ರಾಣೆಬೆನ್ನೂರು: ನಗರವು ಜಿಲ್ಲೆಯಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುವ ದೊಡ್ಡ ಪಟ್ಟಣವಾಗಿದೆ. ಬಿತ್ತನೆ ಬೀಜ ಖರೀದಿಸಲು ರಾಜ್ಯದ ನಾನಾ ಮೂಲೆಗಳಿಂದ ನಗರಕ್ಕೆ ಬರುತ್ತಾರೆ. ನಗರಸಭೆ ಅಮೃತ ಸಿಟಿ ಯೋಜನೆಗೆ ಒಳಪಟ್ಟರೂ ರಸ್ತೆಗಳು ಇನ್ನು ಸುಧಾರಣೆ ಕಂಡಿಲ್ಲ. ನಗರದ ಕೆಲ ಪ್ರಮುಖ ರಸ್ತೆಗಳು ಹದಗೆಟ್ಟು ತೆಗ್ಗುಗುಂಡಿಗಳಿಂದ ಕೂಡಿವೆ. ಜನತೆ ಹಿಡಿ ಶಾಪ ಹಾಕುವಂತಾಗಿದೆ.
ಹಳೇ ಪಿ.ಬಿ. ರಸ್ತೆಯ ಹನಗೋಡಿಮಠದವರ ಓಣಿಯಿಂದ ನಗರಸಭೆ ಕ್ರೀಡಾಂಗಣದ ಮುಖ್ಯದ್ವಾರದವರೆಗೆ ಮತ್ತು ಕುರುಬಗೇರಿಗೆ ಹೋಗುವ ಡಿವೈಡರ್ ರಸ್ತೆ ಸಂಪೂರ್ಣ ಹಾನಿಗೊಂಡಿದೆ. ಕಲ್ಲು, ಡಾಂಬರು ಕಿತ್ತು ಗುಂಡಿಗಳು ಬಿದ್ದಿವೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳು ಅಡ್ಡಾಡಲು ದಿನಾಲು ಹರ ಸಾಹಸ ಪಡುವಂತಾಗಿದೆ. ವಿದ್ಯಾರ್ಥಿಗಳು ಸೈಕಲ್ ಮತ್ತು ಸ್ಕೂಲ್ ಬ್ಯಾಗ್ ಸಮೇತ ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಉದಾಹಣೆಗಳಿವೆ.
ಗುಂಡಿಯಲ್ಲಿ ನೀರು ನಿಲ್ಲುವುದರಿಂದ ಸುತ್ತಮುತ್ತಲಿನ ಶಾಲೆಯವರೇ ಗುಂಡಿಗಳಿಗೆ ಕಲ್ಲು ಮಣ್ಣು, ಹೆಂಚಿನ ತುಕಡಿಗಳನ್ನು ತುಂಬಿದ್ದಾರೆ. ರಸ್ತೆಯ ಎರಡೂ ಬದಿಗೆ ದಿನಾಲು ವಾಹನ ನಿಲ್ಲಿಸುವುದರಿಂದ ರಸ್ತೆ ಕಿರಿದಾಗಿದೆ. ಕೆಲ ದಿನಗಳಿಂದ ಸತತ ಮಳೆ ಸುರಿಯುತ್ತಿದ್ದರಿಂದ ಗುಂಡಿಗಳಲ್ಲಿ ನೀರು ನಿಂತು ಮತ್ತಷ್ಟು ಹದಗೆಟ್ಟಿವೆ.
ಈ ರಸ್ತೆಯ ಗುಂಟಾ ಮೂರು ಸರ್ಕಾರಿ ಪ್ರಾಥಮಿಕ ಶಾಲೆ, ನಗರಸಭೆ ಪ್ರೌಢಶಾಲೆ, ಸರ್ಕಾರಿ ಐಟಿಐ ಕಾಲೇಜು, ಆರ್‌ಟಿಇಎಸ್ ಪಿಯು ವಿಜ್ಞಾನ ಮಹಾವಿದ್ಯಾಲಯ, ನಗರಸಭೆ ಕ್ರೀಡಾಂಗಣ ಹಾಗೂ ಈಜುಕೊಳ ಇದೆ. ಆಟಕ್ಕೆ ಹೋಗಲು ತೊಂದರೆ ಅನುಭವಿಸುವಂತಾಗಿದೆ ಎಂದು ಕ್ರೀಡಾಪಟುಗಳ ದೂರಾಗಿದೆ.
ಸುತ್ತಮುತ್ತಲೂ ನೆಹರು ಮಾರುಕಟ್ಟೆ ಕಾಳು ವ್ಯಾಪಾರಸ್ಥರ ಅಂಗಡಿಗಳು ಕೂಡ ಇದ್ದು, ಇಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿರುತ್ತದೆ. ರಸ್ತೆ ಬದಿಗೆ ಗ್ರಾಮೀಣ ಪ್ರದೇಶಗಳಿಂದ ಬಂದ ಟಂಟಂ ಗಾಡಿ, ಬೃಹತ್ ಲಾರಿಗಳನ್ನು ನಿಲ್ಲಿಸುತ್ತಾರೆ. ಇದರಿಂದ ವಾಹನಗಳ ಸಂಚಾರಕ್ಕೆ ಅನಾನುಕೂಲವಾಗಿದೆ.
ನಗರಸಭೆ ಅಣತಿ ದೂರದಲ್ಲಿ ಸಂಗಮವೃತ್ತದ ಸುತ್ತಲೂ ತೆಗ್ಗು ಗುಂಡಿಗಳು ಬಿದ್ದಿವೆ. ಅಂಚೆ ಕಚೇರಿ ರಸ್ತೆ, ದೊಡ್ಡಪೇಟೆ, ರಂಗನಾಥ ನಗರ, ವಿಭೂತಿ ಓಣಿ, ಗಂಗಾಪುರ ರಸ್ತೆ, ರೋಟರಿ ಸ್ಕೂಲ್ ಮತ್ತು ನಗರ ಠಾಣೆಗೆ ಹೋಗುವ ಪ್ರಮುಖ ವೃತ್ತವಾಗಿದೆ. ಈ ವೃತ್ತದ ಸುತ್ತಲೂ ರಸ್ತೆ ಹದಗೆಟ್ಟಿದೆ. ಇದರಿಂದ ರೈಲ್ವೆ ಸ್ಟೇಶನ್‌ಗೆ ಹೋಗುವ ಪ್ರಯಾಣಿಕರು, ವರ್ತಕರ ಸಮುದಾಯ ಭವನ ಮತ್ತು ಬ್ಯಾಂಕಿಗೆ ಹೋಗುವ ಜನತೆ ದಿನಾಲು ತೊಂದರೆ ಅನುಭವಿಸುವಂತಾಗಿದೆ ಎಂಬುದು ಸಾರ್ವಜನಿಕರು ದೂರಿದ್ದಾರೆ.
ಬೆಳಿಗ್ಗೆ ಮತ್ತು ಸಂಜೆ ಶಾಲಾ ಕಾಲೇಜಿಗಳಿಗೆ ಹೋಗುವ ಖಾಸಗಿ ಶಾಲಾ ಬಸ್, ಆಟೊ ಚಾಲಕರು ವಾಹನ ಚಲಾಯಿಸಲು ನರಕಯಾತನೆ ಅನುಭವಿಸುವಂತಾಗಿದೆ. ನಗರದಲ್ಲಿನ ಹದಗೆಟ್ಟ ರಸ್ತೆಗಳ ಬಗ್ಗೆ ನಗರಸಭೆ ಚುನಾಯಿತ ಪ್ರತಿನಿಧಿಗಳು ರಸ್ತೆ ಅಭಿವೃದ್ಧಿಗೆ ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸುವಂತಾಗಿದೆ.
ಆಟೊ ಚಾಲಕರ ಗೋಳು
ನಗರದ ರಸ್ತೆ ದುರಸ್ಥಿ ಬಗ್ಗೆ ನಗರಸಭೆಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಅಲ್ಲದೇ ತಹಶೀಲ್ದಾರ ಕಚೇರಿಯಲ್ಲಿ ಲೋಕಾಯುಕ್ತರಿಗೆ ಕೂಡ ಮನವಿ ಮಾಡಿದ್ದೇವೆ. ಆಟೊದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವಾಗ ಗುಂಡಿಗೆ ಬಿದ್ದರೆ ಪ್ರಯಾಣಿಕರಿಂದ ಚಾಲಕರು ಬೈಸಿಕೊಳ್ಳುವುದು ತಪ್ಪಿಲ್ಲ. ಮೇಡ್ಲೇರಿ ರಸ್ತೆ ಒಂದು ದುರಸ್ಥಿಯಾಗಿದ್ದು ಬಿಟ್ಟರೆ ನಗರದ ಯಾವ ರಸ್ತೆಗಳು ದುರಸ್ತಿ ಭಾಗ್ಯ ಕಂಡಿಲ್ಲ. ಮಳೆಗಾಲವಾಗಿದ್ದರಿಂದ ರಸ್ತೆ ತುಂಬ ಎಲ್ಲಿ ಬೇಕಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಹೊಸ ಬಡಾವಣೆಗಳಲ್ಲಿ ಹೋದರೆ ಬರೀ ಯುಜಿಡಿ 24/7 ಕುಡಿಯುವ ನೀರಿಗೆ ತೋಡಿದ ಗುಂಡಿಗಳು ತುಂಬಿಕೊಂಡಿವೆ. ‘ವೀರಶೈವ ಮುಕ್ತಿಧಾಮ ಗೇಟ್ ಬಳಿ ಮತ್ತು ಸಂಗಮ ವೃತ್ತದಿಂದ ಸ್ಟೇಶನ್ ರಸ್ತೆ ದುರಸ್ಥಿ ಕಾಮಗಾರಿ ಕೈಗೊಳ್ಳಲು ಶಾಸಕರು ಒಂದೇ ದಿನ ಭೂಮಿಪೂಜೆ ನೆರವೇರಿಸಿ ಬೋರ್ಡ್ ಹಾಕಿ ಆರು ತಿಂಗಳು ಕಳೆದರೂ ಇದುವರೆಗೂ ರಸ್ತೆ ದುರಸ್ಥಿಯಾಗಿಲ್ಲ’ ಎಂದು ರೈಲ್ವೆ ನಿಲ್ದಾಣ ಆಟೊ ಚಾಲಕರ ಸಂಘದ ಅಧ್ಯಕ್ಷ ನಾಗರಾಜ ಹಾರೋಗೊಪ್ಪ ದೂರಿದರು.
ನಗರಸಭೆ ಕ್ರೀಡಾಂಗಣಕ್ಕೆ ಹೋಗುವ ರಸ್ತೆ ಹದಗೆಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದ್ದು ನಿರಂತರ ಮಳೆಯಿಂದ ಅನಾನುಕೂಲವಾಗಿದೆ. ಆಗಸ್ಟ್ 15 ರೊಳಗೆ ರಸ್ತೆ ದುರಸ್ಥಿ ಕಾಮಗಾರಿ ಕೈಗೊಳ್ಳಲಾಗುವುದು-ಎಫ್.ಐ. ಇಂಗಳಗಿ, ಪೌರಾಯುಕ್ತರು ನಗರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.