀಡಿ ದಂಡ ಹಾಕಿದರೂ ಹೊರಗೆ ಕಸ ಚೆಲ್ಲುವುದನ್ನು ಪುನರಾವರ್ತಿಸಿದರೆ ವ್ಯಾಪಾರ ಪರವಾನಗಿ ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಎಫ್.ವೈ.ಇಂಗಳಗಿ ಅವರು ಎಚ್ಚರಿಸಿದರು. ವಾಣಿಜ್ಯ ಮಳಿಗೆಗಳ ಪುಟ್‌ಪಾತ್ ವ್ಯಾಪಾರಸ್ಥರು ಹಣ್ಣಿನ ವ್ಯಾಪಾರಸ್ಥರ ಸಭೆ ಕರೆದು ರಸ್ತೆ ಬದಿ ಕಸ ಹಾಕದಂತೆ ಎಚ್ಚರಿಕೆ ನೀಡಲಾಗಿದೆ. ಈಚೆಗೆ ಕೇಲಗಾರ ಮೆಡಿಕಲ್ ಮೂಲೆಯಲ್ಲಿ ಹಗಲೆಲ್ಲ ಕಸ ಎಸೆಯುವ ಸ್ಥಳವನ್ನು ಸ್ವಚ್ಛಗೊಳಿಸಿ ಕಚ್ಚಾ ಸಾಮಗ್ರಿಗಳಿಂದ ಅಲಂಕಾರ ಮಾಡಿ ರಂಗೋಲಿ ಬಿಡಿಸಿ ಜಾಗೃತಿ ಮೂಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.